×
Ad

ವಿಂಡ್‌ಶೀಲ್ಡ್ ನಲ್ಲಿ ಬಿರುಕು: ಇಂದು ತುರ್ತು ಭೂ ಸ್ಪರ್ಷ ಮಾಡಿದ ಸ್ಪೈಸ್‌ಜೆಟ್‌ನ ಎರಡನೇ ವಿಮಾನ

Update: 2022-07-05 21:41 IST

ಹೊಸದಿಲ್ಲಿ: ಸ್ಪೈಸ್ ಜೆಟ್ ವಿಮಾನವೊಂದು ತಾಂತ್ರಿಕ ದೋಷದಿಂದ ಅನಿರೀಕ್ಷಿತವಾಗಿ ಲ್ಯಾಂಡ್ ಆಗಿದೆ. ಕಾಂಡ್ಲಾದಿಂದ ಮುಂಬೈಗೆ ಹೊರಟ ವಿಮಾನದ ವಿಂಡ್‌ಶೀಲ್ಡ್‌ನಲ್ಲಿ ಬಿರುಕು ಮೂಡಿದ್ದು, ಇದರಿಂದಾಗಿ ವಿಮಾನವನ್ನು ಲ್ಯಾಂಡ್ ಮಾಡಲಾಗಿದೆ.

“ಜುಲೈ 5, 2022 ರಂದು ಕಾಂಡ್ಲಾ-ಮುಂಬೈಗೆ ಹೊರಟಿದ್ದ Q400 ವಿಮಾನದ     P2 ಬದಿಯ ವಿಂಡ್‌ಶೀಲ್ಡ್ ಹೊರ ಫಲಕದಲ್ಲಿ ಬಿರುಕು ಕಂಡುಬಂದಿದ್ದು,  ವಿಮಾನವನ್ನು ಸುರಕ್ಷಿತವಾಗಿ ಮುಂಬೈಗೆ ಇಳಿಸಲಾಯಿತು.” ಎಂದು ಸ್ಪೈಸ್‌ ಜೆಟ್‌ ಸಂಸ್ಥೆ ತಿಳಿಸಿದೆ.

ಇದು ಈ ದಿನದಲ್ಲಿ  ಸ್ಪೈಸ್‌ಜೆಟ್‌ ವಿಮಾನದಲ್ಲಿನ ಅಸಮರ್ಪಕ ನಿರ್ವಹಣೆಯ ಎರಡನೇ ಪ್ರಕರಣ ಇದಾಗಿದೆ. ಬೆಳಿಗ್ಗೆ ದಿಲ್ಲಿಯಿಂದ ದುಬೈಗೆ ಹೊರಟಿದ್ದ ವಿಮಾನವು ಪಾಕಿಸ್ತಾನದ ಕರಾಚಿಯಲ್ಲಿ ತುರ್ತು ಭೂಸ್ಪರ್ಷ ಮಾಡಿತ್ತು. ಸ್ಪೈಸ್ ಜೆಟ್ ಬಿ-737 ವಿಮಾನದಲ್ಲಿ ಇಂಧನ ಕೊರತೆಯಿಂದಾಗಿ ಈ ಲ್ಯಾಂಡಿಂಗ್ ಅನ್ನು ಮಾಡಲಾಗಿತ್ತು.

 ಕಳೆದ ಒಂದು ತಿಂಗಳಲ್ಲಿ ಸ್ಪೈಸ್‌ಜೆಟ್ ವಿಮಾನದ ಅಸಮರ್ಪಕ ಕಾರ್ಯದ ಹಲವಾರು ಪ್ರಕರಣಗಳು ಮುನ್ನೆಲೆಗೆ ಬಂದಿದೆ.   ಕಳೆದ  ಶನಿವಾರ, ಜಬಲ್‌ಪುರಕ್ಕೆ ಹೊರಟಿದ್ದ ಸ್ಪೈಸ್‌ಜೆಟ್ ವಿಮಾನ ದೆಹಲಿಗೆ ಮರಳಿತ್ತು. 5,000 ಅಡಿ ಎತ್ತರದಲ್ಲಿ ಹಾರಾಡುತ್ತಿರುವಾಗ ವಿಮಾನದ ಕ್ಯಾಬಿನ್‌ನಲ್ಲಿ ಹೊಗೆ ತುಂಬಿತ್ತು. ಕ್ಯೂ-400 ವಿಮಾನದ ಎಂಜಿನ್ ಒಂದರಲ್ಲಿ ತೈಲ ಸೋರಿಕೆಯಿಂದ ಹೊಗೆ ಉಂಟಾಗಿದೆ ಎಂದು ಡಿಜಿಸಿಎ ನಂತರ ತಿಳಿಸಿತ್ತು.

ಅದೇ ಸಮಯದಲ್ಲಿ, ಜೂನ್‌ನಲ್ಲಿ, ಸ್ಪೈಸ್‌ಜೆಟ್ ವಿಮಾನವೊಂದರಲ್ಲಿ ಟೇಕ್ ಆಫ್ ಆದ ನಂತರ ಬೆಂಕಿ ಕಾಣಿಸಿಕೊಂಡಿತ್ತು. ಪಾಟ್ನಾ ವಿಮಾನ ನಿಲ್ದಾಣದಿಂದ ದಿಲ್ಲಿಗೆ ತೆರಳುತ್ತಿದ್ದ ವೇಳೆ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.  185 ಪ್ರಯಾಣಿಕರಿದ್ದ ವಿಮಾನವನ್ನು ಬಳಿಕ ತುರ್ತು ಭೂಸ್ಪರ್ಷ ಮಾಡಲಾಗಿತ್ತು. ಸ್ಪೈಸ್ ಜೆಟ್ ವಿಮಾನಗಳಲ್ಲಿ ಇಂತಹ ಘಟನೆಗಳು ಮುನ್ನೆಲೆಗೆ ಬರುತ್ತಿರುವುದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಸುರಕ್ಷತೆಯ ಬಗ್ಗೆ ಹಲವಾರು ಪ್ರಶ್ನೆಗಳು ಎದ್ದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News