ಬಾಲರ ಬಾಳನ್ನು ಗೋಳು ಮಾಡಬೇಡಿ
ಮಕ್ಕಳ ಪಾಲಕರ ಪ್ರಕಾರ, ಕಲಿಯುವ ವಸ್ತು/ವಿಷಯ ಮತ್ತು ಶಿಕ್ಷಕನ ಪಾತ್ರವೇ ಪ್ರಧಾನ, ಕಲಿಯುವಾತನ ಗುಣಸ್ವಭಾವಗಳು, ಆಸಕ್ತಿ, ಶಕ್ತಿಸಾಮರ್ಥ್ಯಗಳು ಗೌಣ. ತರಗತಿಗಳಲ್ಲಿ ಶಿಕ್ಷಕನ ನೇರ ಬೋಧನೆಯ ಪರಿಣಾಮವಾಗಿ ಮಕ್ಕಳ ಶಿಕ್ಷಣ ನಡೆಯುತ್ತದೆ. ಶಿಕ್ಷಕ ಕಲಿಸಿದರೇನೇ ಕಲಿಕೆ ನಡೆಯುವುದು, ಮಕ್ಕಳು ತಾವು ತಾವಾಗಿಯೇ ಕಲಿಯಲು ಅಶಕ್ತರು. ಹೆಚ್ಚೆಚ್ಚು ಕಲಿಸಿದರೇನೇ ಕಲಿಕೆ ಗಟ್ಟಿಯಾಗುವುದು ಎಂಬಿತ್ಯಾದಿ ಭಾವನೆಗಳು ಪಾಲಕರಲ್ಲಿ ಇವೆ. ಕಲಿಕೆ ಪರಿಣಾಮಕಾರಿಯಾಗಬೇಕಾದರೆ ಹೆಚ್ಚೆಚ್ಚು ಪರೀಕ್ಷೆಗಳು, ಪರೀಕ್ಷೆಗಳಿಗಾಗಿ ತಯಾರಿ (ಟ್ಯೂಷನ್ ಇತ್ಯಾದಿ), ಹೋಂವರ್ಕ್ ತಿದ್ದುವಿಕೆ, ತಿದ್ದಿ ಬರೆಸುವಿಕೆ ಇತ್ಯಾದಿ ಕ್ರಿಯೆಗಳು ಶಾಲೆಗಳಲ್ಲಿ ನಡೆಯುತ್ತವೆ. ಪಾಲಕರು ಬಯಸುವುದೂ ಇದನ್ನೇ!
ನಮ್ಮ ಮಕ್ಕಳ ಪೋಷಕರಿಗೆ ಇಂದು ಏನಾಗಿದೆ? ತಮ್ಮ ಮಕ್ಕಳು genius, whizkid child prodigy ಗಳಾಗಬೇಕೆಂಬ ಕನಸು ಕಾಣುತ್ತಿರುವ ಮಕ್ಕಳ ಪೋಷಕರು ತಮ್ಮ ಅಜ್ಞಾನ, ಭ್ರಮೆಗಳಿಂದಾಗಿ ಹಾಗೂ ತಮ್ಮ ವೈಚಾರಿಕ ದೋಷಗಳಿಂದಾಗಿ ಒಂದು ರೀತಿಯ ಕಾತರ ಕಾಯಿಲೆ (ancity neurosis)ಗೆ ಒಳಗಾಗಿರುತ್ತಾರೆ. ಈ ವ್ಯಾಧಿಯ ಲಕ್ಷಣಗಳೇನು? ಮಗುವಿನ ಕುರಿತಾದ ಅವರ ನಂಬುಗೆಗಳೇನು?
