ಕುಂದಾಪುರ; ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಗೆ 10 ವರ್ಷ ಕಠಿಣ ಸಜೆ
ಕುಂದಾಪುರ:ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿ ಗರ್ಭವತಿಯ ನ್ನಾಗಿಸಿ ಮೋಸ ಮಾಡಿರುವ ಪ್ರಕರಣದ ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ ವಿಧಿಸಿ ಕುಂದಾಪುರದಲ್ಲಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶುಕ್ರವಾರ ಆದೇಶ ನೀಡಿದ್ದಾರೆ.
ಕೆರಾಡಿ ನಿವಾಸಿ ಗಣೇಶ್ ಶೆಟ್ಟಿ (37) ಶಿಕ್ಷೆಗೆ ಗುರಿಯಾಗಿರುವ ಆರೋಪಿ.
ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ, ಹಾಸ್ಟೆಲಿನಲ್ಲಿ ಉಳಿದು ಕೊಂಡಿದ್ದರು. ಈಕೆ ಅಲ್ಲೇ ಸಮೀಪದ ಗಣೇಶನ ಮನೆಗೆ ಗೆಳೆತಿಯರೊಂದಿಗೆ ಟಿವಿ ನೋಡಲು ಬರುತ್ತಿದ್ದು, ಇದರಿಂದ ಇವರಿಬ್ಬರಿಗೆ ಪರಿಚಯವಾಗಿತ್ತು.
೨೦೧೪ರಲ್ಲಿ ಮದುವೆ ಭರವಸೆ ನೀಡಿ ಆಕೆಯೊಂದಿಗೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭವತಿಯನ್ನಾಗಿಸಿದನು. ಬಳಿಕ ಮದುವೆಗೆ ನಿರಾಕರಿಸಿದ್ದಲ್ಲದೆ ಪೋನ್ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಯುವತಿ ಗಂಡು ಮಗುವಿಗೆ ಜನ್ಮ ನೀಡಿದ್ದು ಲೈಂಗಿಕ ದೌರ್ಜನ್ಯದ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಆರೋಪಿ ಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಡಿಎನ್‌ಎ ವರದಿಯಲ್ಲೂ ಈತನೇ ಮಗುವಿನ ತಂದೆಯೆಂದು ದೃಢವಾಗಿತ್ತು. ಸುಧೀರ್ಘ ವಿಚಾರಣೆ ಬಳಿಕ ಆರೋಪಿ ಮೇಲಿನ ಆರೋಪಗಳು ಸಾಬೀತಾಗಿದೆ ಎಂದು ಅಭಿಪ್ರಾಯ ಪಟ್ಟ ನ್ಯಾಯಾಧೀಶ ಅಬ್ದುಲ್ ರಹೀಮ್ ಹುಸೇನ್ ಶೇಖ್, ಆರೋಪಿಗೆ ಅತ್ಯಾಚಾರ ಪ್ರಕರಣದಡಿ 10 ವರ್ಷ ಕಠಿಣ ಶಿಕ್ಷೆ, 10 ಸಾವಿರ ರೂ. ದಂಡ ಹಾಗೂ ನಂಬಿಸಿ ಮೋಸ ಮಾಡಿದ್ದಕ್ಕೆ 1 ವರ್ಷ ಸಜೆ, 5 ಸಾವಿರ ದಂಡ ವಿಧಿಸಿದೆ. ಸಂತಸ್ತೆಗೆ ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರ ಒದಗಿಸಲು ಆದೇಶ ನೀಡಲಾಗಿದೆ. ಪ್ರಾಸಿಕ್ಯೂಶನ್ ಪರವಾಗಿ ಜಿಲ್ಲಾ ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ಬೇಳೂರು ವಾದಿಸಿದ್ದರು.