ರೈತ ಹುತಾತ್ಮರ ದಿನಾಚರಣೆ | ಜು.21ರಂದು ಮಂಗಳೂರಿನಲ್ಲಿ ರಾಜ್ಯ ರೈತ ಸಮಾವೇಶ

Update: 2022-07-07 07:51 GMT

ಮಂಗಳೂರು, ಜು.7: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಜನಜಾಗೃತಿ ಸಂಘದ ವತಿಯಿಂದ ರೈತ ಹುತಾತ್ಮರ ದಿನಾಚರಣೆಯ ಅಂಗವಾಗಿ ಜು.21ರಂದು ಪೂರ್ವಾಹ್ನ 10ರಿಂದ ರಾಜ್ಯ ರೈತ ಸಮಾವೇಶವನ್ನು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಲಾಗಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಘದ ಅಧ್ಯಕ್ಷೆ ನಾಗರತ್ನಾ, ಕಾರ್ಯಕ್ರಮದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಹರೀಶ್ ಪೂಂಜಾ, ಉಮಾನಾಥ ಕೋಟ್ಯಾನ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಭಾಗವಹಿಸುವರು. ಜಿಲ್ಲೆ ಸೇರಿದಂತೆ ರಾಜ್ಯಮಟ್ಟದ ರೈತ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಅಂದು ಅಪರಾಹ್ನ 2 ಗಂಟೆಯ ಬಳಿಕ ರಾಜ್ಯ ರೈತರ ಸಮಸ್ಯೆಗಳ ಬಗ್ಗೆ ಹಾಗೂ ಜನರ ಸಮಸ್ಯೆಗಳ ಬಗ್ಗೆ ರಾಜ್ಯದ ರೈತ ಮುಖಂಡರಿಂದ ಹಾಗೂ ಕನ್ನಡ ಪರ ಹೋರಾಟ ಸಂಘದ ರಾಜ್ಯ ಪ್ರಮುಖರಿಂದ ಚರ್ಚೆ ಹಾಗೂ ಚಿಂತನ ಕಾರ್ಯಕ್ರಮ ನಡೆಯಲಿದೆ ಎಂದರು.

ರೈತರ ಸಂಕಷ್ಟದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿದೆ. ರಾಜ್ಯದಲ್ಲಿ ಗಣಿಗಾರಿಕೆ, ಮರಳುಗಾರಿಕೆ, ಪ್ರಕತಿ ವಿನಾಶ ನಡೆಯುತ್ತಿದೆ. ರಸಗೊಬ್ಬರ, ದಿನ ಬಳಕೆ ವಸ್ತುಗಳ ಬೆಲೆ ಹೆಚ್ಚಾಗುತ್ತಿದೆ. ರೈತರ ಬೆಳೆಗೆ ಬೆಲೆ ಕಡಿಮೆಯಾಗಿದೆ. ಕೊರೋನ ಸಂಕಷ್ಟದಲ್ಲಿರುವಾಗ ರೈತ ಬ್ಯಾಂಕ್‌ನಿಂದ ಪಡೆದ ಸಾಲಕ್ಕೆ ಬಡ್ಡಿ, ಚಕ್ರಬಡ್ಡಿ ಹೆಚ್ಚಾಗುತ್ತಿದೆ. ಈ ಕುರಿತು ರಾಜ್ಯ ಸರಕಾರದ ಕಣ್ಣು ತೆರೆಸುವ ಕೆಲಸ ನಡೆಯಲಿದೆ. ಕೂಲಿ ಕಾರ್ಮಿಕರು, ಮೀನುಗಾರರ ಸಂಕಷ್ಟಕ್ಕೆ ನಮ್ಮ ಸಂಘದಿಂದ ಸ್ಪಂದಿಸುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಆರ್‌ಟಿಐ ಕಾರ್ಯಕರ್ತ ರಮೇಶ್ ಕುಮಾರ್, ಸಂಘದ ಪ್ರಮುಖರಾದ ಛಲಪತಿ ಸೇರಿದಂತೆ ವಿವಿಧ ರೈತ ಒಕ್ಕೂಟ, ಕನ್ನಡ ಪರ ಹೋರಾಟ ಸಂಘದ ಅಧ್ಯಕ್ಷರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ದೀಪಕ್ ರಾಜ್ ಶೆಟ್ಟಿ, ಉಪಾಧ್ಯಕ್ಷ ಪುರಂದರ ಪೂಜಾರಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಗಿರೀಶ್ ಕೊಟ್ಟಾರಿ, ಸೋಮಶೇಖರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News