ಮಾತೆತ್ತಿದರೆ ನಮ್ಮ ಮಗಳಿಗೆ 600ರಲ್ಲಿ 596 ಬಂದಿದೆ. ಬಿ.ಇ. ಇಲೆಕ್ಟ್ರಾನಿಕ್ಸ್ ಮಾಡಲು ‘ಎಕ್ಸ್‌ವೈಝಡ್’ ಕಾಲೇಜಿಗೆ ಸೇರಿಸುತ್ತೇನೆ ಎನ್ನುವ ತಂದೆಯೊಬ್ಬನ ಮಾತಾದರೆ, ನಮ್ಮ ಮಗನಿಗೆ 600ರಲ್ಲಿ 595 ಬಂದಿದೆ. ಐಎಎಸ್ ಮಾಡುವಂತೆ ಮಂಗಳೂರಿನ ಪ್ರತಿಷ್ಠಿತ ಕೋಚಿಂಗ್ ಕ್ಲಾಸಿಗೆ ಸೇರಿಸಬೇಕೆಂದಿದ್ದೇವೆ. ಹೀಗೆ ಹತ್ತು ಹಲವಾರು ಭ್ರಮೆಗಳನ್ನು ಮಕ್ಕಳ ತಲೆಗೆ ತುರುಕಿಸುವ ಜನ ನಮ್ಮ ಸಮಾಜದಲ್ಲಿ ಸಾಕಷ್ಟು ಮಂದಿ ಇದ್ದಾರೆ. ಜಸ್ಟೀಸ್ ನಾಗಮೋಹನ್ ದಾಸ್ ಅಂದಂತೆ, ‘‘Marks card is not the yardstick to measure the real talent of a student’’ ಆವರರಿಯರು, ಅರಿಯುವ ಇಚ್ಛೆಯೂ ಅವರಿಗಿಲ್ಲ. ಸಾಲದುದಕ್ಕೆ, ಉದ್ಯೋಗವನ್ನರಸುತ್ತಾ ವಿದೇಶಗಳಿಗೆ ಹೋಗಿ ಅಲ್ಲಿಯೇ ನೆಲೆಸಿದ್ದ ಭಾರತೀಯ ಮೂಲದ ಎನ್ನಾರೈಗಳನ್ನು ಬಾಧಿಸುವ ಇನ್ನೊಂದು ವ್ಯಾಧಿಯೆಂದರೆ Mensa Mania, Intelligence Test ಗಳೆಂಬ ಭರಾಟೆಯಲ್ಲಿ ತಮ್ಮ ಮಕ್ಕಳು, ಅಲ್ಬರ್ಟ್ ಐನ್‌ಸ್ಟೀನ್, ಸ್ಟೀಫನ್ ಹಾಕಿಂಗ್ ವಿಜ್ಞಾನಿಗಳನ್ನೂ ಮೀರಿಸುವ 10 ಸ್ಕೋರ್ ಗಳಿಸುವ ಒತ್ತಡವನ್ನು ಮಕ್ಕಳ ಮೇಲೆ ಹೇರುವುದು ಸಾಮಾನ್ಯವಾಗಿದೆ. ನಿಜ ಹೇಳುವುದಾದರೆ, ಐನ್‌ಸ್ಟೀನ್ ಮತ್ತು ಹಾಕಿಂಗ್ ಯಾವುದೇ ರೀತಿಯ IQ test ಗಳನ್ನು ಎದುರಿಸಿಲ್ಲ ಎಂದು ಅವರ ಬಯೋಗ್ರಫಿಗಳಲ್ಲಿ ಕಂಡುಬರುತ್ತದೆ. ಕೇವಲ ಊಹಾಪೋಹಗಳಷ್ಟೆ,
ಇನ್ನೊಂದು ವಿಚಾರವೆಂದರೆ ಮಕ್ಕಳ ಕುರಿತಾಗಿ ಅವರ ಬೆಳವಣಿಗೆ, ಕಲಿಕೆಯ ಕುರಿತಾಗಿ ನಮಗಿರುವ ತಪ್ಪು ಕಲ್ಪನೆ. ಅದೇನೆಂದರೆ ಮಗುವನ್ನು ಮಗುವೆಂದು ಅಂದರೆ ಬೆಳೆಯುತ್ತಿರುವ ಇನ್ನೂ ಬೆಳೆಯಬೇಕಾದ ಜೀವಿ ಎಂದು ಪರಿಗಣಿಸದೆ ಒಂದು ‘ಕಿರಿಯ ಗಾತ್ರದ ಹಿರಿಯ’ (miniature adult)ನೆಂದು ಭಾವಿಸುವುದಾಗಿದೆ. ಈ ಮೇಲೆ ಹೇಳಲಾದ ‘ಕಾತರ ಕಾಯಿಲೆ’ಯ ಲಕ್ಷಣಗಳೇನು? ಮಗುವಿನ ಕುರಿತಾದ ಹಿರಿಯರ ನಂಬುಗೆಗಳೇನು?
ಮಗು ಒಂದು ಕಿರಿಗಾತ್ರದ ಅಂದರೆ homuroculus ಜೀವಿ. ಇನ್ನೂ ಬಲಿಯದ, ಬೆಳೆದು ಬಲಿಯಬೇಕಾದ ಮಗುವನ್ನು ಮಗುವೆಂದು ಪರಿಗಣಿಸದೆ, ಅತೀ ಶೀಘ್ರವಾಗಿ ಪ್ರೌಢನನ್ನಾಗಿಸುವ ಪ್ರಯತ್ನಗಳು ಮಕ್ಕಳ ಪಾಲನಾಕ್ರಮದಲ್ಲಿ, ಶಿಕ್ಷಣಕ್ರಮದಲ್ಲಿ ಕಂಡುಬರುತ್ತವೆ. ಅಂದರೆ ರಬ್ಬರನ್ನು ಎಳೆದು ಉದ್ದ ಮಾಡಿದಂತೆ ಮಾಗದ ಕಾಯಿಯನ್ನು ಹಿಸುಕಿ ಹಣ್ಣು ಮಾಡಿದಂತೆ ಮಕ್ಕಳ ಶಿಕ್ಷಣ ಕ್ರಮ ಇದೆ. ಪ್ರೌಢರಿಗೆ ಒಪ್ಪುವ ರೀತಿಯಲ್ಲಿ ಮಗು ಭಾಷಣ ಮಾಡಿದರೆ, ಪ್ರಬಂಧ ಬರೆದರೆ, ಕವನ ಬರೆದರೆ, ಚಿತ್ರ ಬಿಡಿಸಿದರೆ, ನಾಟಕ ಆಡಿದರೇನೇ ತೀರ್ಪುಗಾರರಿಗೆ ಒಪ್ಪಿಗೆ ಇಲ್ಲವಾದರೆ ಇಲ್ಲ.
ಮಗು ಒಂದು ‘ಮೇಣದ ಮುದ್ದೆ’:
ಈ ನಂಬುಗೆಯ ಆಧಾರದಲ್ಲಿ ಪ್ರೌಢರ ಆಶೆ ಆಕಾಂಕ್ಷೆಗಳ ಮೇರೆಗೆ ಮಕ್ಕಳನ್ನು ಬೇಕು ಬೇಕಾದ ರೂಪು ನಡವಳಿಕೆಗೆ ಸರಿಹೊಂದುವಂತೆ ಬಲವಂತದ ತರಬೇತಿಗೊಳಪಡಿಸುವುದನ್ನು ಕಾಣಬಹುದು. ಮರದ ಕೊರಡನ್ನು ಕೆತ್ತಿ ಕೆತ್ತಿ ತಮಗೆ ಬೇಕಾದ ಆಕೃತಿಯನ್ನು ಸಿದ್ಧಮಾಡಿದಂತೆ ಈ ಪ್ರಯತ್ನಗಳಾಗಿವೆ.
