ಪಠ್ಯಕ್ಕೆ ನಾರಾಯಣ ಗುರುಗಳ ಚರಿತ್ರೆ ಸೇರ್ಪಡೆ, ನಿಗಮದ ಸ್ಥಾಪನೆಗೆ ಒತ್ತಾಯ

Update: 2022-07-06 16:30 GMT

ಉಡುಪಿ : ಹತ್ತನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ  ಬ್ರಹ್ಮಶ್ರೀ ನಾರಾಯಣಗುರುಗಳ ಜೀವನ ಚರಿತ್ರೆಯ ಮರು ಸೇರ್ಪಡೆ ಹಾಗೂ ಬಿಲ್ಲವ ಸಮಾಜಕ್ಕಾಗಿ ಬ್ರಹ್ಮಶ್ರೀ ನಾರಾಯಣ ಗುರು ನಿಗಮದ ಸ್ಥಾಪನೆಗೆ ಒತ್ತಾಯಿಸಿ ಕಟಪಾಡಿಯ ಶ್ರೀವಿಶ್ವನಾಥ ಕ್ಷೇತ್ರದ ಮುಂದಾಳತ್ವದಲ್ಲಿ ಜಿಲ್ಲೆಯ ವಿವಿಧ ಬಿಲ್ಲವ ಸಂಘಟನೆಗಳು ಜು.೮ರಂದು ಮಣಿಪಾಲದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನಾ ಸಭೆಯನ್ನು ನಡೆಸಲಿವೆ ಎಂದು ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಕರ್ನಾಟಕದ ಉಡುಪಿ ಜಿಲ್ಲಾ ಸಮಿತಿಯ ಅಧ್ಯಕ್ಷ ಜಗನ್ನಾಥ್ ಕೋಟೆ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ ಮೊದಲಿನಿಂದಲೂ ಸಮಾಜದ ಕಣ್ಣೊರೆಸುವ ತಂತ್ರ ಮಾಡುತಿದ್ದು, ಇದನ್ನು ಯಾವತ್ತಿಗೂ ಈ ಸಮಾಜ ಒಪ್ಪುದಿಲ್ಲ. ನಾವೀಗ ಸರಕಾರ ಹಾಗೂ ಶಿಕ್ಷಣ ಸಚಿವರಿಗೆ ಮತ್ತೊಮ್ಮೆ ಎಚ್ಚರಿಕೆಯನ್ನು ನೀಡುತಿದ್ದೇವೆ.ನಮ್ಮ ಸಮಾಜದ ಬಗ್ಗೆ ನಿಜವಾದ ಕಾಳಜಿ ಇದ್ದಲ್ಲಿ ಸರಕಾರ ತಕ್ಷಣ ನಮ್ಮ ಬೇಡಿಕೆಗಳಿಗೆ ಸ್ಪಂಧಿಸಬೇಕು ಎಂದವರು ತಿಳಿಸಿದರು.

ಮೊದಲನೇಯದಾಗಿ ೧೦ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕದಿಂದ ಕೈಬಿಟ್ಟಿರುವ ನಾರಾಯಣ ಗುರುಗಳ ಜೀವನ ಚರಿತ್ರೆಯನ್ನು ಹಿಂದೆ ಇದ್ದಂತೆ ಅಳವಡಿಸಬೇಕು. ಇದರ ಜೊತೆಗೆ ಕಳೆದ ಅನೇಕ ವರ್ಷಗಳಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಪ್ರತ್ಯೇಕ ನಿಗಮ ರಚಿಸಬೇಕೆಂಬ ಬೇಡಿಕೆಗೆ  ಸ್ಪಂದಿಸಬೇಕು. ಇದಕ್ಕಾಗಿ ಜು.೮ರಂದು ಶುಕ್ರವಾರ ಬೆಳಗ್ಗೆ ೧೦ ಗಂಟೆಗೆ ಮಣಿಪಾಲದ ಟೈಗರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿ ಉಡುಪಿ ಜಿಲ್ಲೆಯ ಎಲ್ಲಾ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಕಟಪಾಡಿ ಶ್ರೀವಿಶ್ವನಾಥ ಕ್ಷೇತ್ರದ ಮುಂದಾಳತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ ಎಂದರು.

