ಅತ್ಯಾಚಾರ ಪ್ರಕರಣ:ನಟ ವಿಜಯ ಬಾಬುಗೆ ಮಧ್ಯಂತರ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನಕಾರ

Update: 2022-07-06 16:11 GMT
PHOTO:@Vijaybabuofficial/Facebook

ಹೊಸದಿಲ್ಲಿ,ಜು.6: ಅತ್ಯಾಚಾರ ಪ್ರಕರಣದಲ್ಲಿ ಮಲಯಾಳಂ ನಟ ವಿಜಯ ಬಾಬು ಅವರಿಗೆ ಕೇರಳ ಉಚ್ಚ ನ್ಯಾಯಾಲಯವು ನೀಡಿರುವ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಲು ಸರ್ವೋಚ್ಚ ನ್ಯಾಯಾಲಯವು ಬುಧವಾರ ನಿರಾಕರಿಸಿದೆ.

 ಕೇರಳ ಉಚ್ಚ ನ್ಯಾಯಾಲಯವು ಜೂ.22ರಂದು ಬಾಬುಗೆ ನೀಡಿದ್ದ ಜಾಮೀನನ್ನು ಪ್ರಕರಣದಲ್ಲಿ ದೂರುದಾರರಾಗಿರುವ ನಟಿ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.

ಬುಧವಾರ ವಿಚಾರಣೆ ಸಂದರ್ಭ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಜೆ.ಕೆ.ಮಹೇಶ್ವರಿ ಅವರ ಪೀಠವು ಜಾಮೀನು ಆದೇಶದಲ್ಲಿ ತಾನು ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಿಳಿಸಿತು. ಆದಾಗ್ಯೂ ನ್ಯಾಯಾಧೀಶರು ಜು.3ರ ಬಳಿಕ ಪ್ರಕರಣದಲ್ಲಿ ಬಾಬುರನ್ನು ವಿಚಾರಣೆಗೆ ಒಳಪಡಿಸುವುದರಿಂದ ಪೊಲೀಸರನ್ನು ನಿರ್ಬಂಧಿಸಿದ್ದ ಇನ್ನೊಂದು ಆದೇಶವನ್ನು ರದ್ದುಗೊಳಿಸಿದರು.

ಮಧ್ಯಂತರ ಜಾಮೀನು ಮಂಜೂರು ಮಾಡುವಾಗ ಜೂ.27ರಂದು ತನಿಖಾಧಿಕಾರಿಯೆದುರು ಶರಣಾಗುವಂತೆ ಬಾಬುಗೆ ಸೂಚಿಸಿದ್ದ ಉಚ್ಚ ನ್ಯಾಯಾಲಯವು ವಿಚಾರಣೆಯನ್ನು ಜು.3ರೊಳಗೆ ಪೂರ್ಣಗೊಳಿಸುವಂತೆ ಪೊಲೀಸರಿಗೆ ನಿರ್ದೇಶ ನೀಡಿತ್ತು.

ತನ್ನ ಕಕ್ಷಿದಾರರು ಚಿತ್ರರಂಗಕ್ಕೆ ಹೊಸಬರಾಗಿದ್ದಾರೆ ಮತ್ತು ಬಾಬು ಅವರಂತಹ ಉನ್ನತ ಸ್ತರದಲ್ಲಿರುವ ವ್ಯಕ್ತಿಯ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲು ಸಾಧ್ಯವಿಲ್ಲ ಎಂದು ವಿಚಾರಣೆ ಸಂದರ್ಭ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದ ದೂರುದಾರರ ಪರ ವಕೀಲ ಆರ್.ಬಸಂತ್ ಅವರು,ನಟಿಯ ಮೇಲೆ ಒತ್ತಡ ಹೇರಲು ಬಾಬು ಫೇಸ್‌ಬುಕ್‌ನಲ್ಲಿ ಅವರ ಗುರುತನ್ನು ಬಹಿರಂಗಗೊಳಿಸಿದ್ದರು ಎಂದು ವಾದಿಸಿದರು.

ರಾಜ್ಯದ ಪರ ನ್ಯಾಯವಾದಿ ಜೈದೀಪ ಗುಪ್ತಾ ಅವರೂ ಮಧ್ಯಂತರ ಜಾಮೀನನ್ನು ವಿರೋಧಿಸಿದರು.

 ಬಾಬು ಪ್ರಭಾವಿ ವ್ಯಕ್ತಿಯಾಗಿರುವುದು ಮಲಯಾಳಂ ಚಿತ್ರರಂಗದ ಸಾಕ್ಷಿಗಳ ಮೇಲೆ ಪರಿಣಾಮವನ್ನು ಬೀರಬಹುದು. ಅವರ ವಿರುದ್ಧದ ಎಫ್‌ಐಆರ್ ಅವರು ಸಾಕ್ಷನಾಶದಂತಹ ಇನ್ನಷ್ಟು ಅಪರಾಧಗಳನ್ನು ಎಸಗುವುದನ್ನು ನಿರ್ಬಂಧಿಸುವುದಿಲ್ಲ ಎಂದರು.

ಸಾಕ್ಷಿಗಳ ಮೇಲೆ ಪ್ರಭಾವ ಬೀರದಂತೆ,ಸಾಕ್ಷಗಳನ್ನು ತಿರುಚದಂತೆ ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ ದೂರುದಾರರಿಗೆ ಕಿರುಕುಳ ನೀಡದಂತೆ ಸರ್ವೋಚ್ಚ ನ್ಯಾಯಾಲಯವು ಬಾಬುಗೆ ನಿರ್ದೇಶ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News