ಮಗು ಒಂದು ‘ದಾಸ್ತಾನು ಹಂಡೆ’:
ಮಗುವಿನ ಮೆದುಳು ಮಾಹಿತಿ ಶೇಖರಣಾ ಗೂಡು ಎಂಬ ಭಾವನೆಯಿಂದಲೋ ಏನೋ, ಇಂದು ಕ್ವಿಝ್, ಜನರಲ್ ನಾಲೆಡ್ಜ್ ಟೆಸ್ಟ್‌ಗಳಿಗೆ ತಯಾರಿ ಮಾಡುವ ನೆಪದಲ್ಲಿ ಬೇಕಾದ ಬೇಡವಾದ ಮಾಹಿತಿಗಳ ಸಂಗ್ರಹ ಮತ್ತು ಪ್ರದರ್ಶನ ನಡೆಯುವುದು. ಇಂದಿಗಲ್ಲದಿದ್ದರೆ ಮುಂದಕ್ಕಾದರೂ ಬೇಕಾದೀತು ಎಂದು ಹೆಚ್ಚು ಹೆಚ್ಚು ಮಾಹಿತಿಯನ್ನು ಮಕ್ಕಳ ತಲೆಗೆ ಒತ್ತಿ ಒತ್ತಿ ತುರುಕಿಸುವುದು.
ಮಗು ಒಂದು ‘ಗಿಳಿ’:
ಅನುಕರಣೆ ಮೂಲಕ ಕಲಿಕೆ ಸಾಧ್ಯ ಎಂಬ ನಂಬುಗೆಯಿಂದಲೋ ಏನೋ ಕಿಂಡರ್‌ಗಾರ್ಟನ್ ಹಂತದಿಂದಲೇ ಆರಂಭಗೊಂಡು ಗಿಳಿಬಾಯಿಪಾಠ ಮಾಡಿಸುವ, ಹೇಳಿದ್ದನ್ನೇ ಹೇಳಿಸುವ, ಬರೆದುದನ್ನೇ ಬರೆಸುವ ಬೋಧನಾ ಪದ್ಧತಿ ನಮ್ಮ ಶಾಲೆಗಳಲ್ಲಿ ಕಂಡುಬರುವುದು. ಗಿಳಿ ತನ್ನ ಸ್ವಂತಿಕೆ ಇಲ್ಲದೆ ಹೇಳಿಕೊಟ್ಟ ಬಾಯಿಪಾಠ ಒಪ್ಪಿಸುವುದು ತಾನೇ. ತನ್ನ ಸ್ವಂತ ಭಾಷೆಯಲ್ಲದ, ತನಗೆ ಏನೇನೂ ಪರಿಚಯವಿಲ್ಲದ ಇಂಗ್ಲಿಷ್ ಭಾಷೆಯ ಮೂಲಕ ಎಳವೆಯಿಂದಲೇ ಶಿಕ್ಷಣ ನಡೆಯುವುದರ ಪರಿಣಾಮವಾಗಿ ಮಗು ವಿಚಾರಗಳನ್ನು ಸ್ವಂತವಾಗಿ ಅರ್ಥೈಸಿಕೊಳ್ಳಲಾರದೆ ಉರು ಹೊಡೆಯುವುದು ಅನಿವಾರ್ಯವಾಗುವುದು, ಸಹಜತೆ ಇಲ್ಲದೆ, ಸ್ವಂತ ವಿಚಾರಗಳ ಅಭಿವ್ಯಕ್ತಿಗೆ ಅವಕಾಶವಿಲ್ಲದಾಗುವುದು.
ಮಗು ಒಂದು ‘ಚಿಂಪಾಂಜಿ’:
ಅನುಕರಣೆಗೆ ಚಿಂಪಾಂಜಿ ಉತ್ತಮ ಮಾದರಿ, ಅನುಕರಣೆಯಿಂದಲೇ ಅಭ್ಯಾಸ, ಅಭ್ಯಾಸದಿಂದಲೇ ಕಲಿಕೆ ಪೂರ್ಣವಾಗುವುದು ಎಂಬ ನಂಬುಗೆಯಿಂದ ಸರ್ಕಸ್ ಪ್ರಾಣಿಗಳನ್ನು ತರಬೇತುಗೊಳಿಸಿದಂತೆ ಪ್ರತೀಹಂತದಲ್ಲಿ ಮಕ್ಕಳನ್ನು ಯಾಂತ್ರಿಕ ತರಬೇತಿಗೊಳಪಡಿಸುವರು. ಇದರಿಂದಾಗಿ ಮಕ್ಕಳಲ್ಲಿ ‘ಸ್ವಂತಿಕೆ’, ‘ಸೃಜನ ಕಲೆ’, ’ಮುಕ್ತ ಅಭಿವ್ಯಕ್ತಿ’ ಪ್ರೋತ್ಸಾಹವಿಲ್ಲದೆ, ಉಪಯೋಗವಿಲ್ಲದೆ ಬಾಡಿ ಹೋಗುವುದು.
