ನಮ್ಮ ಕಾಲಕ್ಕೆ ಸಲ್ಲದ ಮೌನಿ-ಮಾಸಡಿ
ಕೆಲವರು ವಾರಕ್ಕೊಮ್ಮೆ ಭೇಟಿಯಾಗಿ ದಿನಕ್ಕೊಮ್ಮೆ ಫೋನ್ ಮಾಡಿದರೂ ಅಪರಿಚಿತರಾಗಿಯೇ ಉಳಿಯುತ್ತಾರೆ. ಬೇರೆ ಕೆಲವರು ಇಡೀ ಜೀವಮಾನದಲ್ಲಿ ಮೂರೋ ನಾಲ್ಕೋ ಬಾರಿ ಭೇಟಿಯಾಗಿ, ಎಂಟೋ ಹತ್ತು ಸಲ ಮಾತಾಡಿದರೂ ಆತ್ಮೀಯರೆಂದೇ ಭಾಸವಾಗುತ್ತಾರೆ. ಇವರಲ್ಲಿ ಎರಡನೆಯ ಗುಂಪಿಗೆ ಸೇರುವವರ ಪೈಕಿ ನನ್ನ ಗೆಳೆಯರಾದ ಕೃಷ್ಣ ಮಾಸಡಿಯವರೂ ಒಬ್ಬರು. ಅವರ ವ್ಯಕ್ತಿತ್ವ ಮತ್ತು ಬರವಣಿಗೆಯ ಬಗ್ಗೆ ನನಗಿರುವ ಆಕರ್ಷಣೆಯನ್ನು ವಿವರಿಸುವುದು ಕಷ್ಟ. ಭೋಳೆಯಲ್ಲದ ಗ್ರಾಮೀಣ ಮುಗ್ಧತೆ, ತನ್ನನ್ನು ತಾನು ಪ್ರೊಮೋಟ್ ಮಾಡಿಕೊಳ್ಳುವುದೇ ದೊಡ್ಡ ಉದ್ಯಮವಾಗಿರುವ ಈ ಕಾಲದಲ್ಲಿ ಸ್ವ-ಪ್ರಚಾರದ ಬಗೆಗಿನ ನಿರಾಸಕ್ತಿ, ಎಲ್ಲಕ್ಕಿಂತ ಹೆಚ್ಚಾಗಿ ಉಪ್ಪು, ಹುಳಿ, ಖಾರ ತಿನ್ನುವ ಜೀವಕ್ಕೆ ಸಹಜವೆನ್ನಲಾದ ಜೀವನಪ್ರೀತಿ ಮತ್ತು ಅದನ್ನು ಕುರಿತ ಧೋರಣೆ ಹೇಳುತ್ತಾ ಹೋದರೆ ಅದು ನಾನು ಎಲ್ಲರಲ್ಲಿಯೂ ಬಯಸುವ ಗುಣಗಳ ಪಟ್ಟಿಯಾಗಿಬಿಡುತ್ತದೆ. ತನ್ನ ಸೀಮೆಯಿಂದಲೇ ಬಂದ ಲಂಕೇಶ್ ಅವರಿಗೆ ಹಲವು ಕಾಲ, ಹಲವು ಬಗೆಗಳಲ್ಲಿ ಆತ್ಮೀಯನಾಗಿದ್ದರೂ ಅದನ್ನು ‘ಬಂಡವಾಳ’ ಮಾಡಿಕೊಳ್ಳದೆ ಅವರ ಬಗ್ಗೆಯೂ ಆರ್ದ್ರವಾಗಿ ಪ್ರಾಮಾಣಿಕವಾಗಿ ಬರೆದಿರುವ ಕೃಷ್ಣ ಅವರು ಹೀಗೆ ನನಗೆ ಇಷ್ಟ. ಈ ಬರಹಕ್ಕೆ ನಾನು ಕೊಟ್ಟಿರುವ ತಲೆಬರೆಹವೂ ಈ ಮೆಚ್ಚುಗೆಯನ್ನೇ ಹೇಳುವ ಇನ್ನೊಂದು ಹಾದಿ.
