ಬೊಕ್ಕಸ, ಮೀಸಲಾತಿಗೆ ಹೊಡೆತ ನೀಡಲಿರುವ ಸರಕಾರಿ ಉದ್ದಿಮೆಗಳ ಖಾಸಗೀಕರಣ
ಸರಕಾರಿ ಬ್ಯಾಂಕ್‌ಗಳ ಖಾಸಗೀಕರಣದಿಂದ ಹೆಚ್ಚಿನ ಸಂಕಷ್ಟಕ್ಕೆ ಒಳಗಾಗುವವರು ಮೀಸಲಾತಿಯ ಪ್ರಯೋಜನ ಪಡೆದುಕೊಳ್ಳುವ ಉದ್ಯೋಗಿಗಳು. ಹಿಂದಿನ ನಿರಾಶಾದಾಯಕ ಅನುಭವಗಳ ಹೊರತಾಗಿಯೂ, ಬ್ಯಾಂಕ್‌ಗಳ ಸಂಪೂರ್ಣ ಖಾಸಗೀಕರಣದತ್ತ ಸರಕಾರವು ಸದೃಢ ಹೆಜ್ಜೆಗಳನ್ನು ಇಟ್ಟಂತೆ ಕಾಣುತ್ತದೆ. ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ)ವನ್ನು ಶೇರು ಪೇಟೆಯಲ್ಲಿ ನೋಂದಾಯಿಸಿದ ಬಳಿಕ, ಅದರ ಶೇರು ಬೆಲೆ ಅಗಾಧವಾಗಿ ಕುಸಿದಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಬ್ಯಾಂಕ್‌ಗಳ ಖಾಸಗೀಕರಣ ಎಂಬ ವಿವಾದಿತ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಸಾರ್ವಜನಿಕ ವಲಯದ ಬ್ಯಾಂಕ್ (ಪಿಎಸ್‌ಬಿ)ಗಳಿಂದ ಸಂಪೂರ್ಣವಾಗಿ ಹೊರಬರಲು ಸರಕಾರಕ್ಕೆ ದಾರಿಯನ್ನು ಸುಗಮಗೊಳಿಸುವ ತಿದ್ದುಪಡಿಯೊಂದನ್ನು ಸಂಸತ್‌ನ ಮುಂಬರುವ ಮುಂಗಾರು ಅಧಿವೇಶನದಲ್ಲಿ ಮಂಡಿಸಲು ಕೇಂದ್ರ ಸರಕಾರವು ಉತ್ಸುಕವಾಗಿದೆ ಎಂದು ವಾಣಿಜ್ಯ ಪತ್ರಿಕೆಗಳು ವರದಿ ಮಾಡಿವೆ.
ಬ್ಯಾಂಕಿಂಗ್ ಕಂಪೆನಿಗಳ (ಒಡೆತನಗಳ ಸ್ವಾಧೀನ ಮತ್ತು ವರ್ಗಾವಣೆ) ಕಾಯ್ದೆ, 1970ರ ಅನ್ವಯ, ಕೇಂದ್ರ ಸರಕಾರವು ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಕನಿಷ್ಠ ಶೇ. 51 ಪಾಲನ್ನು ಹೊಂದುವುದು ಅಗತ್ಯವಾಗಿದೆ. ಸರಕಾರಿ ಬ್ಯಾಂಕ್‌ಗಳ ಖಾಸಗೀಕರಣವಾದರೂ, ಸರಕಾರವು ಶೇ. 26 ಪಾಲನ್ನು ಉಳಿಸಿಕೊಳ್ಳಬೇಕು ಹಾಗೂ ಬಳಿಕ ಅದನ್ನು ತಗ್ಗಿಸಬಹುದು ಎನ್ನುವುದು ಸರಕಾರದ ಈ ಮೊದಲಿನ ನಿಲುವಾಗಿತ್ತು. ಸರಕಾರಿ ಬ್ಯಾಂಕ್‌ಗಳ ಒಡೆತನ ಮತ್ತು ಪಾಲುಗಳ ನಿಯಂತ್ರಣಕ್ಕೆ ಸಂಬಂಧಿಸಿದ ವಿಷಯಗಳನ್ನು ಇತ್ಯರ್ಥಪಡಿಸಿಕೊಳ್ಳುವುದಕ್ಕಾಗಿ ಪ್ರಸಕ್ತ ಹಣಕಾಸು ಸಚಿವಾಲಯವು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)ನೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಹೇಳಲಾಗಿದೆ. ಹೂಡಿಕೆ ಮತ್ತು ಸರಕಾರಿ ಆಸ್ತಿ ನಿರ್ವಹಣೆ ಇಲಾಖೆಯು, ಐಡಿಬಿಐ ಬ್ಯಾಂಕನ್ನು ಮಾರಾಟ ಮಾಡಲು ಅಮೆರಿಕದಲ್ಲಿ ರೋಡ್ ಶೋಗಳನ್ನು ನಡೆಸುತ್ತಿರುವ ಸಮಯದಲ್ಲಿ ಈ ಬೆಳವಣಿಗೆಗಳಿಗೆ ಹೆಚ್ಚಿನ ಮಹತ್ವ ಬಂದಿದೆ.
ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಸುಮಾರು 8.26 ಲಕ್ಷ ಜನರು ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ), ಇತರ ಹಿಂದುಳಿದ ವರ್ಗ (ಒಬಿಸಿ) ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗ (ಇಡಬ್ಲುಎಸ್)ಗಳಿಗೆ ಸೇರಿದ ಉದ್ಯೋಗಿಗಳೂ ಸೇರಿದ್ದಾರೆ. ಈ ಬ್ಯಾಂಕ್‌ಗಳು ಮೀಸಲಾತಿ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿವೆ.
ಸರಕಾರಿ ಬ್ಯಾಂಕ್‌ಗಳ ಖಾಸಗೀಕರಣದಿಂದ ಹೆಚ್ಚಿನ ಸಂಕಷ್ಟಕ್ಕೆ ಒಳಗಾಗುವವರು ಮೀಸಲಾತಿಯ ಪ್ರಯೋಜನ ಪಡೆದುಕೊಳ್ಳುವ ಉದ್ಯೋಗಿಗಳು. ಹಿಂದಿನ ನಿರಾಶಾದಾಯಕ ಅನುಭವಗಳ ಹೊರತಾಗಿಯೂ, ಬ್ಯಾಂಕ್‌ಗಳ ಸಂಪೂರ್ಣ ಖಾಸಗೀಕರಣದತ್ತ ಸರಕಾರವು ಸದೃಢ ಹೆಜ್ಜೆಗಳನ್ನು ಇಟ್ಟಂತೆ ಕಾಣುತ್ತದೆ. ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ)ವನ್ನು ಶೇರು ಪೇಟೆಯಲ್ಲಿ ನೋಂದಾಯಿಸಿದ ಬಳಿಕ, ಅದರ ಶೇರು ಬೆಲೆ ಅಗಾಧವಾಗಿ ಕುಸಿದಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
‘‘ಸರಕಾರಿ ಬ್ಯಾಂಕ್‌ಗಳಲ್ಲಿ ಗಣನೀಯ ಸಂಖ್ಯೆಯ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಉದ್ಯೋಗಿಗಳು ಮ್ಯಾನೇಜರ್ ಹುದ್ದೆಗಳಲ್ಲಿದ್ದಾರೆ. ಉದ್ಯೋಗಗಳಲ್ಲಿ ಮೀಸಲಾತಿಯನ್ನು, ಕೇವಲ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ದೃಷ್ಟಿಕೋನದಿಂದ ಮಾತ್ರ ನೋಡುವುದಲ್ಲ, ಮುಖ್ಯವಾಗಿ ಈ ಗುಂಪುಗಳನ್ನು ಸಬಲೀಕರಣಗೊಳಿಸುವುದರಿಂದ ಮತ್ತು ಮೇಲೆತ್ತುವುದರಿಂದ ಬರುವ ಸಾಮಾಜಿಕ-ಆರ್ಥಿಕ ಲಾಭದ ದೃಷ್ಟಿಕೋನದಿಂದ ನೋಡಬೇಕು’’ ಎಂಬುದಾಗಿ ಸಾರ್ವಜನಿಕ ವಲಯ ಮತ್ತು ಸೇವೆಗಳ ಮೇಲಿನ ಜನರ ಆಯೋಗವು ಹೇಳಿದೆ.
