ಕಾಳಿ ಮಾತೆಯನ್ನು ಹೇಗೆ ಆರಾಧಿಸಬೇಕೆಂದು ಬಿಜೆಪಿ ನಮಗೆ ಹೇಳಬೇಕಾಗಿಲ್ಲ: ಮಹುವಾ ಮೊಯಿತ್ರಾ

Update: 2022-07-08 12:07 GMT

ಕೊಲ್ಕತ್ತಾ: ಕಾಳಿ ಮಾತೆಯ ಕುರಿತು ಹೇಳಿಕೆ ನೀಡಿ ವಿವಾದಕ್ಕೀಡಾಗಿರುವ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆ ಮಹುವಾ ಮೊಯಿತ್ರಾ ತಮ್ಮ ವಿರುದ್ಧ ಬಿಜೆಪಿ ಮಾಡುತ್ತಿರುವ ಟೀಕೆಗಳಿಗೆ ಪ್ರತಿಕ್ರಿಯಿಸಿ, ಕೇಸರಿ ಪಕ್ಷವೊಂದೇ ಹಿಂದು ದೇವರುಗಳ ಮೇಲೆ ಅಧಿಕಾರ ಹೊಂದಿಲ್ಲ, ದೇವತೆಯನ್ನು ಹೇಗೆ ಆರಾಧಿಸಬೇಕೆಂಬುದನ್ನು ಪಕ್ಷವು ಬಂಗಾಳಿಗಳಿಗೆ ಕಲಿಸಿ ಕೊಡಬೇಕಾಗಿಲ್ಲ ಎಂದು ಹೇಳಿದ್ದಾರೆ.

ಇಂಡಿಯಾ ಟುಡೇ ಈಸ್ಟ್ ಕಾಂಕ್ಲೇವ್‍ನಲ್ಲಿ ಚಿತ್ರ ತಯಾರಕಿ ಲೀನಾ ಮಣಿಮೇಘಲೈ ಅವರ ಕಾಳಿ ಚಿತ್ರದ ಪೋಸ್ಟರ್ ವಿವಾದ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಮಹುವಾ  ಕಾಳಿ ಮಾತೆಯನ್ನು ಮಾಂಸಾಹಾರ ಸೇವಿಸುವ ಹಾಗೂ ಮದ್ಯ ಸ್ವೀಕರಿಸುವ ದೇವತೆಯಾಗಿ ಕಲ್ಪಿಸಲು ಓರ್ವ ವ್ಯಕ್ತಿಯಾಗಿ ತಮಗೆ ಎಲ್ಲಾ ಹಕ್ಕು ಇದೆ ಎಂದಿದ್ದರು.

ಆಕೆಯ ಈ ಹೇಳಿಕೆಯಿಂದ ಆಕೆಯ ಪಕ್ಷ ದೂರ ಸರಿದು ನಿಂತಿದ್ದನ್ನು ಇಲ್ಲಿ ಸ್ಮರಿಸಬಹುದು.

"ನಾನು ಪ್ರಬುದ್ಧ ರಾಜಕಾರಣಿಯಾಗಿ ವರ್ತಿಸಿದ್ದೇನೆ ಎಂದು ಅನಿಸುತ್ತದೆ. ಬಿಜೆಪಿಯು ತನ್ನದೇ ಆದ ಹಿಂದುತ್ವದ ಆವೃತ್ತಿಯನ್ನು ಹೇರುವ ವಿಚಾರದಿಂದ ನಾವು ದೂರ ಸರಿದು ನಿಂತಿದ್ದೆವು. ಅದರ ನಿಲವು ಉತ್ತರ ಭಾರತದ ಪದ್ಧತಿಗಳಿಗೆ ಅನುಸಾರವಾಗಿದೆ. ಪಶ್ಚಿಮ ಬಂಗಾಳದಂತಹ ದೇಶದ ಇತರ ಭಾಗಗಳ ಜನರ ಮೇಲೆ ತನ್ನ ನಿಲುವನ್ನು ಬಿಜೆಪಿ ಹೇರಬಾರದು. ಕಾಳಿಯ ಆರಾಧನೆಯನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ನಡೆಸಬೇಕೆಂದು ನಮಗೆ ಕಲಿಸಲು ಬಿಜೆಪಿ ಯಾರು? ರಾಮ ಅಥವಾ ಹನುಮಾನ್ ಬಿಜೆಪಿಗೆ ಮಾತ್ರ ಸೇರಿದವರಲ್ಲ,  ಪಕ್ಷವು ಹಿಂದು ಧರ್ಮದ ಗುತ್ತಿಗೆ ಪಡೆದುಕೊಂಡಿದೆಯೇ, ಕಾಳಿಭಕ್ತೆಯಾಗಿ ನನಗೆ ಕಾಳಿ ಮಾತೆಯನ್ನು ಹೇಗೆ ಆರಾಧಿಸುವುದೆಂದು ತಿಳಿದಿದೆ, ಬಂಗಾಳಿಗಳು 2000 ವರ್ಷಗಳಿಂದ ಕಾಳಿ ಮಾತೆಯನ್ನು ಆರಾಧಿಸುತ್ತಿದ್ದಾರೆ" ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News