ಹಿಂದೊಮ್ಮೆ ಅವರ ‘ಬೂತ’ ಎಂಬ ಕಥಾಸಂಕಲನವನ್ನು ಕುರಿತು ಪುಟ್ಟ ಲೇಖನ ಬರೆದಿದ್ದ ನಾನು ಈಗ ಅವರ ಸಮಗ್ರ ಕಥೆಗಳಿಗೆ ಮುನ್ನುಡಿ ಬರೆಯಲು ಒಪ್ಪಿದ್ದು ಮಾತ್ರ ನನ್ನ ‘ಕಥನ ಕುತೂಹಲ’ದಿಂದ. ಅವರು ಮತ್ತು ಅಂತಹುದೇ ಬೇರೆ ಕೆಲವು ಲೇಖಕ-ಕಲಾವಿದರು ಒಂದು ‘ಮಾದರಿ’ಯನ್ನು ಪ್ರತಿನಿಧಿಸುತ್ತಾರೆ. ಆ ಮಾದರಿಯ ಹಾಡು-ಪಾಡು ಮತ್ತು ಪಡಿಪಾಟಲುಗಳ ಬಗ್ಗೆ ನನಗೆ ಕುತೂಹಲವಿದೆ ಅದನ್ನು ಕುರಿತು ಆಲೋಚಿಸಲು ಇದೊಂದು ಅವಕಾಶ. ಆ ಹಳೆಯ ಲೇಖನದ ಕೆಲವು ಭಾಗಗಳನ್ನು ಇಲ್ಲಿಯೂ ಬಳಸಿಕೊಂಡಿದ್ದೇನೆ.
**
ಮಾಸಡಿಯವರು ಸುಮಾರು ನಲವತ್ತೈದು ವರ್ಷಗಳಲ್ಲಿ ಮೂವತ್ತು ಕಥೆ ಮತ್ತು ಎರಡು ಕಾದಂಬರಿಗಳನ್ನು ಬರೆದಿದ್ದಾರೆ. ಇದರ ಜೊತೆಗೆ ಲೇಖನಗಳ ಸಂಕಲನವೂ ಬಂದಿದೆ. ಬಹಳ ಸಮೃದ್ಧವಾದ ಫಸಲೇನೂ ಅಲ್ಲ. ಮೇಲುನೋಟಕ್ಕೆ ನೋಡಿದಾಗ ವಸ್ತು ಮತ್ತು ನಿರೂಪಣೆಗಳ ಹಂತದಲ್ಲಿಯೂ ಮಹತ್ವದ ಬದಲಾವಣೆ ಆಗಿರುವಂತೆ ತೋರುವುದಿಲ್ಲ. ಆದರೆ ಕೊಂಚ ಎಚ್ಚರಿಕೆಯಿಂದ ಓದಿದಾಗ ಅವರ ಕಥೆಗಳ ವಸ್ತು, ನಿಲುವು ಮತ್ತು ನಿರೂಪಣೆಗಳೆರಡರಲ್ಲೂ ಸೂಕ್ಷ್ಮವಾದ ಬೆಳವಣಿಗೆ ಇರುವುದನ್ನು ಗುರುತಿಸಬಹುದು. ಈ ಬೆಳವಣಿಗೆಗೆ ಅವರು ಅಂತರಂಗ ಮತ್ತು ಬಹಿರಂಗಗಳನ್ನು ಗಮನಿಸಿ ಮಾಗಿರುವುದೇ ಕಾರಣ. ಇನ್ನು ಮುಂದೆ ಈ ಬೆಳವಣಿಗೆಯ ಹಾದಿಯನ್ನು ಕಂಡುಕೊಳ್ಳುವ ಪ್ರಯತ್ನವಿದೆ.