ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಿಬಿಟ್ಟವರ ವಿರುದ್ಧ ಕ್ರಮಕ್ಕೆ ಉಡುಪಿ ಜಿಲ್ಲಾಡಳಿತದಿಂದ ದೂರು

Update: 2022-07-06 13:57 GMT

ಉಡುಪಿ: ಹವಾಮಾನ ಇಲಾಖೆಯ ಮುನ್ಸೂಚನೆ ಹಾಗೂ  ಜಿಲ್ಲೆಯಲ್ಲಿ ಆಗುತ್ತಿರುವ ಮಳೆಯ ಪರಿಸ್ಥಿತಿಯ ಅನುಗುಣವಾಗಿ ಶಾಲಾ ಕಾಲೇಜುಗಳಿಗೆ ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು ರಜೆಯನ್ನು ಘೋಷಿಸಿ, ಆದೇಶಿಸುತ್ತಿರುವ ಆದೇಶ ಪ್ರತಿಯಲ್ಲಿನ ದಿನಾಂಕಗಳನ್ನು ತಿದ್ದುಪಡಿ ಮಾಡಿ, ಸಾಮಾಜಿಕ ಜಾಲ ತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿರುವ ಕಿಡಿಗೇಡಿಗಳ ವಿರುದ್ಧ ಕಾನೂನಿನಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ನಗರದ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದೆ.

ಜಿಲ್ಲಾ ದಂಡಾಧಿಕಾರಿಗಳು ದಿನಾಂಕ.1-7-2022 ರಂದು ಜಿಲ್ಲಾ ವ್ಯಾಪ್ತಿಯಲ್ಲಿ ಮಳೆ ಹೆಚ್ಚಳವಾಗಿರುವ ಕಾರಣ ಹಾಗೂ ಹವಾಮಾನ ಇಲಾಖೆಯ ಮುನ್ಸೂಚನೆ ಆಧರಿಸಿ ರಜೆಯನ್ನು ಘೋಷಿಸಿ 2022ರ ಜೂನ್ 30 ರಂದು ಸಂಜೆ ಹೊರಡಿಸಿದ್ದ ಆದೇಶದ ಪ್ರತಿಯನ್ನು ಕಿಡಿಗೇಡಿಗಳು ಆದೇಶದ ದಿನಾಂಕವನ್ನು ಡಿಜಿಟಲೀಕರಣದಿಂದ ತಿದ್ದುಪಡಿ ಮಾಡಿ 5-7-2022 ರಂದು ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂಬ ಆದೇಶದ ಕಾನೂನುಬಾಹಿರ ನಕಲಿ ತಿದ್ದುಪಡಿ ಪತ್ರವನ್ನು 4-7-2022 ರ ಸಂಜೆ ಸಾಮಾಜಿಕ ಜಾಲತಾಣದಲ್ಲಿ ಪ್ರಸರಣಗೊಳಿಸಿ ಸಾರ್ವಜನಿಕರಲ್ಲಿ ಗೊಂದಲ ಸೃಷ್ಠಿಸಿರುತ್ತಾರೆ. ಆದರೆ ಅಂದು ಸಂಜೆ ಹೆಬ್ರಿ ತಾಲೂಕಿನ ವ್ಯಾಪ್ತಿಗೆ ಮಾತ್ರ ಜಿಲ್ಲಾಡಳಿತದಿಂದ ರಜೆ ಘೋಷಿಸಲಾಗಿತ್ತು.

ಇಂತಹ ಸಮಾಜಘಾತುಕ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ನಡೆಸಿ, ಕಾನೂನಿನಡಿ ಕ್ರಮ ಕೈಗೊಳ್ಳಲು ಜಿಲ್ಲಾ ಸೆನ್ ಪೊಲೀಸ್ ಠಾಣೆಗೆ ದೂರು ದಾಖಲಿಸಲಾಗಿದ್ದು, ಈ ಬಗ್ಗೆ ಎಫ್.ಐ.ಆರ್. ದಾಖಲಾಗಿದೆ. ಈ ಪ್ರಕರಣ ಬಗ್ಗೆ ಅನುಮಾನಾಸ್ಪದ ವ್ಯಕ್ತಿಗಳಿದ್ದಲ್ಲಿ ಮಾಹಿತಿಯನ್ನು ಸೆನ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ದೂ.ಸಂ.9480805410 ಗೆ ನೀಡುವಂತೆ ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News