ದ್ರೌಪದಿ ಮುರ್ಮು ಆರೆಸ್ಸೆಸ್ ಕಚೇರಿಯಲ್ಲಿರುವಂತೆ ತೋರಿಸುವ ತಿರುಚಿದ ಫೋಟೋ ಪೋಸ್ಟ್ ಮಾಡಿದ ಪ್ರಶಾಂತ್ ಭೂಷಣ್

Update: 2022-07-06 10:36 GMT

ಹೊಸದಿಲ್ಲಿ: ಎನ್‍ಡಿಎ ಮೈತ್ರಿಕೂಟದ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಮತ್ತು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರಿಬ್ಬರೂ ಒಂದೇ ಚಿತ್ರದಲ್ಲಿ ಕಾಣಿಸುವಂತೆ ಮಾಡಿರುವ ತಿರುಚಿದ ಚಿತ್ರವನ್ನು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಗುರುವಾರ ಟ್ವೀಟ್ ಮಾಡಿದ್ದಾರೆ.

ಮುರ್ಮು ಅವರು ನಾಗ್ಪುರ್‍ನಲ್ಲಿರುವ ಆರೆಸ್ಸೆಸ್ ಮುಖ್ಯ ಕಾರ್ಯಾಲಯಕ್ಕೆ ಭೇಟಿ ನೀಡಿದ್ದಾರೆಂದು ಹೇಳಿಕೊಂಡು ಭೂಷಣ್ "ಆಕೆ ಕೇವಲ ರಬ್ಬರ್ ಸ್ಟ್ಯಾಂಪ್ ಆಗುತ್ತಾರೆ ಹಾಗೂ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂಬುದರ ಕುರಿತು ಏನಾದರೂ ಸಂಶಯವಿದೆಯೇ?'' ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.

ವಾಸ್ತವವೇನು?

ವಾಸ್ತವವಾಗಿ ಭೂಷಣ್ ಅವರು ಟ್ವೀಟ್ ಮಾಡಿದ ಚಿತ್ರವನ್ನು ಎರಡು ಪ್ರತ್ಯೇಕ ಸಂದರ್ಭಗಳ ಚಿತ್ರಗಳನ್ನು ಒಗ್ಗೂಡಿಸಿ ಮಾಡಲಾಗಿದೆ.

ಭಾಗ್ವತ್ ಅವರು ಮಾರ್ಚ್‍ನಲ್ಲಿ ಆರೆಸ್ಸೆಸ್‍ನ ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ಭಾಗವಹಿಸಿದ್ದ ಸಂದರ್ಭದ ಫೋಟೋ ಒಂದಾಗಿದ್ದರೆ ಇನ್ನೊಂದು ಎರಡು ವರ್ಷಗಳ ಹಿಂದೆ ಮುರ್ಮು ಅವರು ಜಾರ್ಖಂಡ್ ರಾಜ್ಯಪಾಲೆಯಾಗಿದ್ದ ಸಂದರ್ಭ ಮುಖ್ಯಮಂತ್ರಿ ಹೇಮಂತ್ ಸೊರೇನ್ ತಮ್ಮ ಅಧಿಕಾರಾವಧಿಯ ಒಂದು ವರ್ಷ ಪೂರೈಕೆ ಸಂದರ್ಭ ಅವರಿಗೆ ನಮಿಸುತ್ತಿರುವುದು ಕಾಣಿಸುತ್ತದೆ. ಈ ಚಿತ್ರದಲ್ಲಿ ಮುರ್ಮು ಕಾಣಿಸಿಕೊಂಡಿರುವ ಭಾಗವನ್ನು ಕ್ರಾಪ್ ಮಾಡಿ ಭಾಗ್ವತ್ ಇರುವ ಚಿತ್ರಕ್ಕೆ ಸೇರಿಸಲಾಗಿದೆ.

(Photo: Twitter/@RSSorg)

(Photo: theprint.in)

ಪ್ರಶಾಂತ್ ಭೂಷಣ್ ಅವರ ಟ್ವೀಟ್ ಈಗ ಡಿಲೀಟ್ ಆಗಿದೆಯಾದರೂ ಅದರಲ್ಲಿರುವ ಚಿತ್ರ ವಾಸ್ತವಿಕ ಎಂದು ನಂಬಿ ಅದಾಗಲೇ ಹಲವರು ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದರು.

ಕಳೆದ ವರ್ಷ ಭೂಷಣ್ ಅವರು ಕೋವಿಡ್ ಲಸಿಕೆಯ ಸುರಕ್ಷತೆ ಮತ್ತು ಅದರ ಪರಿಣಾಮಕಾರಿತ್ವವನ್ನು ಪ್ರಶ್ನಿಸಿ ಮಾಡಿದ್ದ ಟ್ವೀಟ್ ಅನ್ನು ಟ್ವಿಟರ್ 'ದಾರಿತಪ್ಪಿಸುವಂತಹದ್ದು' (ಮಿಸ್ಲೀಡಿಂಗ್) ಎಂದು ಬಣ್ಣಿಸಿ ಫ್ಲ್ಯಾಗ್ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News