‘‘ಒಂದೇ ಒಂದು ಸರಕಾರಿ ಬ್ಯಾಂಕ್‌ನ ಖಾಸಗೀಕರಣವೂ ಅಲ್ಲಿ ಈಗಾಗಲೇ ಕೆಲಸ ಮಾಡುತ್ತಿರುವ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಉದ್ಯೋಗಿಗಳ ಸೇವಾ ಪರಿಸ್ಥಿತಿಗಳಲ್ಲಿ ಅಸ್ಥಿರತೆಯನ್ನು ಹುಟ್ಟು ಹಾಕುವುದು ಮಾತ್ರವಲ್ಲ (ಇಂತಹದೇ ಅಸ್ಥಿರತೆಗಳು ಇತರ ಎಲ್ಲಾ ಉದ್ಯೋಗಿಗಳಿಗೂ ಭವಿಷ್ಯದಲ್ಲಿ ಎದುರಾಗಬಹುದು), ಹೊಸ ನೇಮಕಾತಿಗಳಲ್ಲಿ ಈ ಗುಂಪುಗಳ ಜನರ ಸಂವಿಧಾನ ದತ್ತ ಅವಕಾಶಗಳು ಶಾಶ್ವತವಾಗಿ ಕೊನೆಗೊಳ್ಳುತ್ತವೆ’’ ಎಂದು ಅದು ಅಭಿಪ್ರಾಯಪಟ್ಟಿದೆ.
ಈ ಹಿನ್ನೆಲೆಯಲ್ಲಿ, ಭಾರೀ ಚರ್ಚೆಗೊಳಗಾದ ಗ್ಲೋಬಲ್ ಟ್ರಸ್ಟ್ ಬ್ಯಾಂಕ್‌ನ ಉದಾಹರಣೆಯನ್ನು ಸಾರ್ವಜನಿಕ ವಲಯ ಮತ್ತು ಸೇವೆಗಳ ಮೇಲಿನ ಜನರ ಆಯೋಗವು ನೀಡಿದೆ. ಆ ಖಾಸಗಿ ಬ್ಯಾಂಕ್ ತನ್ನ ಠೇವಣಿದಾರರನ್ನು ವಂಚಿಸಿತು ಹಾಗೂ ಅದರಲ್ಲಿ ಏನು ಉಳಿದಿದೆಯೋ ಅದನ್ನು ಉಳಿಸಿಕೊಳ್ಳುವಂತೆ 2004ರಲ್ಲಿ ಸರಕಾರ ಮತ್ತು ಆರ್‌ಬಿಐ ಸರಕಾರಿ ಬ್ಯಾಂಕೊಂದಕ್ಕೆ ಸೂಚನೆ ನೀಡಬೇಕಾಯಿತು ಎನ್ನುವುದನ್ನು ಅದು ಬೆಟ್ಟು ಮಾಡಿದೆ. ‘‘ಅವ್ಯವಹಾರ ನಡೆಸುವ ಹಾಗೂ ವಿಫಲವಾಗಿರುವ ಖಾಸಗಿ ಬ್ಯಾಂಕೊಂದನ್ನು ಸರಕಾರಿ ಬ್ಯಾಂಕೇ ರಕ್ಷಿಸಬೇಕು ಎನ್ನುವುದಕ್ಕೆ ಇತ್ತೀಚಿನ ಯೆಸ್ ಬ್ಯಾಂಕ್ ಹಗರಣವು ಇನ್ನೊಂದು ಉದಾಹರಣೆಯಾಗಿದೆ’’ ಎಂದು ಅದು ಹೇಳಿದೆ.
