2ನೇ ಟ್ವೆಂಟಿ-20: ಇಂಗ್ಲೆಂಡ್ ವಿರುದ್ಧ ಭಾರತ ಜಯಭೇರಿ, ಸರಣಿ ಮುನ್ನಡೆ

Update: 2022-07-09 17:46 GMT

ಬರ್ಮಿಂಗ್‌ಹ್ಯಾಮ್, ಜು. 9: ವೇಗದ ಬೌಲರ್ ಭುವನೇಶ್ವರ ಕುಮಾರ್(3-15),ಜಸ್‌ಪ್ರೀತ್ ಬುಮ್ರಾ(2-10) ಹಾಗೂ ಸ್ಪಿನ್ನರ್ ಯಜುವೇಂದ್ರ ಚಹಾಲ್(2-10)ಅವರ ಸಂಘಟಿತ ಬೌಲಿಂಗ್ ದಾಳಿಯ ನೆರವಿನಿಂದ ಭಾರತವು ಇಂಗ್ಲೆಂಡ್ ವಿರುದ್ಧದ ಎರಡನೇ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯವನ್ನು 49 ರನ್‌ಗಳ ಅಂತರದಿಂದ ಗೆದ್ದುಕೊಂಡಿತು. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 2-0 ಅಂತರದಿಂದ ಮುನ್ನಡೆ ಸಾಧಿಸಿತು.

 ಶನಿವಾರ ನಡೆದ ಪಂದ್ಯದಲ್ಲಿ ಗೆಲ್ಲಲು 171 ರನ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 17 ಓವರ್‌ಗಳಲ್ಲಿ 121 ರನ್ ಗಳಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಇಂಗ್ಲೆಂಡ್‌ನ ಪರ ಆಲ್‌ರೌಂಡರ್ ಮೊಯಿನ್ ಅಲಿ(35 ರನ್, 21 ಎಸೆತ, 3 ಬೌಂಡರಿ, 2 ಸಿಕ್ಸರ್)ಸರ್ವಾಧಿಕ ಸ್ಕೋರ್ ಗಳಿಸಿದರು ಹಾಗೂ ಡೇವಿಡ್ ವಿಲ್ಲಿ(ಔಟಾಗದೆ 33, 22 ಎಸೆತ)ಒಂದಷ್ಟು ಪ್ರತಿರೋಧ ಒಡ್ಡಿದರು. ಡೇವಿಡ್ ಮಲಾನ್(19), ಲಿವಿಂಗ್‌ಸ್ಟೋನ್(15)ಎರಡಂಕೆಯ ಸ್ಕೋರ್ ಗಳಿಸಿದರು.

ಹಿರಿಯ ಬೌಲರ್ ಭುವನೇಶ್ವರ್ 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು. ಬುಮ್ರಾ ಹಾಗೂ ಚಹಾಲ್ ತಲಾ 2 ವಿಕೆಟ್ ಪಡೆದರು. ಹಾರ್ದಿಕ್ ಪಾಂಡ್ಯ(1-29) ಹಾಗೂ ಹರ್ಷಲ್ ಪಟೇಲ್ (1-34)ತಲಾ ಒಂದು ವಿಕೆಟ್ ಪಡೆದರು.

ಇನಿಂಗ್ಸ್‌ನ ಮೊದಲ ಓವರ್‌ನ ಮೊದಲ ಎಸೆತದಲ್ಲೇ ಜೇಸನ್ ರಾಯ್ ವಿಕೆಟನ್ನು ಕಳೆದುಕೊಂಡ ಇಂಗ್ಲೆಂಡ್ ಅತ್ಯಂತ ಕಳಪೆ ಆರಂಭ ಪಡೆಯಿತು. ರಾಯ್(0)ಹಾಗೂ ನಾಯಕ ಜೋಸ್ ಬಟ್ಲರ್(4)ವಿಕೆಟನ್ನು ಉರುಳಿಸಿದ ಭುವನೇಶ್ವರ್ ಇಂಗ್ಲೆಂಡ್‌ಗೆ ಆರಂಭಿಕ ಆಘಾತ ನೀಡಿದರು. ಈ ಆಘಾತದಿಂದ ಇಂಗ್ಲೆಂಡ್ ಚೇತರಿಸಿಕೊಳ್ಳಲಿಲ್ಲ.

 ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಕ್ರಿಸ್ ಜೋರ್ಡನ್(4-27) ಹಾಗೂ ರಿಚರ್ಡ್ ಗ್ಲೀಸನ್(3-15) ಅತ್ಯುತ್ತಮ ಬೌಲಿಂಗ್ ಹೊರತಾಗಿಯೂ ಆಲ್‌ರೌಂಡರ್ ರವೀಂದ್ರ ಜಡೇಜ(ಔಟಾಗದೆ 46, 29 ಎಸೆತ, 5 ಬೌಂಡರಿ) ಅವರ ನಿರ್ಣಾಯಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 170 ರನ್ ಗಳಿಸಿತು.

ಇನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಶರ್ಮಾ(31ರನ್, 20 ಎಸೆತ, 3 ಬೌಂಡರಿ, 2 ಸಿಕ್ಸರ್)ಹಾಗೂ ರಿಷಭ್ ಪಂತ್(26 ರನ್, 15 ಎಸೆತ, 4 ಬೌಂಡರಿ, 1 ಸಿಕ್ಸರ್)ಮೊದಲ ವಿಕೆಟ್‌ಗೆ 49 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ಒದಗಿಸಿದರು. ರೋಹಿತ್ ವಿಕೆಟನ್ನು ಕಬಳಿಸಿದ ಗ್ಲೀಸನ್ ಈ ಜೋಡಿಯನ್ನು ಬೇರ್ಪಡಿಸಿದರು.

ಒಂದು ಹಂತದಲ್ಲಿ ವಿಕೆಟ್ ನಷ್ಟವಿಲ್ಲದೆ 49 ರನ್ ಗಳಿಸಿದ್ದ ಭಾರತ ಚೊಚ್ಚಲ ಪಂದ್ಯವನ್ನಾಡಿದ ಗ್ಲೀಸನ್ ದಾಳಿಗೆ ತತ್ತರಿಸಿ 61 ರನ್‌ಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿತು. ಮಾಜಿ ನಾಯಕ ವಿರಾಟ್ ಕೊಹ್ಲಿ(1 ರನ್)ಕಳಪೆ ಪ್ರದರ್ಶನ ಮುಂದುವರಿಸಿ ನಿರಾಸೆಗೊಳಿಸಿದರು. ಸೂರ್ಯಕುಮಾರ್ ಯಾದವ್(15 ರನ್),ಹಾರ್ದಿಕ್ ಪಾಂಡ್ಯ(12 ರನ್), ದಿನೇಶ್ ಕಾರ್ತಿಕ್(12 ರನ್), ಹರ್ಷಲ್ ಪಟೇಲ್(13 ರನ್)ಎರಡಂಕೆಯ ಸ್ಕೋರ್ ಗಳಿಸಿದರು.

ಭಾರತದ ಪರ ಜಡೇಜ ಸರ್ವಾಧಿಕ ಸ್ಕೋರ್ ಗಳಿಸಿದರು. ಕಾರ್ತಿಕ್ ಅವರೊಂದಿಗೆ 6ನೇ ವಿಕೆಟ್‌ಗೆ 33 ರನ್ ಹಾಗೂ ಪಟೇಲ್ ಅವರೊಂದಿಗೆ 7ನೇ ವಿಕೆಟಿಗೆ 23 ರನ್ ಜೊತೆಯಾಟವನ್ನು ನಡೆಸಿದ ಜಡೇಜ ತಂಡದ ಮೊತ್ತವನ್ನು 170ಕ್ಕೆ ತಲುಪಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News