ದಿಲ್ಲಿಯ ಆಪ್ ಸರಕಾರ ಜಾಹೀರಾತುಗಳಿಗೆ ಮಾಡುವ ವೆಚ್ಚ 10 ವರ್ಷಗಳಲ್ಲಿ 44 ಪಟ್ಟು ಏರಿಕೆ: ಆರ್‌ಟಿಐಯಿಂದ ಬಹಿರಂಗ

Update: 2022-07-08 10:44 GMT

ಹೊಸದಿಲ್ಲಿ: ದಿಲ್ಲಿಯ ಆಪ್ ಸರಕಾರವು ಬಯೋ ಡೀಕಂಪೋಸರ್ ಯೋಜನೆ ಜಾರಿಗೊಳಿಸಲು ಮಾಡಿದ ಖರ್ಚಿಗಿಂತ ಅದರ ಜಾಹಿರಾತಿಗೆ ಮಾಡಿದ ಖರ್ಚು ಅಧಿಕವಾಗಿದೆ ಎಂಬ ವರದಿಗಳ ನಡುವೆ ಮಾಹಿತಿ ಹಕ್ಕುಗಳ ಕಾಯಿದೆಯಡಿ ದೊರತ ವಿವರಗಳನ್ನು ಗಮನಿಸಿದರೆ ದಿಲ್ಲಿ ಸರಕಾರವು ಕಳೆದ 10 ವರ್ಷಗಳಲ್ಲಿ ಜಾಹೀರಾತುಗಳಿಗೆ 44 ಪಟ್ಟು ಅಧಿಕ ವೆಚ್ಚ ಮಾಡಿದೆ ಎಂದು Scroll.in ವರದಿ ಮಾಡಿದೆ.

ಬಿಹಾರದ ವೈಶಾಲಿ ನಿವಾಸಿ ಕನ್ಹಯ್ಯಾ ಕುಮಾರ್ ಎಂಬವರು ಕಳೆದ 10 ವರ್ಷಗಳಲ್ಲಿ ಆಪ್ ಸರಕಾರ ಜಾಹೀರಾತುಗಳಿಗೆ ಮಾಡಿದ ಖರ್ಚುಗಳ ವಿವರ ಕೋರಿದ್ದರು.  ದಿಲ್ಲಿ ಸರಕಾರದ ಜಾಹೀರಾತು ಏಜನ್ಸಿಯಾಗಿರುವ ಶಬ್ದಾರ್ಥ್ ಇದರ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಈ ಅರ್ಜಿಯನ್ನು ಈ ವರ್ಷದ ಮೇ 2ರಂದು ಸಲ್ಲಿಸಲಾಗಿತ್ತು.

ಇದಕ್ಕೆ ದೊರೆತ ಉತ್ತದಲ್ಲಿ  ಕಳೆದ 10 ವರ್ಷಗಳಲ್ಲಿ, ಅಂದರೆ 2012-13 ಹಾಗೂ 2021-22 ನಡುವೆ ಆಪ್ ಸರಕಾರ ಜಾಹೀರಾತು, ಪ್ರಚಾರ ಮತ್ತಿತರ ವೆಚ್ಚಗಳಿಗೆ 44 ಪಟ್ಟು ಹೆಚ್ಚು ಖರ್ಚು ಮಾಡಿದೆ. 2012-13ರಲ್ಲಿ ಈ ನಿಟ್ಟಿನಲ್ಲಿ ಖರ್ಚು ರೂ 11.18 ಕೋಟಿ ಆಗಿದ್ದರೆ 2021-22ರಲ್ಲಿ ಖರ್ಚು ರೂ 488.97 ಕೋಟಿ ಆಗಿದೆ.

2013ರಲ್ಲಿ ದಿಲ್ಲಿಯಲ್ಲಿ ಹಿಂದಿನ ಶೀಲಾ ದೀಕ್ಷಿತ್ ನೇತೃತ್ವದ ಸರಕಾರದ ಅವಧಿ ಮುಗಿದಿತ್ತು ಹಾಗೂ 2015ರಲ್ಲಿ ಕೇಜ್ರಿವಾಲ್ ಸರಕಾರ ಅಧಿಕಾರಕ್ಕೆ ಬಂದಂದಿನಿಂದ ಜಾಹೀರಾತು ಮೇಲಿನ ವೆಚ್ಚಗಳು ಏರಿಕೆಯಾಗಿರುವುದು ಆರ್‍ಟಿಐ ಉತ್ತರದಿಂದ ಸ್ಪಷ್ಟವಿದೆ.

2­015-16ರಲ್ಲಿ ರೂ 81.23 ಕೋಟಿ ಖರ್ಚು ಮಾಡಲಾಗಿದ್ದರೆ 2016-17ರಲ್ಲಿ ರೂ 67.25 ಕೋಟಿ,  2017-18 ರಲ್ಲಿ ರೂ 117.76 ಕೋಟಿ, 2018-19 ರಲ್ಲಿ ರೂ 45.54 ಕೋಟಿ ಹಾಗೂ 2019-20ರಲ್ಲಿ ರೂ 199.99 ಕೋಟಿ ವೆಚ್ಚ ಮಾಡಿದೆ ಎಂದು ಆರ್‍ಟಿಐ ಮಾಹಿತಿ ತಿಳಿಸಿದೆ.

ರೈತರು ಕೃಷಿ ತ್ಯಾಜ್ಯ ಸುಟ್ಟು ಪರಿಸರ ಮಾಲಿನ್ಯ ಉಂಟು ಮಾಡುವುದನ್ನು ತಡೆಯುವ ಸಲುವಾಗಿ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯು ಅಭಿವೃದ್ಧಿ ಪಡಿಸಿದ ಬಯೋ ಡೀಕಂಪೋಸರ್ ಬಳಕೆಗೆ ಆಪ್ ಸರಕಾರ 2020-21 ಹಾಗೂ 2021-22 ರಲ್ಲಿ ಕೇವಲ ರೂ 68 ಲಕ್ಷ ವ್ಯಯಿಸಿದ್ದರೆ ಅದರ ಜಾಹೀರಾತಿಗಾಗಿ ರೂ. 23 ಕೋಟಿ ಖರ್ಚು ಮಾಡಿದೆ ಎಂದು ಇತ್ತೀಚೆಗೆ ಮಾಧ್ಯಮವೊಂದು ವರದಿ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News