ಇವರು ಕನ್ನಡ ಕಥಾಸಾಹಿತ್ಯಕ್ಕೆ ಅಪರೂಪದ ಅತಿಥಿಗಳೇ ವಿನಃ, ಮಳೆ ಇರಲಿ, ಬಿಸಿಲು ಬರಲಿ ಕಥೆಬರೆದು ಬಿಸಾಕುವ ಪ್ರೊಫೆಶನಲ್ ಅಲ್ಲ. ದಲಿತ ಬಂಡಾಯಗಳ, ಪರಿವರ್ತನೆಯ ಅಬ್ಬರ-ಆಶಯಗಳು ಅವರ ಹತ್ತಿರ ಸುಳಿದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅವರು ಆಕರ್ಷಕವಾದ ‘ಕಥೆ’ ಇಲ್ಲದೆ ಕಥೆ ಬರೆಯುವುದಿಲ್ಲ. ಈ ಮಾತು ವಿವರಣೆಯನ್ನು ಬಯಸುತ್ತದೆ: ಜೀವನದ ಹರಹಿನ ಒಂದು ತುಂಡನ್ನು ತನ್ನ ಸಾಮಾಜಿಕ ಅಜೆಂಡಾಗಳ ಜರಡಿಯಲ್ಲಿ ಸೋಸಿತೆಗೆದು, ಪ್ರಾದೇಶಿಕ ಉಪಭಾಷೆಯ ಅಂಗಿತೊಡಿಸಿ, ಕೊಡಮಾಡಿದರೆ ಸಾಕು, ಕಥೆ ಆಯಿತು ಎನ್ನುವ ಭಾವನೆಯು ಈ ದಿನಗಳಲ್ಲಿ ರೂಢಮೂಲವಾಗಿದೆ. ಮಾಸಡಿಯವರಿಗೆ ಇದು ಯಾವುದೂ ಮುಖ್ಯವಲ್ಲ. ಅವರ ಅನುಭವಗಳ ಲೋಕ ವಿಶಾಲವಾದುದು, ಅದಕ್ಕೆ ಅಧ್ಯಾಪಕ ಜೀವನದ ‘ವಿಶ್ರಾಂತಿ’ ದೊರೆತಿಲ್ಲ. ಹೀಗೆ ಪಡೆದ ಅನುಭವಗಳ ಮೂಲಕ ಒಟ್ಟು ಬದುಕನ್ನು ಶೋಧಿಸುವ ಮತ್ತು ಬರೆಯುವುದರ ಮೂಲಕ ತನ್ನದೇ ಅನುಭವಗಳನ್ನು ಶೋಧಿಸುವ ಸೆಳೆತ ಅವರದು. ಹೀಗಾದಾಗ ವಿಶಿಷ್ಟ ಅನುಭವಗಳಿಗಾಗಿ-ತನ್ನದೇ ಅನುಭವ, ತಾನು ಕಂಡ ಅನುಭವ ಮತ್ತು ತನ್ನ ಅನುಭವಗಳಲ್ಲಿ ಪಾತ್ರವಹಿಸಿದ ಇತರರು ಅದನ್ನು ಕಂಡ ಬಗೆಗಿನ ಮುಕ್ತ ಕುತೂಹಲ- ಹುಡುಕಾಟ ಸಾಧ್ಯವಾಗುತ್ತದೆ. ಅಂತಹ ಅನುಭವಗಳನ್ನು ನಿರಾಡಂಬರವಾಗಿ, ಅನಗತ್ಯವಾದ ಅಲಂಕಾರ ಹಾಗೂ ವರ್ಣನೆಗಳ ಗೊಡವೆಗೆ ಹೋಗದೆ ಪೆಡಸಾಗದಂತೆ ಚಿತ್ರಿಸಲು ಮಾಸಡಿಯವರಿಗೆ ಸಾಧ್ಯವಾಗಿದೆ. ಇಷ್ಟಾಗಿಯೂ ಕಥೆಯ ಶಿಲ್ಪದ ಬಗ್ಗೆ ಕರಾರುವಾಕ್ಕಾದ ಕಾಳಜಿಗಳೇನೂ ಅವರಿಗೆ ಇಲ್ಲ. ಹಾಗೆ ನೋಡಿದರೆ ವಿವರಗಳನ್ನು ಚೆಲ್ಲಿಕೊಳ್ಳುವುದು ಅವರ ಕಥನದ ಗುಣ.