ಖಾಸಗಿ ಬ್ಯಾಂಕ್‌ಗಳನ್ನು ಮೊದಲು ರಾಷ್ಟ್ರೀಕರಣಗೊಳಿಸಿದಾಗ ಸರಕಾರವು ಸಂಸತ್‌ನಲ್ಲಿ ನೀಡಿದ ಹೇಳಿಕೆಯನ್ನು ಗಮನಿಸಬಹುದಾಗಿದೆ: ‘‘ಬ್ಯಾಂಕ್‌ಗಳು ಮತ್ತು ಅವುಗಳು ಸಾಲ ನೀಡುವ ಕೈಗಾರಿಕಾ ಗುಂಪುಗಳ ನಡುವಿನ ನಂಟನ್ನು ಕಡಿಯುವುದು ಈ ಕ್ರಮದ ಉದ್ದೇಶವಾಗಿದೆ’’. ಸರಕಾರಿ ವಲಯದ ಬ್ಯಾಂಕ್‌ಗಳನ್ನು ಖಾಸಗೀಕರಿಸುವುದೆಂದರೆ ಆ ಅಪವಿತ್ರ ನಂಟನ್ನು ಮರುಸ್ಥಾಪಿಸುವುದು ಎಂದರ್ಥ ಹಾಗೂ ಇಲ್ಲಿ ಸ್ಪಷ್ಟ ಹಿತಾಸಕ್ತಿ ಸಂಘರ್ಷವಿದೆ ಎಂದು ಆಯೋಗ ಹೇಳುತ್ತದೆ. ಕೇಂದ್ರ ಸರಕಾರದ ಉದ್ದಿಮೆ (ಸಿಪಿಎಸ್‌ಇ)ಗಳ ಖಾಸಗೀಕರಣದ ವಿಷಯದಲ್ಲಿ ಸರಕಾರದ ಈವರೆಗಿನ ನಡೆಯು ಈ ವಿಷಯದಲ್ಲಿ ಸರಕಾರಕ್ಕೆ ನೈಜ ಶ್ರದ್ಧೆ ಇಲ್ಲದಿರುವುದನ್ನು ತೋರಿಸುತ್ತದೆ ಎಂಬುದಾಗಿ ಆಯೋಗ ಅಭಿಪ್ರಾಯಪಟ್ಟಿದೆ.
ಈ ನಡುವೆ, ಸರಕಾರಿ ಬ್ಯಾಂಕ್‌ಗಳಿಂದ ಪಡೆದುಕೊಂಡಿರುವ ಬೃಹತ್ ಪ್ರಮಾಣದ ಸಾಲಗಳನ್ನು ಕಾರ್ಪೊರೇಟ್ ಕಂಪೆನಿಗಳು ಸರಿಯಾಗಿ ಮರುಪಾವತಿಸಲು ವಿಫಲವಾಗಿವೆ. ಇದರಿಂದಾಗಿ ಈ ಬ್ಯಾಂಕ್‌ಗಳ ಪರಿಸ್ಥಿತಿಯು ದುರ್ಬಲವಾಗಿದೆ. ಬ್ಯಾಂಕ್‌ಗಳಿಗೆ ಸಾಲ ಮರುಪಾವತಿಸದ ಬೃಹತ್ ಸುಸ್ತಿದಾರ ಕಂಪೆನಿಗಳ ಹೆಸರುಗಳನ್ನು ಈವರೆಗೆ ಬಹಿರಂಗಪಡಿಸಲಾಗಿಲ್ಲ. ಆದರೆ, ಈ ಬೃಹತ್ ಕಂಪೆನಿಗಳ ವಂಚನೆಗೆ ಬಲಿಯಾಗಿರುವ ಸರಕಾರಿ ಬ್ಯಾಂಕ್‌ಗಳು ಅದರ ಪರಿಣಾಮಗಳನ್ನು ಅನುಭವಿಸುತ್ತಿವೆ. ಸರಕಾರಿ ಬ್ಯಾಂಕ್‌ಗಳ ಬ್ಯಾಲನ್ಸ್ ಶೀಟ್‌ಗಳು ವಂಚಕ ಉದ್ಯಮಿಗಳು ಮತ್ತು ಕಾರ್ಪೊರೇಟ್ ಕಂಪೆನಿಗಳು ನಡೆಸಿರುವ ಮೋಸಕ್ಕೆ ನಲುಗಿದರೆ, 12 ಖಾಸಗಿ ಬ್ಯಾಂಕ್‌ಗಳು 2.08 ಲಕ್ಷ ಕೋಟಿ ರೂಪಾಯಿಯಷ್ಟು ಅಗಾಧ ಒಟ್ಟು ಲಾಭ (ಆಪರೇಟಿಂಗ್ ಪ್ರಾಫಿಟ್)ವನ್ನು 2022ರ ಮಾರ್ಚ್ ನಲ್ಲಿ ಗಳಿಸಿವೆ. ಅವುಗಳ ನಿವ್ವಳ ಲಾಭವು ಒಂದೇ ವರ್ಷದಲ್ಲಿ ದ್ವಿಗುಣಗೊಂಡಿದ್ದು, 66,541 ಕೋಟಿ ರೂಪಾಯಿ ಆಗಿದೆ.
