ಪದೇ ಪದೇ ತಾಂತ್ರಿಕ ದೋಷ: ಸ್ಪೈಸ್‌ಜೆಟ್‌ಗೆ ಶೋಕಾಸ್ ನೋಟಿಸ್ ನೀಡಿದ ಡಿಜಿಸಿಎ

Update: 2022-07-06 14:41 GMT
Photo:PTI

ಹೊಸದಿಲ್ಲಿ,ಜು.7: ಕಳೆದ 18 ದಿನಗಳಲ್ಲಿ ಸ್ಪೈಸ್‌ಜೆಟ್ ವಿಮಾನಗಳಲ್ಲಿ ತಾಂತ್ರಿಕ ದೋಷಗಳ ಎಂಟು ಘಟನೆಗಳು ವರದಿಯಾದ ಬಳಿಕ ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ)ವು ಸಂಸ್ಥೆಗೆ ಶೋಕಾಸ್ ನೋಟಿಸ್‌ನ್ನು ಹೊರಡಿಸಿದ್ದು,ಉತ್ತರಿಸಲು ಮೂರು ವಾರಗಳ ಕಾಲಾವಕಾಶವನ್ನು ನೀಡಿದೆ.

ಮಂಗಳವಾರ ಒಂದೇ ದಿನ ಸ್ಪೈಸ್‌ಜೆಟ್‌ನ ಎರಡು ವಿಮಾನಗಳಲ್ಲಿ ತಾಂತ್ರಿಕ ದೋಷಗಳು ಕಾಣಿಸಿಕೊಂಡಿದ್ದವು. ಬೋಯಿಂಗ್ 737 ಸರಕು ಸಾಗಣೆ ವಿಮಾನವು ಕೋಲ್ಕತಾದಿಂದ ಚೀನಾದ ಚಾಂಗ್‌ಕಿಂಗ್‌ಗೆ ಹಾರಾಟ ಆರಂಭಿಸಿದ ಕೆಲವೇ ಸಮಯದಲ್ಲಿ ಹವಾಮಾನದ ಮಾಹಿತಿ ನೀಡುವ ರಾಡಾರ್ ಸ್ಥಗಿತಗೊಂಡಿತ್ತು. ಪೈಲಟ್ ವಾಪಸ್ ಬರಲು ನಿರ್ಧರಿಸಿದ್ದು,ವಿಮಾನವು ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿತ್ತು. ಇದಕ್ಕೂ ಮುನ್ನ ದಿಲ್ಲಿಯಿಂದ ದುಬೈಗೆ ಪ್ರಯಾಣಿಸುತ್ತಿದ್ದ ವಿಮಾನದ ಇಂಡಿಕೇಟರ್ ದೀಪವು ಸಮರ್ಪಕವಾಗಿ ಕಾರ್ಯ ನಿರ್ವಹಿಸದ್ದರಿಂದ ಪಾಕಿಸ್ತಾನದ ಕರಾಚಿಯಲ್ಲಿ ಸುರಕ್ಷಿತವಾಗಿ ಇಳಿದಿತ್ತು ಮತ್ತು ತುರ್ತು ಸ್ಥಿತಿಯನ್ನು ಘೋಷಿಸಿರಲಿಲ್ಲ.