**
ಇಲ್ಲಿನ ಕಥೆಗಳಲ್ಲಿ ಬೂತ ಮುಖ್ಯವಾದುದು. ಇಲ್ಲಿಯೂ ಬಹು ದಟ್ಟವಾದ ಬಾಲ್ಯದ ವಿವರಗಳು ತುಂಬಿಕೊಂಡಿವೆ. ಆದರೆ ಇದು ಕೂಡ ಅನ್ಯಕೇಂದ್ರಿತ ಕಥೆಯೇ. ವಲ್ಲಭಭಾಯಿಪಟೇಲ್ ಎಂದು ಹೆಸರಿಟ್ಟುಕೊಂಡ ಹುಡುಗನ ಬದುಕು ಹಾದುಹೋಗುವ ಆತಂಕಗಳ ಸರಣಿಯು ಇಲ್ಲಿ ಬಹಳ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಚಲನಚಿತ್ರ ಮಾಧ್ಯಮದಲ್ಲಿಯೂ ಅನುಭವವಿರುವ ಮಾಸಡಿಯವರು ದೃಶ್ಯಚಿತ್ರಗಳನ್ನು ಕಟ್ಟಿಕೊಡುವುದರಲ್ಲಿ ನಿಪುಣರು. ಆದರೆ ವಿವರಗಳ ಸೆನ್ಸಾರ್ ಅನ್ನು ಇನ್ನಷ್ಟು ನಿಷ್ಠುರವಾಗಿ ಮಾಡುವುದರಿಂದ ಇಂಥ ಕಥೆಗಳ ಪರಿಣಾಮ ಹೆಚ್ಚಬಹುದು. ವಲ್ಲಿ ಮತ್ತು ಅವನ ತಂದೆ ಇರುವ ಆಳಕ್ಕೆ ಇಳಿಯುವ ಹಾಗೆಯೇ ಎತ್ತರಕ್ಕೆ ಏರುವ ಕ್ರಿಯೆಯಲ್ಲಿ ತೊಡಗುವುದು ಸಾಂಕೇತಿಕವಾಗಿದೆ. ಕೊನೆಗೆ ವಲ್ಲಿ ವಿದ್ಯುತ್ ಲೋಕವನ್ನು ಅರಿಯುವ ಹಂಬಲದಿಂದಲೇ ಲೈಟ್‌ಕಂಬ ಹತ್ತಿ ಸಾಯುವ ಸನ್ನಿವೇಶ ಮನಮುಟ್ಟುತ್ತದೆ.
‘ಬೂತ’ ಸಂಕಲನದ ನಂತರದ ಇಪ್ಪತ್ತೆರಡು ವರ್ಷಗಳಲ್ಲಿ ಕೇವಲ ಏಳು ಕಥೆಗಳನ್ನು ಬರೆಯಲು ಮಾಸಡಿಯವರಿಗೆ ಸಾಧ್ಯವಾಗಿದೆ. ಜೀವನವು ಕಲೆಗೆ ಅಗತ್ಯವಾದ ಕಾಲ ಮತ್ತು ಅವಧಾನಗಳನ್ನು ಒದಗಿಸಿ ಕೊಟ್ಟಂತೆ ತೋರುವುದಿಲ್ಲ. ಆದರೆ, ಈ ಕಥೆಗಳಲ್ಲಿ ಗುಣಾತ್ಮಕವಾದ ಬದಲಾವಣೆಯಿದೆ. ಬಹಳ ನಿರ್ಲಿಪ್ತವಾಗಿ, ನಿರೂಪಕನೇ/ಹೇಳುತ್ತಿರುವ ಪಾತ್ರವೇ ಎಲ್ಲವೂ ಆಗಿ ಬರೆದಾಗ ಉಂಟಾಗುವ ‘ದೂರ’ವು ಆತ್ಮಕಥೆಯ/ಅನ್ಯಕಥೆಯ ಅಧ್ಯಾಯಗಳಿಗೂ ಕಥೆಯಾಗುವ ಸಾಮರ್ಥ್ಯವನ್ನು ನೀಡುತ್ತವೆ. ಇಲ್ಲಿನ ಏಳು ಕತೆಗಳಲ್ಲಿ ಕೆಲವಕ್ಕೆ ಅದು ಸಾಧ್ಯವಾಗಿವೆ. ಬೇರೆ ಕೆಲವಕ್ಕೆ ಅದು ಸಾಧ್ಯವಾಗಿಲ್ಲ. ಸರಿಸುಮಾರು ಈ ಹಂತದಲ್ಲಿಯೇ ಮಾಸಡಿಯವರು