‘‘ಎಲ್‌ಐಸಿಯು ಪ್ರತಿ ಷೇರಿಗೆ 61 ರೂಪಾಯಿಯಂತೆ ಐಡಿಬಿಐ ಬ್ಯಾಂಕ್‌ನ ಶೇ. 51 ಷೇರುಗಳನ್ನು ಹೊಂದಿದೆ. ಈಗ ಅದು ಆ ಬ್ಯಾಂಕ್‌ನಿಂದ ಹೊರಬಂದಿದೆ. ಎಲ್‌ಐಸಿಗೆ ಈ ಬ್ಯಾಂಕ್‌ನ ಖಾಯಂ ಒಡೆತನವನ್ನು ಪಡೆಯಲು ಅವಕಾಶ ನೀಡಲು, ಅಗತ್ಯವಿದ್ದರೆ ಕಾನೂನುಗಳಿಗೆ ತಿದ್ದುಪಡಿ ಮಾಡಬೇಕಾಗಿದೆ. ವಿಮಾ ಕಂಪೆನಿಗಳನ್ನು ನಡೆಸಲು ಬ್ಯಾಂಕ್‌ಗಳಿಗೆ ಅವಕಾಶ ನೀಡಿರುವಂತೆಯೇ, ಬ್ಯಾಂಕ್‌ಗಳನ್ನು ನಡೆಸಲು ವಿಮಾ ಕಂಪೆನಿಗಳಿಗೆ ಅವಕಾಶ ನೀಡಬೇಕು. ಸರಕಾರ ತಾರತಮ್ಯ ಮಾಡಬಾರದು. ರೋಡ್‌ಶೋಗಳ ಮೂಲಕ ಐಡಿಬಿಐಯನ್ನು ವಿದೇಶಿ ಹೂಡಿಕೆದಾರರಿಗೆ ಮಾರಾಟ ಮಾಡುವುದು ನಮ್ಮ ಘೋಷಿತ ಸ್ವಾವಲಂಬನೆ ನೀತಿಗೆ ವಿರುದ್ಧವಾಗಿದೆ. ಹಾಗಾಗಿ, ಪ್ರಸ್ತಾಪಿತ ಮಸೂದೆಯನ್ನು ಸಂಸತ್‌ನಲ್ಲಿ ಮಂಡಿಸಬಾರದು ಮತ್ತು ಸರಕಾರಿ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸಬಾರದು ಎಂಬುದಾಗಿ ನಾವು ಸರಕಾರಕ್ಕೆ ಮನವಿ ಮಾಡುತ್ತೇವೆ. ಐಡಿಬಿಐ ಬ್ಯಾಂಕನ್ನು ಯಶಸ್ವಿಯಾಗಿ ನಡೆಸಲು ಎಲ್‌ಐಸಿಗೆ ಅವಕಾಶ ನೀಡುವಂತೆಯೂ ನಾವು ಸರಕಾರಕ್ಕೆ ಮನವಿ ಮಾಡುತ್ತೇವೆ’’ ಎಂದು ಸಾರ್ವಜನಿಕ ವಲಯ ಮತ್ತು ಸೇವೆಗಳ ಮೇಲಿನ ಜನರ ಆಯೋಗವು ಹೇಳಿದೆ.
ಕೃಪೆ: thewire.in