ಘಟನೆಗಳ ಪುನರ್‌ಪರಿಶೀಲನೆಯು ಕಳಪೆ ಆಂತರಿಕ ಸುರಕ್ಷತಾ ಮೇಲ್ವಿಚಾರಣೆ ಮತ್ತು ಅಸಮರ್ಪಕ ನಿರ್ವಹಣಾ ಕ್ರಮಗಳು ಸುರಕ್ಷತಾ ಮಟ್ಟ ಕುಸಿಯಲು ಕಾರಣವಾಗಿವೆ ಎನ್ನುವುದನ್ನು ಸೂಚಿಸಿದೆ. ಸಂಸ್ಥೆಯು ಕ್ಯಾಷ್ ಆ್ಯಂಡ್ ಕ್ಯಾರಿ ಮಾದರಿಯಲ್ಲಿ ಕಾರ್ಯಾಚರಿಸುತ್ತಿದೆ ಮತ್ತು ಪೂರೈಕೆದಾರರು/ಅನುಮೋದಿತ ಮಾರಾಟಗಾರರಿಗೆ ನಿಯಮಿತವಾಗಿ ಹಣವನ್ನು ಪಾವತಿಸುತ್ತಿಲ್ಲ ಎನ್ನುವುದು 2021 ಸೆಪ್ಟಂಬರ್‌ನಲ್ಲಿ ಸ್ಪೈಸ್‌ಜೆಟ್‌ನ ಹಣಕಾಸು ಸ್ಥಿತಿಯ ಕುರಿತು ಡಿಜಿಸಿಎ ನಡೆಸಿದ್ದ ವೌಲ್ಯಮಾಪನದಲ್ಲಿ ಬೆಳಕಿಗೆ ಬಂದಿತ್ತು. ಇದು ಬಿಡಿಭಾಗಗಳ ಕೊರತೆಗೆ ಕಾರಣವಾಗಿದೆ ಎಂದು ಹೇಳಿರುವ ಡಿಜಿಸಿಎ,ವಿಮಾನ ನಿಯಮಗಳಡಿ ಸುರಕ್ಷಿತ,ದಕ್ಷ ಮತ್ತು ವಿಶ್ವಾಸಾರ್ಹ ವಾಯುಸೇವೆಗಳನ್ನು ಒದಗಿಸುವಲ್ಲಿ ಸಂಸ್ಥೆಯು ವಿಫಲಗೊಂಡಿದೆ ಎಂದಿದೆ.

ಡಿಜಿಸಿಎ ನೋಟಿಸ್‌ಗೆ ಪ್ರತಿಕ್ರಿಯಿಸಿರುವ ವಾಯುಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಅವರು ‘ಪ್ರಯಾಣಿಕರ ಸುರಕ್ಷತೆ ಅತ್ಯಂತ ಮುಖ್ಯವಾಗಿದೆ. ಸುರಕ್ಷತೆಗೆ ಅಡ್ಡಿಯಾಗುವ ಸಣ್ಣ ದೋಷ ಕಂಡುಬಂದರೂ ಸಮಗ್ರ ತನಿಖೆಯನ್ನು ನಡೆಸಲಾಗುವುದು ಮತ್ತು ದೋಷವನ್ನು ಬಗೆಹರಿಸಲಾಗುವುದು’ ಎಂದು ಟ್ವೀಟಿಸಿದ್ದಾರೆ.

ಜು.2ರಂದು ಜಬಲ್ಪುರಕ್ಕೆ ಪ್ರಯಾಣಿಸುತ್ತಿದ್ದ ಸ್ಪೈಸ್ ಜೆಟ್ ವಿಮಾನದಲ್ಲಿ ಹೊಗೆ ಕಾಣಿಸಿಕೊಂಡ ಬಳಿಕ ದಿಲ್ಲಿಗೆ ವಾಪಸಾಗಿತ್ತು. ಜೂ.24 ಮತ್ತು 25ರಂದು ಟೇಕ್ ಆಫ್ ಆಗುವಾಗ ಎರಡು ಪ್ರತ್ಯೇಕ ವಿಮಾನಗಳ ಫ್ಯೂಸಲೇಜ್ (ವಿಮಾನದ ಶರೀರ) ಬಾಗಿಲಿನ ಎಚ್ಚರಿಕೆ ದೀಪಗಳು ಬೆಳಗಿದ ಬಳಿಕ ಅವು ನಿಲ್ದಾಣಕ್ಕೆ ಮರಳಿದ್ದವು. ಜೂ.19ರಂದು ಪಾಟ್ನಾದಿಂದ ದಿಲ್ಲಿಗೆ ಟೇಕ್ ಆಫ್ ಆದ ಬಳಿಕ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ವಿಮಾನವು ತುರ್ತು ಭೂಸ್ಪರ್ಶ ಮಾಡಿತ್ತು. ಅದೇ ದಿನ ಜಬಲ್ಪುರಕ್ಕೆ ತೆರಳುತ್ತಿದ್ದ ವಿಮಾನದಲ್ಲಿ ಕ್ಯಾಬಿನ್ ಒತ್ತಡ ಸಮಸ್ಯೆಯಿಂದಾಗಿ ಅದು ದಿಲ್ಲಿಗೆ ಮರಳುವಂತಾಗಿತ್ತು.

ಸ್ಪೈಸ್ ಜೆಟ್ ಕಳೆದ ಮೂರು ವರ್ಷಗಳಿಂದಲೂ ನಷ್ಟದಲ್ಲಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News