ಪ್ರತಿಭಟನಾ ಸಭೆಯಲ್ಲಿ ಶ್ರೀನಾರಾಯಣಗುರು ವಿಚಾರ ವೇದಿಕೆಯ ಎಲ್ಲಾ ತಾಲೂಕು ಹಾಗೂ ವಲಯ ಸಮಿತಿಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಇದಕ್ಕೂ ಸರಕಾರ ಸೂಕ್ತವಾಗಿ ಸ್ಪಂಧಿಸದಿದ್ದರೆ, ಇಡೀ ರಾಜ್ಯದಲ್ಲಿ ಈಡಿಗ, ಬಿಲ್ಲವ, ನಾಮಧಾರಿ ಮುಂತಾದ ಎಲ್ಲಾ 26 ಪಂಗಡಗಳನ್ನು ಸೇರಿಸಿಕೊಂಡು ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಜಗನ್ನಾಥ ಕೋಟೆ ಎಚ್ಚರಿಸಿದರು.

ಕಳೆದ ಜ.೨೬ರ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರದ ಟ್ಯಾಬ್ಲೋಗೆ ಅವಕಾಶ ನಿರಾಕರಿಸುವ ಮೂಲಕ ನಾರಾಯಣ ಗುರುಗಳಿಗೆ ಅವಮಾನ ಮಾಡಿರುವುದನ್ನು ಸಮಾಜ ಇನ್ನೂ ಮರೆತಿಲ್ಲ. ಈಗ ಮತ್ತೊಮ್ಮೆ ಹಿಂದುಳಿದ ವರ್ಗಗಳ, ಜನಸಂಖ್ಯೆಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಬಿಲ್ಲವ, ಈಡಿಗ, ನಾಮಧಾರಿಯಾಗಿ ೨೬ ಪಂಗಡಗಳನ್ನು ಒಳಗೊಂಡ ನಾರಾಯಣ ಗುರು ಸಮಾಜದ ಅಗತ್ಯ ಇಲ್ಲವೆಂದು ರಾಜ್ಯ ಸರಕಾರ ತೀರ್ಮಾನಿಸಿದಂತೆ ಕಾಣುತ್ತಿದೆ ಎಂದು ಆರೋಪಿಸಿದ ಅವರು, ಪ್ರತಿಭಟನೆ ಮೂಲಕ ರಾಜ್ಯ ಸರಕಾರ ಹಾಗೂ ಶಿಕ್ಷಣ ಸಚಿವರಿಗೆ ಎಚ್ಚರಿಕೆ ನೀಡುತಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ  ವೇದಿಕೆಯ ಪದಾಧಿಕಾರಿಗಳಾದ ಜಿಲ್ಲಾ ಗೌರವಾಧ್ಯಕ್ಷ ರಾಜು ಪೂಜಾರಿ ಉಪ್ಪೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಸನಿಲ್ ಪಳ್ಳಿ, ಉಪಾಧ್ಯಕ್ಷ ಕಾಮ್‌ರಾಜ್ ಸುವರ್ಣ ಕಟಪಾಡಿ, ಕೋಶಾಧಿಕಾರಿ ವಿರೇಶ್ ಸುವರ್ಣ ಕುಂಜಿಬೆಟ್ಟು, ಜೊತೆ ಕಾರ್ಯದರ್ಶಿ ರಿತೇಶ್ ಕೋಟ್ಯಾನ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಹೇಶ್ ಎನ್.ಅಂಚನ್ ಹಾಗೂ ಪ್ರಕಾಶ್ ಪೂಜಾರಿ ಅಂಬಾಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News