ಮಗು ಒಂದು ‘ರೆೇಸ್ ಕುದುರೆ’:
ಈ ನಂಬುಗೆಯಿಂದಾಗಿ ಮಕ್ಕಳನ್ನು ಬಾಲ್ಯದಿಂದಲೇ ಕಂಬಳದ ಕೋಣ ಯಾ ಡರ್ಬಿ ಕುದುರೆಯನ್ನು ತಯಾರು ಮಾಡಿದಂತೆ ಸದಾ ಪೈಪೋಟಿಮಯ ಆಟ, ಪಾಠ, ಸಹಪಠ್ಯ ಚಟುವಟಿಕೆಗಳಲ್ಲಿ ತೊಡಗಿಸುವುದು ಸರ್ವಸಾಮಾನ್ಯವಾಗಿದೆ. ಸ್ಪರ್ಧೆಯಲ್ಲಿ ತಾನು ಗೆಲ್ಲಬೇಕು. ಮೆಡಲ್ ಪಡೆಯಬೇಕು, ಪರೀಕ್ಷೆಯಲ್ಲಿ ರ್ಯಾಂಕು ಪಡೆಯಬೇಕು. ತಾನು ನಗಬೇಕು ಇತರರು ಅಳಬೇಕು. ತಾನು ಸದಾ ಮುಂದಿರಬೇಕು ಇಲ್ಲವೇ ಇತರರು ತನ್ನ ಹಿಂದಿರಬೇಕು ಎಂಬುದೇ ಸಮ ಪಾಠ, ಸಹಪಾಠ ಚಟುವಟಿಕೆಗಳ ಮುಖ್ಯ ಗುರಿ.
ಮಗು ಒಂದು ‘ಕಾರ್ಖಾನೆಯ ಸಿದ್ಧವಸ್ತು’:
ಈ ಭಾವನೆಯಿಂದಾಗಿ ಮಕ್ಕಳ ಕಲಿಕೆಯಲ್ಲಿ, ಪಠ್ಯ, ಪಠ್ಯೇತರ ಚಟುವಟಿಕೆಗಳಲ್ಲಿ, ಪರೀಕ್ಷೆಯ ಮೌಲ್ಯಮಾಪನದಲ್ಲಿ ಸಮಾನ ಪ್ರಮಾಣೀಕರಣದ ಪ್ರಯತ್ನಗಳು ಎದ್ದು ಕಾಣುವುವು, ಅಂದರೆ ಬುದ್ಧಿ, ಭಾವ, ಆಸಕ್ತಿ, ಅಭಿರುಚಿಗಳಲ್ಲಿ ಮಕ್ಕಳಲ್ಲಿ ಭಿನ್ನತೆ ಇದೆ, ಇರುವುದು ಸಹಜ ಎಂಬ ಸತ್ಯವನ್ನು ಮರೆತು ಮಕ್ಕಳೆಲ್ಲರೂ ಸರಿಸಮರು, ಕಲಿಕೆಯಲ್ಲಿ ಸಮಶಕ್ತರು, ಹಾಗೆಯೇ ಅವರ ಸಾಧನೆಯಲ್ಲೂ ಸಮಾನತೆ ಇರಬೇಕು ಎಂಬ ನಂಬುಗೆಯಿಂದ ‘Procrustean’ ಮಂಚದ ಪ್ರಯೋಗ ಶಿಕ್ಷಣದ ಹೆಸರಲ್ಲಿ ನಡೆಯುವುದು. ‘‘ಪಕ್ಕದ ಮನೆ ಚಂದ್ರನಿಗೆ 16ನೇ ಮನೆ ಮಗ್ಗಿ ನೀರು ಕುಡಿದಂತೆ ಬರುತ್ತದೆ, ನಿನಗೇಕೆ ಬರುವುದಿಲ್ಲ?’’ ‘‘ನಿನ್ನ ವಯಸ್ಸಿನ ಗೀತಾ ಡ್ರಾಯಿಂಗ್ ಪರೀಕ್ಷೆಯಲ್ಲಿ ಫಸ್ಟ್ ರ್ಯಾಂಕಿನಲ್ಲಿ ಪಾಸಾಗಿದ್ದಾಳೆ, ನೀನ್ಯಾಕೆ ಆಗಿಲ್ಲ?’’ ‘‘ನಿನ್ನ ಅಕ್ಕ ನಿನ್ನ ಕ್ಲಾಸಿನಲ್ಲಿರುವಾಗ ಭಗವದ್ಗೀತೆಯ ಶ್ಲೋಕಗಳನ್ನು ತಪ್ಪಿಲ್ಲದೆ ಬಾಯಿಪಾಠ ಹೇಳುತ್ತಿದ್ದಳು, ನಿನಗೇಕೆ ಆಗುತ್ತಿಲ್ಲ?’’ ಇತ್ಯಾದಿ ವಿಚಾರಗಳು ಈ ಮೇಲಿನ ನಂಬುಗೆಯಿಂದಲೇ ಹುಟ್ಟಿದವು ಆಗಿರುತ್ತವೆ.
ಮಕ್ಕಳ ಕುರಿತು ಈಗಾಗಲೇ ಸೂಚಿಸಲಾದ ಮಿಥ್ಯಾಕಲ್ಪನೆಗಳ ಜೊತೆಗೆ ಕಲಿಕೆ/ಶಿಕ್ಷಣದ ಕುರಿತಾಗಿ ಪಾಲಕರಲ್ಲಿ ಇರುವ ತಪ್ಪು ಭಾವನೆಗಳು ಇನ್ನಷ್ಟು ಅವಾಂತರಗಳಿಗೆ ಕಾರಣವಾಗಬಹುದು. ಉದಾಹರಣೆಗೆ, ಅಕ್ಷರಜ್ಞಾನ ಮತ್ತು ಮಾಹಿತಿಜ್ಞಾನ, ಉಳಿದುದೆಲ್ಲವೂ ಪ್ರಾಮುಖ್ಯವಲ್ಲ. ಅವರ ಪ್ರಕಾರ, ಕಲಿಯುವ ವಸ್ತು/ವಿಷಯ ಮತ್ತು ಶಿಕ್ಷಕನ ಪಾತ್ರವೇ ಪ್ರಧಾನ, ಕಲಿಯುವಾತನ ಗುಣಸ್ವಭಾವಗಳು, ಆಸಕ್ತಿ, ಶಕ್ತಿಸಾಮರ್ಥ್ಯಗಳು ಗೌಣ. ತರಗತಿಗಳಲ್ಲಿ ಶಿಕ್ಷಕನ ನೇರ ಬೋಧನೆಯ ಪರಿಣಾಮವಾಗಿ ಮಕ್ಕಳ ಶಿಕ್ಷಣ ನಡೆಯುತ್ತದೆ. ಶಿಕ್ಷಕ ಕಲಿಸಿದರೇನೇ ಕಲಿಕೆ ನಡೆಯುವುದು, ಮಕ್ಕಳು ತಾವು ತಾವಾಗಿಯೇ ಕಲಿಯಲು ಅಶಕ್ತರು. ಹೆಚ್ಚೆಚ್ಚು ಕಲಿಸಿದರೇನೇ ಕಲಿಕೆ ಗಟ್ಟಿಯಾಗುವುದು ಎಂಬಿತ್ಯಾದಿ ಭಾವನೆಗಳು ಪಾಲಕರಲ್ಲಿ ಇವೆ. ಕಲಿಕೆ ಪರಿಣಾಮಕಾರಿಯಾಗಬೇಕಾದರೆ ಹೆಚ್ಚೆಚ್ಚು ಪರೀಕ್ಷೆಗಳು, ಪರೀಕ್ಷೆಗಳಿಗಾಗಿ ತಯಾರಿ (ಟ್ಯೂಷನ್ ಇತ್ಯಾದಿ), ಹೋಂವರ್ಕ್ ತಿದ್ದುವಿಕೆ, ತಿದ್ದಿ ಬರೆಸುವಿಕೆ ಇತ್ಯಾದಿ ಕ್ರಿಯೆಗಳು ಶಾಲೆಗಳಲ್ಲಿ ನಡೆಯುತ್ತವೆ. ಪಾಲಕರು ಬಯಸುವುದೂ ಇದನ್ನೇ! ಇದರ ಫಲವಾಗಿ, ಮಕ್ಕಳು ಕೇವಲ ಪರೀಕ್ಷೆಗಳನ್ನು ಎದುರಿಸುವುದು, ತಪ್ಪಾಗದಂತೆ ನಿಗಾ ವಹಿಸುವುದು ಇಷ್ಟರಲ್ಲೇ ಕೌಶಲ್ಯವನ್ನು ಪಡೆಯುವರೇ ವಿನಾ ಸ್ವತಂತ್ರವಾಗಿ ಕಲಿಯುವ ಆತ್ಮವಿಶ್ವಾಸವನ್ನಾಗಲೀ ಸ್ವಂತಿಕೆಯನ್ನಾಗಲೀ ಬೆಳೆಸಲಾರರು ಎಂಬುದು ಹೆಚ್ಚಿನ ಪಾಲಕರಿಗೆ ತಿಳಿಯದು. ಹುಸಿ ಕಲಿಕೆಯನ್ನೇ ನಿಜವಾದ ಕಲಿಕೆ ಎಂದು ನಂಬುವರು.
ಇಂದು ಬದುಕಿನಲ್ಲಿ ಪೈಪೋಟಿ ಹೆಚ್ಚಾಗಿ ಇರುವುದರಿಂದ ಬದುಕನ್ನು ಎದುರಿಸಲು ಸಾಧ್ಯವಾಗುವಂತೆ ಶಾಲೆಗಳಲ್ಲಿ ಪಾಠ, ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚೆಚ್ಚು ಸ್ಪರ್ಧೆಗಳಿಗೆ ಅವಕಾಶವಿರಬೇಕು, ಸ್ಪರ್ಧೆಗಳಲ್ಲಿ ಬಹುಮಾನಗಳಿರಬೇಕು. ಮಕ್ಕಳು ಚೆನ್ನಾಗಿ ಕಲಿಯಬೇಕಾದರೆ ಶಿಕ್ಷಕರ ಶಿಕ್ಷೆಯ ಭಯವಿರಬೇಕು. ಸೋಲು ಗೆಲುವಿನ ಪರಿಜ್ಞಾನವಿರಬೇಕು ಎಂಬೆಲ್ಲಾ ಭಾವನೆ ಪಾಲಕರಲ್ಲಿ ಬೇರೂರಿದೆ. ಶಿಸ್ತು, ಶಿಕ್ಷೆ, ಮಕ್ಕಳ ಬುದ್ಧ್ದಿವಂತಿಕೆ ಇತ್ಯಾದಿ ವಿಚಾರಗಳಲ್ಲಿ ತಮ್ಮದೇ ಆದ ವಿಚಿತ್ರ ನಿಲುವನ್ನು ಹೊಂದಿದವರಾಗಿರುತ್ತಾರೆ.
