ರಾಹುಲ್ ಗಾಂಧಿ ಹೇಳಿಕೆ ತಿರುಚಿದ ಪ್ರಕರಣ: ಝೀಟಿವಿ ನಿರೂಪಕ ರೋಹಿತ್ ರಂಜನ್ ಬಂಧನದಿಂದ ರಕ್ಷಣೆ ನೀಡಿದ ಸುಪ್ರೀಂಕೋರ್ಟ್
ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಯನ್ನು ತಿರುಚಿ ಸುದ್ದಿ ಪ್ರಸಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಝೀ ಸುದ್ದಿ ವಾಹಿನಿಯ ನಿರೂಪಕ ರೋಹಿತ್ ರಂಜನ್ ಅವರನ್ನು ರಾಜಸ್ಥಾನ ಅಥವಾ ಛತ್ತೀಸ್‌ಗಢ ಪೊಲೀಸರು ಬಂಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ ಎಂದು NDTV ವರದಿ ಮಾಡಿದೆ.
ಕಾಂಗ್ರೆಸ್ ಆಡಳಿತವಿರುವ ಛತ್ತೀಸ್‌ಗಢ ಹಾಗೂ ರಾಜಸ್ಥಾನದಲ್ಲಿ ಪ್ರಕರಣಗಳನ್ನು ಎದುರಿಸುತ್ತಿರುವ ಟಿವಿ ನಿರೂಪಕ, ತನ್ನ ವಿರುದ್ಧ ದಾಖಲಾಗಿರುವ ಪ್ರಕರಣಗಳಲ್ಲಿ "ಯಾವುದೇ ದಬ್ಬಾಳಿಕೆಯ ಕ್ರಮ" ದಿಂದ ರಕ್ಷಣೆ ನೀಡುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಮೊರೆ ಹೋಗಿದ್ದರು.
ಕೇರಳದಲ್ಲಿ ತಮ್ಮ ಸ್ವಕ್ಷೇತ್ರ ವಯನಾಡಿನಲ್ಲಿ ತಮ್ಮ ಕಚೇರಿಯಲ್ಲಿ ದಾಂಧಲೆಗೈದ ಘಟನೆ ಸಂಬಂಧ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೀಡಿದ್ದ ಪ್ರತಿಕ್ರಿಯೆಯನ್ನು ಝೀ ನ್ಯೂಸ್ ಮತ್ತದರ ನಿರೂಪಕ ದುರುದ್ದೇಶದಿಂದ ತಿರುಚಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು.
ತಮ್ಮ ಕಚೇರಿಯಲ್ಲಿ ದಾಂಧಲೆಗೈದವರನ್ನು ಬೇಜವಾಬ್ದಾರಿಯಿಂದ ವರ್ತಿಸಿದ ಮಕ್ಕಳು ಎಂದು ರಾಹುಲ್ ಹೇಳಿದ್ದನ್ನೇ ಮುಂದಿಟ್ಟುಕೊಂಡು ಅವರು ಉದಯಪುರದಲ್ಲಿ ಟೈಲರ್ ಕನ್ಹಯ್ಯಾಲಾಲ್ ಆರೋಪಿಗಳ ಕುರಿತು ಹಾಗೆ ಹೇಳಿದ್ದಾರೆಂದು ಝೀ ನಿರೂಪಕ ರೋಹಿತ್ ರಂಜನ್ ಹೇಳಿದ್ದರು. ನಂತರ ತಮ್ಮ ಪ್ರಮಾದಕ್ಕಾಗಿ ಅವರು ಕ್ಷಮೆಯಾಚಿಸಿದ್ದರು.
ರೋಹಿತ್ ರಂಜನ್ ವಿರುದ್ಧ ಛತ್ತೀಸ್ ಗಡ ಹಾಗೂ ರಾಜಸ್ಥಾನದಲ್ಲಿ ಪ್ರಕರಣ ದಾಖಲಾಗಿದ್ದು, ಈ ಎರಡು ರಾಜ್ಯಗಳ ಪೊಲೀಸರು ರಂಜನ್ ನನ್ನು ಬಂಧಿಸಲು ಸಜ್ಜಾಗಿದ್ದವು.