ಬಂಟ್ವಾಳದಲ್ಲಿ ಗುಡ್ಡ ಕುಸಿದು ಕಾರ್ಮಿಕರು ಮೃತ್ಯು ಪ್ರಕರಣ: ಮನೆ ಮಾಲಕಿ ವಿರುದ್ಧ ಪ್ರಕರಣ ದಾಖಲು

Update: 2022-07-07 14:00 GMT

ಬಂಟ್ವಾಳ, ಜು.7: ತಾಲೂಕಿನ ಪಂಜಿಕಲ್ಲು ಗ್ರಾಮದಲ್ಲಿ ಗುಡ್ಡ ಜರಿದು ಮೂವರು ಕಾರ್ಮಿಕರು ಮೃತಪಟ್ಟ ಘಟನೆಗೆ ಮನೆ ಮಾಲಕಿಯ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮ ಕರಣಿಕ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜುಲೈ 5ರಂದು ಸಂಜೆ ಗುಡ್ಡದ ಒಂದು ಭಾಗ ಕುಸಿದಿದ್ದು ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಗುಡ್ಡ ಇನ್ನಷ್ಟು ಕುಸಿಯುವ ಭೀತಿ ಇತ್ತು. ಆದ್ದರಿಂದ ಹಳೆ ಮನೆಯಲ್ಲಿ ವಾಸವಿದ್ದ ಕಾರ್ಮಿಕರನ್ನು ತೆರವುಗೊಳಿಸುವಂತೆ ಹಾಗೂ ಮುಂಜಾಗ್ರತೆ ವಹಿಸುವಂತೆ ಮನೆಯ ಮಾಲಕಿ ಬೆನಡಿಕ್ಟ ಕಾರ್ಲೋ ಅವರಿಗೆ ಮೌಖಿಕವಾಗಿ ಸೂಚನೆ ನೀಡಲಾಗಿತ್ತು.

ಅಪಾಯದ ಸೂಚನೆ ನೀಡಿದರೂ ಬೆನಡಿಕ್ಟ ಕಾರ್ಲೋ ಅವರು ಯಾವುದೇ ಮುಂಜಾಗ್ರತೆ ಕ್ರಮವನ್ನು ವಹಿಸದೆ ಹಾಗೂ ಕಾರ್ಮಿಕರನ್ನು ತೆರವು ಮಾಡದೆ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯ ತೋರಿಸಿದ್ದಾರೆ. ಆ ಬಳಿಕವೂ ಕರೆ ಮಾಡಿ ಎಚ್ಚರಿಕೆ ನೀಡಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಜುಲೈ 6ರಂದು ಸಂಜೆ ಅದೇ ಗುಡ್ಡ ಮತ್ತೆ ಕುಸಿದು ಮಣ್ಣು ಹಳೆಯ ಮನೆಯ ಮೇಲೆ ಬಿದ್ದು ಮನೆಯ ಒಳಗೆ ಇದ್ದ ಕಾರ್ಮಿಕರು ಮಣ್ಣಿನಲ್ಲಿ ಸಿಲುಕಿಕೊಂಡು, ಆ ಪೈಕಿ ಮೂವರು ಮೃತಪಟ್ಟಿದ್ದಾರೆ. ಇದಕ್ಕೆ ಬೆನಡಿಕ್ಟ ಕಾರ್ಲೋ ಅವರ ನಿರ್ಲಕ್ಷ್ಯ ಕಾರಣ ಎಂದು ಗ್ರಾಮ ಕರಣಿಕ ಕುಮಾರ್ ಟಿ.ಸಿ. ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನಾವಣೆ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News