ನಗರಕೇಂದ್ರಿತವಾದ ಕಥೆಗಳನ್ನು ಬರೆಯತೊಡಗಿದಂತೆ ತೋರುತ್ತದೆ. (‘ಗ್ಯಾನಿ-ಗುಲಾಬಿ’ಯಲ್ಲಿಯೂ ಒಂದೆರಡು ಇಂಥ ಕಥೆಗಳಿವೆ) ಇವರು ಚಿತ್ರಿಸುವ ಹಳ್ಳಿಗಳಲ್ಲಿ ‘ಪರೋಕ್ಷ ಪ್ರೆಸೆನ್ಸ್’ ಆಗಿದ್ದ ನಗರವು ಈ ಕಥೆಗಳಲ್ಲಿ ಧುತ್ತೆಂದು ಎದುರಿಗೆ ನಿಲ್ಲುತ್ತದೆ. ಅದು ಹೇಗೋ ಇವರಿಗೆ ಕಾಣಸಿಗುವ ನಗರಗಳು ‘ಕ್ರೈಮ್ ಸಿಟಿ’ಗಳು. ಅಲ್ಲಿನ ಪಾತ್ರಗಳೂ ಮಧ್ಯಮವರ್ಗದ ಪುಕ್ಕಲರಲ್ಲ. ಕಚಕಚ ಕತ್ತರಿಸುವ ಧೀರರು. ಮಾಸಡಿಯವರಿಗೆ ಇಂತಹ ಪರಿಸರದ ನಿಕಟ(?) ಪರಿಚಯವಾಗಿದ್ದು ಆಕಸ್ಮಿಕವೇ ಇರಬಹುದು. ಆದರೆ, ಅಂಥ ಪರಿಸರವೇ ಇಲ್ಲವೆಂದು ನಿರಾಕರಿಸುವುದು ತಪ್ಪಾಗುತ್ತದೆ. ಅಲ್ಲಿನದು ಕಪಟನಾಟಕದ ಪೋಷಾಕು ಕಳಚಿದ ಲೋಕ. ಕಂಡುದನ್ನು ಕಂಡಹಾಗೆ ಬರೆಯುವ ವರದಿಗಾರನಂತೆ ಮಾಸಡಿಯವರು ಕಥೆ ಬರೆಯುತ್ತಾರೆ. ಆದರೆ ಅಲ್ಲಿನ ನಿರೂಪಕರು ಕಥೆಗಾರರಿಗಿಂತ ಭಿನ್ನ. ಆ ಕಥೆಗಳಲ್ಲಿ ಕಥೆಗಾರರ ‘ವೈಚಾರಿಕ ಮಧ್ಯಪ್ರವೇಶ’ವೂ ಇರುವುದಿಲ್ಲ. ಇವು ‘ನೋ ಕಾಮೆಂಟ್ಸ್’ ಕಥೆಗಳು. ಆದರೆ ಅವರು ಬಳಸುವ ಭಾಷೆ ಮತ್ತು ತೋರಿಸುವ ಸಂಯಮಗಳು ಅವುಗಳಿಗೆ ಶಕ್ತಿಕೊಡುತ್ತವೆ. ರಂಜಕತೆ ಅವುಗಳ ಗುಣವೂ ಅಲ್ಲ, ಅವರ ಉದ್ದೇಶವೂ ಅಲ್ಲ. ಬದಲಾಗಿ ಅಲ್ಲಿರುವ ‘ಸಂವೇದನೆ’ಯು ಆ ಅಪರಾಧಿಗಳ ಅಂತರಂಗದೊಳಗೂ ಇಣುಕಿನೋಡುವ ಸಾಧ್ಯತೆಗಳನ್ನು ನಮಗೆ ಕೊಡುತ್ತದೆ. ಇವರ ಸಮಕಾಲೀನರೋ ಅಥವಾ ಇವರಿಗಿಂತ ಕಿರಿಯರೋ ಆದ, ಕ್ರೈಮ್-ಲೋಕದ ಬಗ್ಗೆ ಬರೆದ ಪತ್ರಕರ್ತರ ಬರವಣಿಗೆಯನ್ನು ಓದಿದಾಗ ರಂಜಕತೆಗೆ ಬಲಿಯಾಗದ ಇವರ ಕಥೆಗಳ ಶಕ್ತಿ ಗೊತ್ತಾಗುತ್ತದೆ. ಈಚೆಗೆ ಬರೆದಿರುವ ‘ಒಂದೂರಲ್ಲಿ ಅಜ್ಜ-ಅಜ್ಜಿ’ ಕಥೆಯಲ್ಲಿ ಮಾಸಡಿಯವರು ಅದುವರೆಗೆ ತಾವು ಕಾಣದಿದ್ದ/ಗುರುತಿಸದಿದ್ದ ಸಾಂಗತ್ಯದ ದಾಂಪತ್ಯವನ್ನು ಚಿತ್ರಿಸಿದ್ದಾರೆ. ‘ಕುಂಭದ ಈಜು’ ಇಂತಹುದೇ ಸಾಂಗತ್ಯವನ್ನು ಇನ್ನಷ್ಟು ಚಿಕ್ಕ ವಯಸ್ಸಿನ ದಂಪತಿಗಳಲ್ಲಿ ಗುರುತಿಸಿರುವ ಕಥೆ. ಇಂತಹ ಕಡೆ ದೇಹಸೀಮಿತವಲ್ಲದ, ನಗರಸೀಮಿತವಲ್ಲದ ಪ್ರೇಮದ ಪರಿಗಳನ್ನು ಗುರುತಿಸಲು ಕೃಷ್ಣ ಅವರಿಗೆ ಸಾಧ್ಯವಾಗಿದೆ. ಮಾಸಡಿಯವರು ನವ್ಯರ ಗರಡಿಯಲ್ಲಿ ಪಡೆದುಕೊಂಡ ತಿಳಿವಳಿಕೆಯನ್ನು ಕಾಪಾಡಿಕೊಂಡು ಅದರಾಚೆಗೂ ಬದಲಾಗಿದ್ದಾರೆ. ನಿರೂಪಣೆಯ ಒಳಗುಟ್ಟುಗಳು, ಸಾಂಕೇತಿಕವಾದ ವಿವರಗಳು, (ಕುಂಭ, ವಿದ್ಯುತ್ ಕಂಬ, ನರಿ, ಹುಂಜ ಇತ್ಯಾದಿ) ಭಾವುಕವಾಗದ ಭಾಷೆ ಮುಂತಾದ ಹಲವು ಸಂಗತಿಗಳು ಅವರ ಕೈಕಾದಿವೆ. ಆದರೂ ಅವರು ಈ ‘ಮಾಧ್ಯಮ’ವನ್ನು ನಿರಂತರವಾಗಿ ಓಲೈಸಿಲ್ಲ. ಏಕಾಗ್ರವಾಗಿ ಧ್ಯಾನಿಸಿಲ್ಲ. ಇದಕ್ಕೆ ಸಿನಿಕತೆ, ಸಮಯ ಸಿಗದ ಹಲ್ಲಂಡೆಗಳು, ಮಹತ್ವಾಕಾಂಕ್ಷೆಯ ಕೊರತೆ ಮುಂತಾದ ಹತ್ತು ಹಲವು ಕಾರಣ ಇರಬಹುದು. ನಷ್ಟವು ಅವರದೂ ಹೌದು, ಓದುವ ನಮ್ಮದೂ ಹೌದು. ಆದರೂ ಕೊಟ್ಟಿರುವುದರ ವಿಶಿಷ್ಟತೆಯೂ ಅಷ್ಟೇ ಮುಖ್ಯ. ಮಾಸಡಿಯವರು ಇನ್ನಷ್ಟು ನಿಯತವಾಗಿ ಇನ್ನಷ್ಟು ಹೆಚ್ಚಾಗಿ ಬರೆಯಬೇಕು. ಕೇವಲ ತನ್ನ ಪೀಳಿಗೆಯ ಅಥವಾ ತನಗಿಂತ ಹಿರಿಯ ಲೇಖಕರ ಕಥೆಗಳ ಓದಿಗೆ ಸೀಮಿತಗೊಳ್ಳದೆ, ಕಿರಿಯ ಪೀಳಿಗೆಯ ಪ್ರತಿಭಾವಂತ ಕಥೆಗಾರರ ಕಡೆಗೆ ಚಲಿಸಬೇಕು. ಅವರಿಗೆ ಸಹಜವಾಗಿಯೇ ಇರುವ ಪ್ರತಿಭೆಯ ಜೊತೆಗೆ ಇಂಥ ಹೊಸ ಹೊಳಹುಗಳು ಸೇರಿದರೆ ಅವರ ಕಥೆಗಳಿಗೆ ಹಾಗೆಯೇ ಕನ್ನಡ ಸಣ್ಣಕಥೆಗೆ ಲಾಭವಿದೆ. ಇದು ಸರಿಸುಮಾರು ನನ್ನ ವಾರಿಗೆಯ ಗೆಳೆಯರಾದ ಕೃಷ್ಣ ಮಾಸಡಿಯವರ ಮಾತು ಮಾತ್ರವಲ್ಲ, ನವ್ಯದ ಕೊನೆಯ ದಿನಗಳಲ್ಲಿ ಬರೆಯತೊಡಗಿದ ಹಲವು ಲೇಖಕರು ಈ ದಿಕ್ಕಿನಲ್ಲಿ ನಡೆಯಬೇಕಾಗಿದೆ.
(ಮುನ್ನುಡಿಯಿಂದ)