ದಾನಿಗಳ ಮಾಹಿತಿಯನ್ನು 'ರೇಝರ್ ಪೇ' ಪೊಲೀಸರೊಂದಿಗೆ ಹಂಚಿಕೊಂಡಿದೆ: ಆಲ್ಟ್ ನ್ಯೂಸ್ ಆರೋಪ

Update: 2022-07-06 10:57 GMT

ಹೊಸದಿಲ್ಲಿ: ತನಗೆ ಮಾಹಿತಿ ನೀಡದೆಯೇ ತನ್ನ ಪಾವತಿ ಗೇಟ್‍ವೇ ಆಗಿರುವ 'ರೇಝರ್ ಪೇ' ಆಲ್ಟ್ ನ್ಯೂಸ್ ದೇಣಿಗೆಗಳನ್ನು ಪಡೆಯುವ ದಾನಿಗಳ ಕುರಿತ ಡೇಟಾವನ್ನು ಪೊಲೀಸರೊಂದಿಗೆ ಹಂಚಿಕೊಂಡಿದೆ ಎಂದು ಸಂಸ್ಥೆ ಆರೋಪಿಸಿದೆ.

ಇದಕ್ಕೆ ಪ್ರತಿಕ್ರಿಯಿಸಿದ 'ರೇಝರ್ ಪೇ' ತನಗೆ ಕ್ರಿಮಿನಲ್ ದಂಡ ಸಂಹಿತೆಯ ಸೆಕ್ಷನ್ 91 ಅನ್ವಯ ಸಂಬಂಧಿತ ಪ್ರಾಧಿಕಾರಗಳಿಂದ ನೋಟಿಸ್ ಬಂದಿತ್ತು ಹಾಗೂ ಕಂಪೆನಿ ಅದಕ್ಕೆ ಬದ್ಧವಾಗಬೇಕಾಯಿತು ಎಂದು ಹೇಳಿದೆ. ಈ ಸೆಕ್ಷನ್ ಅನ್ವಯ ಯಾವುದೇ ಪ್ರಕರಣ ಸಂಬಂಧಿ ದಾಖಲೆಗಳನ್ನು ಹಾಜರುಪಡಿಸುವಂತೆ ಕೋರ್ಟ್ ಅಥವಾ ಪೊಲೀಸರು ಒಂದು ಸಂಸ್ಥೆಗೆ ಹೇಳಬಹುದಾಗಿದೆ.

ವಿದೇಶಿ ದೇಣಿಗೆ ಸಂಬಂಧಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆಲ್ಟ್ ನ್ಯೂಸ್ ಸಹಸ್ಥಾಪಕ ಮುಹಮ್ಮದ್ ಝುಬೈರ್ ವಿರುದ್ಧ ದಿಲ್ಲಿ ಪೊಲೀಸರು ಆರೋಪಿಸಿದ ನಂತರ ಈ ಹೇಳಿಕೆ ಬಂದಿದೆ. ಧಾರ್ಮಿಕ ಭಾವನೆಗಳನ್ನು ಟ್ವೀಟ್ ಮೂಲಕ ನೋಯಿಸಿದ್ದಾರೆಂಬ ಆರೋಪದ ಮೇಲೆ ಝುಬೈರ್ ಸದ್ಯ ಬಂಧನದಲ್ಲಿದ್ದಾರೆ. ನಂತರ ಕ್ರಮಿನಲ್ ಸಂಚು, ವಿದೇಶಿ ದೇಣಿಗೆ ನಿಯಮಗಳ ಉಲ್ಲಂಘನೆ ಆರೋಪಗಳನ್ನೂ ಅವರ ಮೇಲೆ ಹೊರಿಸಲಾಗಿತ್ತು.

ಆದರೆ ವಿದೇಶಿ ದೇಣಿಗೆ ನಿಯಮಗಳ ಉಲ್ಲಂಘನೆ ಆರೋಪವನ್ನು ಆಲ್ಟ್ ನ್ಯೂಸ್ ಈಗಾಗಲೇ ನಿರಾಕರಿಸಿದೆಯಲ್ಲದೆ ತಾನು ದೇಣಿಗೆಗಳನ್ನು ಸ್ವೀಕರಿಸಲು ಬಳಸುವ ಪ್ಲಾಟ್‍ಫಾರ್ಮ್ ದೇಶದ ಹೊರಗಿನಿಂದ ದೇಣಿಗೆ ಸ್ವೀಕರಿಸಲು ಅನುಮತಿಸುವುದಿಲ್ಲ ಎಂದು ತಿಳಿಸಿತ್ತು.

ತನ್ನ ದಾನಿಗಳ ಮಾಹಿತಿಯನ್ನು 'ರೇಝರ್ ಪೇ' ಪ್ರಾಧಿಕಾರಗಳೊಂದಿಗೆ ಹಂಚಿಕೊಂಡಿದೆ ಎಂಬ ಆಲ್ಟ್ ನ್ಯೂಸ್ ಆರೋಪಕ್ಕೆ 'ರೇಝರ್ ಪೇ' ನೇರವಾಗಿ ಪ್ರತಿಕ್ರಿಯಿಸದೇ ಇದ್ದರೂ ತಾನು ಭಾರತದ ಎಲ್ಲಾ ನಿಯಮಗಳಿಗೆ ಬದ್ಧವಾಗಿರುವುದಾಗಿ ಹಾಗೂ ಗ್ರಾಹಕರ ಡೇಟಾ ಸುರಕ್ಷತೆಗೆ ಗರಿಷ್ಠ ಕ್ರಮ ಕೈಗೊಳ್ಳುತ್ತಿರುವುದಾಗಿ ತಿಳಿಸಿದೆ.

ಭಾರತೀಯ ಬ್ಯಾಂಕ್‍ಗಳ ಮುಖಾಂತರ ಮಾತ್ರ ಆಲ್ಟ್ ನ್ಯೂಸ್‍ಗೆ ದೇಣಿಗೆಗಳನ್ನು ನೀಡಬಹುದು ಹಾಗೂ ವಿದೇಶಿ ಕ್ರೆಡಿಟ್‍ಕಾರ್ಡ್‍ಗಳು ರೇಝರ್‍ಪೇ ಬ್ಯಾಕ್ ಎಂಡ್‍ನಲ್ಲಿ ಸಕ್ರಿಯಗೊಳಿಸಲಾಗಿಲ್ಲ ಎಂದು ಆಲ್ಟ್ ನ್ಯೂಸ್ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News