ರೂ 62,478 ಕೋಟಿ ಹಣವನ್ನು ಚೀನಾಗೆ ಅಕ್ರಮವಾಗಿ ವರ್ಗಾಯಿಸಿದ್ದ ವಿವೋ ಇಂಡಿಯಾ: ಇಡಿ ಮಾಹಿತಿ

Update: 2022-07-08 09:16 GMT

ಹೊಸದಿಲ್ಲಿ: ಚೀನಾದ ಸ್ಮಾರ್ಟ್ ಫೋನ್ ತಯಾರಕ ಸಂಸ್ಥೆ ವಿವೋ ಇದರ ಭಾರತೀಯ ಅಂಗಸಂಸ್ಥೆ ವಿವೋ ಇಂಡಿಯಾ ಚೀನಾಗೆ ಅಕ್ರಮವಾಗಿ ರೂ 62,476 ಕೋಟಿ ಹಣ ವರ್ಗಾವಣೆ ಮಾಡಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

ಈ ಮೊತ್ತವು ವಿವೋ ಇಂಡಿಯಾಗೆ ತನ್ನ ಸ್ಮಾರ್ಟ್ ಫೋನ್‍ಗಳ ಮಾರಾಟದಿಂದ ದೊರೆತ ಒಟ್ಟು ಆದಾಯವಾದ ರೂ 1,25,185 ಕೋಟಿಯ ಸುಮಾರು ಶೇ 50ರಷ್ಟಾಗಿದೆ ಹಾಗೂ ಸಂಸ್ಥೆ ನಷ್ಟದಲ್ಲಿದೆ ಎಂದು ಹೇಳಿಕೊಂಡು ತೆರಿಗೆ ತಪ್ಪಿಸುವ ಉದ್ದೇಶದಿಂದ ಹೀಗೆ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.

ಇಲ್ಲಿಯ ತನಕ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ 2002 ಇದರ ವಿವಿಧ ನಿಬಂಧನೆಗಳ ಅಡಿಯಲ್ಲಿ ವಿವೋ ಇಂಡಿಯಾಗೆ ಸೇರಿದ 119 ಬ್ಯಾಂಕ್ ಖಾತೆಗಳು ಹಾಗೂ ಅವುಗಳಲ್ಲಿದ್ದ ರೂ 465 ಕೋಟಿ, ವಿವೋ ಇಂಡಿಯಾದ ರೂ 66 ಕೋಟಿ ಮೊತ್ತದ ಎಫ್‍ಡಿಗಳು, 2 ಕೆಜಿ ಚಿನ್ನದ ಗಟ್ಟಿಗಳು  ಹಾಗೂ ರೂ 73 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ನಿರ್ದೇಶನಾಲಯ ತಿಳಿಸಿದೆ.

ಭಾರತದಲ್ಲಿ ವಿವೋ ಇಂಡಿಯಾಗೆ ಸೇರಿದ 48 ಕಡೆಗಳಲ್ಲಿ ಹಾಗೂ ಅದಕ್ಕೆ ಸಂಬಂಧಿಸಿದ 23 ಇತರ ಕಂಪೆನಿಗಳ ಮೇಲೆ ಜಾರಿ ನಿರ್ದೇಶನಾಲಯ ಶೋಧ ಕಾರ್ಯಾಚರಣೆ ನಡೆಸಿದ ಎರಡು ದಿನಗಳ ನಂತರ ಈ ಅಧಿಕೃತ ಹೇಳಿಕೆ ಬಂದಿದೆ.

ಡಿಸೆಂಬರ್ 2014ರಲ್ಲಿ ಕಂಪೆನಿ ಭಾರತದಲ್ಲಿ ಕಾರ್ಯಾರಂಭಗೊಂಡಾಗ ವಿವೋ ಇಂಡಿಯಾಗೆ ಸಂಬಂಧಿಸಿದ ಗ್ರ್ಯಾಂಡ್ ಪ್ರಾಸ್ಪೆಕ್ಟ್ ಇಂಟರ್‍ನ್ಯಾಷನಲ್ ಕಮ್ಯುನಿಕೇಶನ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆ ಮತ್ತದರ ಷೇರುದಾರರು  ಫೋರ್ಜರಿ ಮಾಡಿದ ದಾಖಲೆಗಳು ಹಾಗೂ ನಕಲಿ ವಿಳಾಸಗಳನ್ನು ಬಳಸಿತ್ತು.  ಭಾರತ ಮೂಲದ ಲೆಕ್ಕ ಪರಿಶೋಧಕರಾದ ನಿತಿನ್ ಗರ್ಗ್ ಸಹಾಯದಿಂದ ಹೀಗೆ ಮಾಡಿದ್ದ ಚೀನಿ ನಾಗರಿಕರಾದ ಝೆಂಗ್ಶೆನ್ ಔ, ಬಿನ್ ಲೌ ಮತ್ತು ಝಾಂಗ್ ಜೀ 2018 ಹಾಗೂ 2021ರ ನಡುವೆ ಭಾರತ ತೊರೆದಿದ್ದರು.

ಅವರು ನಮೂದಿಸಿದ್ದ ವಿಳಾಸ ಸರಕಾರಿ ಕಟ್ಟಡದ್ದಾಗಿತ್ತು ಹಾಗೂ ಮನೆಯ ವಿಳಾಸ ಹಿರಿಯ ಅಧಿಕಾರಿಯೊಬ್ಬರದ್ದಾಗಿತ್ತು ಎಂದು ಇಡಿ ಹೇಳಿಕೆ ತಿಳಿಸಿದೆ.

ವಿವೋ ಇದರ ಮಾಜಿ ನಿರ್ದೇಶಕರಾಗಿರುವ ಬಿನ್ ಲೌ ಎಂಬಾತ ಗ್ರ್ಯಾಂಡ್ ಪ್ರಾಸ್ಪೆಕ್ಟ್ ಕಂಪನಿಯ ನಿರ್ದೇಶಕನೂ ಆಗಿದ್ದ  ಹಾಗೂ ಈತ ಭಾರತದಲ್ಲಿ 2014-2015 ನಡುವೆ 18 ಕಂಪೆನಿಗಳನ್ನು ಆರಂಭಿಸಿದ್ದರೆ ಝಿಕ್ಸಿನ್ ವೀ ಎಂಬಾತ ನಾಲ್ಕು ಇತರ ಕಂಪೆನಿಗಳನ್ನು ಆರಂಭಿಸಿದ್ದ. ಒಟ್ಟು 22 ಕಂಪೆನಿಗಳು ವಿವೋ ಇಂಡಿಯಾಗೆ ಹಣ ವರ್ಗಾಯಿಸಿದ್ದರೆ  ವಿವೋ ಅದನ್ನು ಚೀನಾಗೆ ಕಳುಹಿಸಿತ್ತು ಎಂದು ಜಾರಿ ನಿರ್ದೇಶನಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News