ಭ್ರಷ್ಟಾಚಾರ ಆರೋಪ: ಬುಲೆಟ್ ಟ್ರೈನ್ ಯೋಜನೆ ಮುಖ್ಯಸ್ಥ ವಜಾ
ಹೊಸದಿಲ್ಲಿ: ಸರ್ಕಾರದ ಮಹತ್ವಾಕಾಂಕ್ಷಿ ಬುಲೆಟ್ ರೈಲು ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಅಗ್ನಿಹೋತ್ರಿ ಅವರನ್ನು ಭ್ರಷ್ಟಾಚಾರ ಆರೋಪದಲ್ಲಿ ವಜಾಗೊಳಿಸಲಾಗಿದೆ ಎಂದು hindustantimes.com ವರದಿ ಮಾಡಿದೆ.
ರಾಷ್ಟ್ರೀಯ ಹೈಸ್ಪೀಡ್ ರೈಲು ನಿಗಮ ನಿಯಮಿತ (ಎನ್‍ಎಚ್‍ಎಸ್‍ಆರ್‍ಸಿಎಲ್) ಹೊರಡಿಸಿದ ಆದೇಶದಂತೆ, ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಅಗ್ನಿಹೋತ್ರಿಯವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಜಾಗೊಳಿಸಲಾಗಿದೆ.
ಯೋಜನಾ ವಿಭಾಗದ ನಿರ್ದೇಶಕ ರಾಜೇಂದ್ರ ಪ್ರಸಾದ್ ಅವರು ಮುಂದಿನ ಮೂರು ತಿಂಗಳವರೆಗೆ ಅಥವಾ ಮುಂದಿನ ಆದೇಶ ಬರುವವರೆಗೆ (ಯಾವುದು ಮೊದಲೋ ಅದು) ಸಿಎಂಡಿ ಹೊಣೆಗಾರಿಕೆ ನಿಭಾಯಿಸಲಿದ್ದಾರೆ.
ಅಗ್ನಿಹೋತ್ರಿ ಶೆಡ್ಯೂಲ್ ಎ ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ದಿಮೆಯಾದ ರೈಲು ವಿಕಾಸ ನಿಗಮ ನಿಯಮಿತದಲ್ಲಿ ಇದ್ದಾಗಿನಿಂದಲೂ ಅಂದರೆ 2011ರಿಂದಲೂ ಭ್ರಷ್ಟಾಚಾರ ಆರೋಪವನ್ನು ಎದುರಿಸುತ್ತಿದ್ದರು ಎನ್ನಲಾಗಿದೆ. ಅಗ್ನಿಹೋತ್ರಿ ತನ್ನ ಮಗ ಕಾರ್ಯ ನಿರ್ವಹಿಸುವ ಕಂಪನಿಗೆ ಟೆಂಡರ್ ಹಂಚಿಕೆ ಮಾಡಿದ್ದಾರೆ ಎಂದು ರೈಲ್ವೆ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ. ಆದರೆ ಈ ಎಲ್ಲ ಆರೋಪಗಳನ್ನು ಅಗ್ನಿಹೋತ್ರಿ ನಿರಾಕರಿಸಿದ್ದಾರೆ.
1982ನೇ ಬ್ಯಾಚ್ ಐಆರ್‌ಎಸ್‍ಇ ಅಧಿಕಾರಿಯಾಗಿರುವ ಅಗ್ನಿಹೋತ್ರಿಯವರನ್ನು ಕಳೆದ ವರ್ಷದ ಜುಲೈನಲ್ಲಿ ಎನ್‍ಎಚ್‍ಎಸ್‍ಆರ್‍ಸಿಎಲ್ ಸಿಎಂಡಿ ಆಗಿ ನೇಮಕ ಮಾಡಲಾಗಿತ್ತು. ಲೋಕಪಾಲಕ್ಕೆ ಸಲ್ಲಿಕೆಯಾದ ಹಲವು ದೂರುಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಪ್ರಕರಣಗಳನ್ನು ಇದೀಗ ಸಿಬಿಐ ಕೈಗೆತ್ತಿಕೊಂಡಿದೆ ಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.