ಇನ್ನೊಂದು ಭ್ರಮೆ ಏನೆಂದರೆ ಇಂಗ್ಲಿಷ್ ಮೀಡಿಯಂ ಶಾಲೆಗಳಲ್ಲಿ ಕಲಿತರೇನೇ ಮಕ್ಕಳು ಬುದ್ಧಿವಂತರಾಗಲು, ಜಾಣರಾಗಲು ಸಾಧ್ಯ. ಎಲ್‌ಕೆಜಿ, ಯುಕೆಜಿ ಮತ್ತು ಇಂಗ್ಲಿಷ್ ಮೀಡಿಯಂ ಎಂಬ ನಾಮಫಲಕವಿರುವ ಶಾಲೆಗಳಿಗೆ ತಮ್ಮ ಮಕ್ಕಳು ಒಮ್ಮೆ ಹೊಕ್ಕು ಹೊರಗೆ ಬಂದಲ್ಲಿ ತಮ್ಮ ಬದುಕು ಸಾರ್ಥಕವಾಯಿತು, ಪರಮ ಪಾವನವಾಯಿತು ಎಂದು ಭಾವಿಸುವ ಪಾಲಕರು ಬಹಳಷ್ಟು ಜನ ಇದ್ದಾರೆ. ಎಷ್ಟು ಹಣ ತೆತ್ತಾದರೂ ಅಂತಹ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಸಿದ್ಧರಿದ್ದಾರೆ.
ಈ ಎಲ್ಲಾ ಮಿಥ್ಯಾ ಭಾವನೆಗಳ ಹಾಗೂ ಕೆಟ್ಟ ಪ್ರಯೋಗಗಳ ಫಲವಾಗಿ ಮಕ್ಕಳಲ್ಲಿ ಒಂದಲ್ಲ ಒಂದು ರೀತಿಯ ಕಲಿಕೆಯ ದೋಷಗಳು ಹುಟ್ಟಿಕೊಳ್ಳುವುವು. ಉದಾಹರಣೆಗೆ, dyslexia, dyscalculia, dysphasia, dysgraphia, dysnomia, agnosia, echolalia ಮಾತ್ರವಲ್ಲ ಹತ್ತು ಹಲವಾರು ಮಾನಸಿಕ ಮತ್ತು ಮನೋದೈಹಿಕ ದೋಷಗಳು ಕಂಡುಬರುವುವು. ಇವು ಗೋಚರವಾಗಿಯೋ, ಅಗೋಚರವಾಗಿಯೋ ಮಗುವಿನಲ್ಲಿ ಹುಟ್ಟಿಕೊಂಡು ಮಗುವಿನ ಕಲಿಕೆ ಮತ್ತು ವ್ಯಕ್ತಿತ್ವದ ಮೇಲೆ ದುಷ್ಪರಿಣಾಮಗಳನ್ನುಂಟು ಮಾಡುವುವು ಎಂದು ಎಷ್ಟು ಜನ ಪಾಲಕರು ಬಲ್ಲರು?
ಮಗುವಿನ ಮನಸ್ಸು, ಕಲಿಕೆ, ಅವುಗಳ ಪ್ರಕ್ರಿಯೆ, ಸಮಸ್ಯೆಗಳ ಕುರಿತು ನಾವು ಹೆಚ್ಚು ಹೆಚ್ಚಾಗಿ ಅರಿತುಕೊಂಡಷ್ಟೂ ಮಗುವಿಗೆ ಕ್ಷೇಮ. ಅದರ ಹೊರತು, ನಮ್ಮ ಶಿಕ್ಷಣದಲ್ಲಿ ಏನು ತೊಂದರೆಯಾಗಿದೆ? ನಾವೆಲ್ಲಾ ಅದೇ ಶಿಕ್ಷಣವನ್ನು ಪಡೆದಿಲ್ಲವೇ? ಪಡೆದು ಮುಂದಕ್ಕೆ ಬಂದಿಲ್ಲವೇ? ಎಂಬ ಶುಷ್ಕ ತರ್ಕದಿಂದ ಏನೂ ಪ್ರಯೋಜನವಾಗದು.