×
Ad

ರಾಹುಲ್ ಗಾಂಧಿ ಹೇಳಿಕೆ ತಿರುಚಿದ ಝೀ ನ್ಯೂಸ್ ನಿರೂಪಕ ರೋಹಿತ್ ರಂಜನ್ ಬಂಧನ ?

Update: 2022-07-05 10:34 IST

ಹೊಸದಿಲ್ಲಿ,ಜು.5: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಹೇಳಿಕೆಯನ್ನು ತಿರುಚಿದ್ದ ವೀಡಿಯೊವನ್ನು ಪ್ರಸಾರಿಸಿದ್ದ ಝೀ ನ್ಯೂಸ್ನ ಸುದ್ದಿ ನಿರೂಪಕ ರೋಹಿತ ರಂಜನ್ರನ್ನು ಮಂಗಳವಾರ ದಿಲ್ಲಿ ಸಮೀಪದ ಅವರ ನಿವಾಸದಿಂದ ಬಂಧಿಸಲಾಗಿದೆ. ವೀಡಿಯೊ ಪ್ರಸಾರಿಸಿದ್ದಕ್ಕಾಗಿ ಝೀ ನ್ಯೂಸ್ ಈ ಹಿಂದೆ ಕ್ಷಮೆಯನ್ನು ಕೋರಿತ್ತು.

ರಂಜನ್ ರನ್ನು ವಶಕ್ಕೆ ತೆಗೆದುಕೊಳ್ಳಲು ಕಾಂಗ್ರೆಸ್ ಆಡಳಿತದ ಛತ್ತೀಸ್ಗಡ ಮತ್ತು ಬಿಜೆಪಿ ಆಡಳಿತದ ಉತ್ತರ ಪ್ರದೇಶರು ಝಟಾಪಟಿ ನಡೆಸಿದ್ದ ನಾಟಕೀಯ ದೃಶ್ಯಗಳು ವೀಡಿಯೊದಲ್ಲಿ ಸೆರೆಯಾಗಿವೆ. ಛತ್ತೀಸ್ಗಡ ಪೊಲೀಸರು ರಂಜನ್ರನ್ನು ಬಂಧಿಸಲು ಯತ್ನಿಸಿದ್ದರು,ಆದರೆ ಅದಕ್ಕೆ ಅಡ್ಡಿಯನ್ನುಂಟು ಮಾಡಿದ ಉ.ಪ್ರ.ಪೊಲೀಸರು ಅವರನ್ನು ತಮ್ಮೊಂದಿಗೆ ಕರೆದೊಯ್ದಿದ್ದಾರೆ.

ನಸುಕಿನ 5:30ರ ಸುಮಾರಿಗೆ ಛತ್ತೀಸ್ಗಡ ಪೊಲೀಸರು ತನ್ನ ನಿವಾಸಕ್ಕೆ ಆಗಮಿಸಿದ್ದಾಗ ರಂಜನ್ ಉ.ಪ್ರ.ಪೊಲೀಸರಿಗೆ ತುರ್ತು ಸಂದೇಶವೊಂದನ್ನು ಟ್ವೀಟಿಸಿದ್ದರು. ಛತ್ತೀಸ್ಗಡ ಪೊಲೀಸರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೆ ತನ್ನನ್ನು ಬಂಧಿಸಲು ಬಂದಿದ್ದಾರೆ ಎಂದು ಅವರು ಆರೋಪಿಸಿದ್ದರು.

ತಮ್ಮ ಬಳಿ ವಾರಂಟ್ ಇತ್ತು,ಹೀಗಾಗಿ ತಾವು ಯಾರಿಗೂ ಮಾಹಿತಿ ನೀಡುವ ಅಗತ್ಯವಿರಲಿಲ್ಲ ಎಂದು ಛತ್ತೀಸ್ಗಡ ಪೊಲೀಸರು ಉತ್ತರಿಸಿದ್ದಾರೆ. ಛತ್ತೀಸ್ಗಡ ಪೊಲೀಸರಿಂದ ರಂಜನ್ ಬಂಧನವನ್ನು ತಡೆದ ಗಾಝಿಯಾಬಾದ್ ಪೊಲೀಸರು ಅವರನ್ನು ಅಜ್ಞಾತ ಸ್ಥಳಕ್ಕೆ ಸಾಗಿಸಿದ್ದರು. ಅವರೀಗ ಉ.ಪ್ರ.ಪೊಲೀಸರ ವಶದಲ್ಲಿದ್ದು,ತುಲನಾತ್ಮಕವಾಗಿ ಲಘು,ಜಾಮೀನಿಗೆ ಅರ್ಹ ಆರೋಪಗಳನ್ನು ಅವರ ಮೇಲೆ ಹೊರಿಸಲಾಗಿದೆ.

ತನ್ನ ವಯನಾಡ್ ಕಚೇರಿಯ ಮೇಲೆ ಎಸ್ಎಫ್ಐ ಕಾರ್ಯಕರ್ತರ ಹಿಂಸಾಚಾರ ಕುರಿತು ರಾಹುಲ್ ನೀಡಿದ್ದ ಹೇಳಿಕೆಯನ್ನು ಪ್ರಸಾರಿಸಿದ್ದ ರಂಜನ್, ಅದನ್ನು ಉದಯಪುರದಲ್ಲಿ ಕನ್ಹಯಲಾಲ್ ಅವರ ಘೋರ ಹತ್ಯೆಯ ಕುರಿತು ಹೇಳಿಕೆಯಂತೆ ಕಂಡು ಬರು ವಂತೆ ತಿರುಚಿದ್ದರು ಎಂದು ಆರೋಪಿಸಿ ಕಾಂಗ್ರೆಸ್ ಆಡಳಿತದ ರಾಜಸ್ಥಾನ ಮತ್ತು ಛತ್ತೀಸ್ಗಡಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ವೀಡಿಯೊವನ್ನು ರಾಜ್ಯವರ್ಧನ ರಾಠೋಡ್ ಮತ್ತು ಇತರ ಬಿಜೆಪಿ ನಾಯಕರು ಹಂಚಿಕೊಂಡಿದ್ದು,ಅವರನ್ನೂ ದೂರಿನಲ್ಲಿ ಹೆಸರಿಸಲಾಗಿತ್ತು. 

ತಪ್ಪು ವರದಿಯನ್ನು ಪ್ರಸಾರಿಸಿದ್ದಕ್ಕಾಗಿ ಟಿವಿ ವಾಹಿನಿಯನ್ನು ಟೀಕಿಸಿದ್ದ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರು, ‘ವಯನಾಡಿನಲ್ಲಿ ತನ್ನ ಕಚೇರಿಯ ಮೇಲೆ ದಾಳಿ ನಡೆಸಿದ ಮಕ್ಕಳು ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಅವರು ಮಕ್ಕಳು,ಅವರನ್ನು ಕ್ಷಮಿಸಿ ಎಂದು ರಾಹುಲ್ ಹೇಳಿದ್ದರು. ಆದರೆ ಟಿವಿ ವಾಹಿನಿ ಮತ್ತು ನಿರೂಪಕರು,ಕನ್ಹಯಾಲಾಲ್ರನ್ನು ಕೊಂದವರು ಮಕ್ಕಳು ಮತ್ತು ಅವರನ್ನು ಕ್ಷಮಿಸಬೇಕು ಎಂದು ಹೇಳಿದಂತೆ ತೋರಿಸಿದ್ದಾರೆ ’ಎಂದು ಸ್ಪಷ್ಟಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News