ಸಂಪೂರ್ಣ ಶರಣಾಗತಿ ಮತ್ತು ಸರ್ವಸ್ವದ ಸಮರ್ಪಣೆಯ ಪಾಠ
ಏಶ್ಯ ಖಂಡದ ಒಂದು ದೊಡ್ಡ ಭಾಗದಲ್ಲಿ ‘ಬಕ್ರೀದ್’ ಎಂದೇ ಪರಿಚಿತವಾಗಿರುವ ಹಬ್ಬದ ಮೂಲ ಅರಬಿ ಹೆಸರು ‘ಈದುಲ್ ಅಝ್‌ಹಾ’ ಈದ್ ಅಂದರೆ ಹಬ್ಬ. ಅಝ್‌ಹಾ ಅಂದರೆ ಬಲಿದಾನ. ಮುಸ್ಲಿಮ್ ಸಮಾಜದಲ್ಲಿ ಇರುವುದು ಕೇವಲ ಎರಡು ಹಬ್ಬಗಳು - ಒಂದು, ರಮದಾನ್ ತಿಂಗಳು ಮುಗಿದೊಡನೆ ಶವ್ವಾಲ್ ತಿಂಗಳ ಆರಂಭದಲ್ಲಿ ಆಚರಿಸಲಾಗುವ ರಮದಾನ್ ಹಬ್ಬ. ಎರಡನೆಯದು ದುಲ್ ಹಜ್ ತಿಂಗಳ ಹತ್ತನೇ ದಿನ ಆಚರಿಸಲಾಗುವ ‘ಅಲ್ ಅಝ್‌ಹಾ’ ಹಬ್ಬ. ಇದನ್ನು ‘ಈದುಲ್ ಅಕ್ಬರ್’ ಅಥವಾ ದೊಡ್ಡ ಹಬ್ಬ ಎಂದೂ ಕರೆಯುತ್ತಾರೆ. ಇಸ್ಲಾಮ್ ಧರ್ಮದಲ್ಲಿ ಪ್ರತಿಯೊಂದು ವಿಶೇಷ ಸಂದರ್ಭವನ್ನು ಕೆಲವು ಮೂಲಭೂತ ಪಾಠಗಳನ್ನು ಕಲಿಸುವುದಕ್ಕಾಗಿ, ಕೆಲವು ಪ್ರಾಥಮಿಕ ಸತ್ಯಗಳನ್ನು ನೆನಪಿಸುವುದಕ್ಕಾಗಿ, ಮತ್ತು ಕೆಲವು ಪ್ರಮಾಣ ಹಾಗೂ ಸಂಕಲ್ಪಗಳನ್ನು ನವೀಕರಿಸಿ ಬಲಪಡಿಸುವುದಕ್ಕಾಗಿ ಬಳಸಲಾಗುತ್ತದೆ. ಬಕ್ರೀದ್ ಸಂದರ್ಭದಲ್ಲಿ ಈ ಪ್ರಕ್ರಿಯೆ ಯಾವೆಲ್ಲ ರೂಪಗಳಲ್ಲಿ ನಡೆಯುತ್ತದೆಂಬುದನ್ನು ಗಮನಿಸಿ:
ಇಸ್ಲಾಮ್ ಧರ್ಮದಲ್ಲಿ ಮೂಲಭೂತ ಪ್ರಾಧಾನ್ಯವಿರುವ ಹಜ್ ಎಂಬ ಆಚರಣೆಗೆ ಸಂಬಂಧಿಸಿದ ಚಟುವಟಿಕೆಗಳೆಲ್ಲಾ ಪ್ರಸ್ತುತ ದುಲ್ ಹಜ್ ತಿಂಗಳಲ್ಲಿ ನಡೆಯುತ್ತವೆ. ಆರ್ಥಿಕ ಮತ್ತು ಆರೋಗ್ಯ ಸಾಮರ್ಥ್ಯ ಇರುವವರ ಮೇಲೆ ಜೀವನದಲ್ಲೊಂದು ಬಾರಿ ಹಜ್ ಕಡ್ಡಾಯವಾಗಿದೆ. ಸಾಮರ್ಥ್ಯ ವಿಲ್ಲದವರ ಮೇಲೆ ಅದು ಕಡ್ಡಾಯವೇ ಅಲ್ಲವಾದ್ದರಿಂದ ಅಂಥವರು ವ್ಯಥೆ ಪಡಬೇಕಾಗಿಲ್ಲ, ಯಾವುದೇ ಅಪರಾಧ ಪ್ರಜ್ಞೆಯಿಂದ ನರಳಬೇಕಾಗಿಯೂ ಇಲ್ಲ. ಸಾಲ ಮಾಡಿ ಅಥವಾ ಭಿಕ್ಷೆ ಬೇಡಿ ಹಜ್ ಗೆ ಹೋಗುವುದಂತೂ ಹಜ್ ಹಿಂದಿನ ಸ್ಫೂರ್ತಿಗೇ ತದ್ವಿರುದ್ಧವಾಗಿದೆ. ಹಜ್ ಒಂದು ರೀತಿಯಲ್ಲಿ ಮಾನವ ಸಮಾಜದ ಎಲ್ಲ ವಿಭಾಗಗಳಿಗೆ ಸೇರಿದ ವಿಶ್ವಾಸಿಗಳ ಜಾಗತಿಕ ಸಮ್ಮೇಳನವಾಗಿದೆ. ಜಗತ್ತಿನ ಹೆಚ್ಚಿನೆಲ್ಲ ದೇಶಗಳಿಂದ ತೀರಾ ಭಿನ್ನ ಭಾಷೆ, ಬಣ್ಣ ಮತ್ತು ಗಾತ್ರದ ಜನ ಬಂದು ಹಜ್ ನಲ್ಲಿ ಒಂದುಗೂಡುತ್ತಾರೆ. 2019 ರ ಹಜ್ ನಲ್ಲಿ ಸುಮಾರು 25 ಲಕ್ಷ ಯಾತ್ರಿಕರು ಅಧಿಕೃತವಾಗಿ ಭಾಗವಹಿಸಿದ್ದರು. ಯಾತ್ರಿಕರೆಲ್ಲರೂ ಹೊಲಿಗೆ ಇಲ್ಲದ, ಒಂದೇ ರೀತಿಯ, ಸರಳ ಬಿಳಿಯ ಸಮವಸ್ತ್ರ ಧರಿಸಿರುತ್ತಾರೆ. ತುಂಬಾ ವೃದ್ಧರು ಮತ್ತು ವಿಕಲಾಂಗರಿಗೆ ಮಾತ್ರ ಕೆಲವು ವಿಶೇಷ ಸವಲತ್ತುಗಳು ಲಭ್ಯವಿರುತ್ತವೆ. ಉಳಿದಂತೆ ಮೂರು ದಿನಗಳ ಕಾಲ ಎಲ್ಲರೂ ಒಂದೇ ಬಗೆಯ, ಪುಟ್ಟ ಪರಿಸರ ಸ್ನೇಹಿ ಶಿಬಿರಗಳಲ್ಲಿ ವಾಸಿಸುತ್ತಾರೆ. ಯಾರಿಗೂ ತಮ್ಮ ಕುಲ ಮಹಿಮೆ, ಆರ್ಥಿಕ ಬಲ, ಹುದ್ದೆಯ ಹಿರಿಮೆ ಇತ್ಯಾದಿ ಯಾವುದನ್ನೂ ಪ್ರದರ್ಶಿಸುವುದಕ್ಕೆ ಕಿಂಚಿತ್ತೂ ಅವಕಾಶ ವಿರುವುದಿಲ್ಲ.
ಅಲ್ಲಿ ಪದೇ ಪದೇ ಸಾಮೂಹಿಕ ಹಾಗೂ ವ್ಯಕ್ತಿಗತ ನಮಾಝ್‌ಗಳು ನಡೆಯುತ್ತವೆ. ಕಾಬಾದ ಸುತ್ತ ಪ್ರದಕ್ಷಿಣೆ, ಸಫಾ ಮತ್ತು ಮರ್ವಾ ಬೆಟ್ಟಗಳ ನಡುವೆ ಓಡಾಟ,ಸಾಂಕೇತಿಕವಾಗಿ ಸೈತಾನನಿಗೆ ಕಲ್ಲೆಸೆತ, ಪ್ರಾಣಿ ಬಲಿ ಮುಂತಾದ ಹಲವು ಬಗೆಯ ಚಟುವಟಿಕೆಗಳು ನಡೆಯುತ್ತವೆ. ಎಲ್ಲದರ ನಡುವೆ, ವಿಶ್ವದೊಡೆಯನನ್ನು ಉದ್ದೇಶಿಸಿ, ನೀನೊಬ್ಬನೇ ಪೂಜಾರ್ಹ, ನೀನೇ ಸರ್ವ ಶಕ್ತ, ನೀನೇ ಮಹಾ ಮಹಿಮ ಎಂದೆಲ್ಲಾ ದೇವರನ್ನು ವೈಭವೀಕರಿಸುವ ಘೋಷಣೆಗಳು ಮೊಳಗುತ್ತಾ, ಮಾರ್ದನಿಸುತ್ತಾ ಇರುತ್ತವೆ. ಪ್ರಶಂಸೆಗೆ, ಅಧಿಕಾರಕ್ಕೆ, ಕೃತಜ್ಞತೆಗೆಲ್ಲಾ ನ್ಯಾಯೋಚಿತ ಹಕ್ಕುದಾರ ಅವನು ಮಾತ್ರ ಎಂಬುದನ್ನು ಆ ಲಕ್ಷಾಂತರ ಮಂದಿ ಪರಸ್ಪರರಿಗೆ ನೆನಪಿಸುತ್ತಿರುತ್ತಾರೆ. ವಿಶ್ವ ಶಾಂತಿಗಾಗಿ, ಸಾರ್ವತ್ರಿಕ ನ್ಯಾಯಕ್ಕಾಗಿ ಸಾಮೂಹಿಕ ಪ್ರಾರ್ಥನೆಗಳು ನಡೆಯುತ್ತಿರುತ್ತವೆ, ಜೊತೆಗೆ ಜನರು ಖಾಸಗಿಯಾಗಿ ಸ್ವತಃ ತಮ್ಮ, ತಮ್ಮ ಕುಟುಂಬದ, ತಮ್ಮ ನಾಡಿನ ಮತ್ತು ದೇಶದ ಹಿತಕ್ಕಾಗಿ ಪ್ರಾರ್ಥಿಸುತ್ತಿರುತ್ತಾರೆ. ಆತ್ಮಾವಲೋಕನ, ಪಶ್ಚಾತ್ತಾಪ ಮತ್ತು ಕ್ಷಮಾಪಣೆ ಕೂಡಾ ನಡೆಯುತ್ತಿರುತ್ತದೆ. ತಮ್ಮದೇ ಭಾವನೆಗಳಕಡೆಗೆ ಗಮನ ಹರಿಸಲು ಪುರುಸೊತ್ತು ಇಲ್ಲದಿದ್ದವರು ಕೂಡಾ ಅಲ್ಲಿ ತುಂಬಾ ಭಾವುಕರಾಗಿ ಬಿಡುತ್ತಾರೆ. ಬಿಡುವಿಲ್ಲದ ಜೀವನ ಶೈಲಿಯಿಂದಾಗಿ ಮರೆತು ಹೋಗಿದ್ದ ಅನೇಕರು ನೆನಪಾಗುತ್ತಾರೆ. ಆಪ್ತರು, ಬಂಧು, ಇತರರು ಮತ್ತು ನೆರೆಯವರಿಗೆ ಸಂಬಂಧಿಸಿದಂತೆ ನಡೆದ ಚ್ಯುತಿಗಳು ನೆನಪಾಗಿ ಮನಸ್ಸು ಮೃದುವಾಗಿ ಬಿಡುತ್ತದೆ. ಮುಂದೆ ಎಲ್ಲ ಕರ್ತವ್ಯಗಳನ್ನೂ ಚಾಚೂ ತಪ್ಪದೆ ಪಾಲಿಸುತ್ತೇವೆ ಎಂಬ ಸಂಕಲ್ಪ ಮಾಡಲಾಗುತ್ತದೆ. ಪಾಪಗಳನ್ನೆಲ್ಲ ನೆನಪಿಸಿ, ಮುಂದೆಂದೂ ಅವುಗಳ ಹತ್ತಿರವೂ ಸುಳಿಯುವುದಿಲ್ಲ ಎಂದು ಪಣತೊಡಲಾಗುತ್ತದೆ. ಈ ರೀತಿ ಕೇವಲ ಕೆಲವು ದಿನಗಳ ಮಟ್ಟಿಗೆ ನಿರ್ಮಿತವಾಗುವ ಭಕ್ತಿ ಮತ್ತು ಸಂಸ್ಕಾರದ ವಾತಾವರಣವು ಕೆಲವರ ಪಾಲಿಗೆ ಬದುಕನ್ನೇ ಬದಲಿಸಿ ಬಿಡುವ ಕ್ರಾಂತಿಕಾರಿ ಪರ್ವವಾಗುತ್ತದೆ. ಹೆಚ್ಚಿನವರ ಬದ್ಧತೆಗಳು ಬೆಳೆದಷ್ಟೇ ವೇಗವಾಗಿ ಉದುರಿ ಹೋಗುತ್ತವೆ. ಬಕ್ರೀದ್ ಒಂದು ವಿಧದಲ್ಲಿ ಹಜ್‌ನ ಜಾಗತಿಕ ವಿಸ್ತರಣೆಯಾಗಿದೆ. ಹಜ್‌ಗೆ ಹೋಗಲಾಗದ ಜಗತ್ತಿನ ಎಲ್ಲೆಡೆಯ ಮುಸ್ಲಿಮರು ಬಕ್ರೀದ್ ಮೂಲಕ ಹಜ್‌ನಲ್ಲಿ ಭಾಗವಹಿಸುತ್ತಾರೆ. ಹಜ್ ಯಾತ್ರಿಗಳು ಘೋಷಿಸುವ ಕೆಲವು ಘೋಷಣೆಗಳನ್ನೇ ಅವರು ಉಚ್ಚರಿಸುತ್ತಾರೆ. ಹಜ್ ಯಾತ್ರಿಕರಿಗೆ ಚೈತನ್ಯ ನೀಡುವ, ಹಝ್ರತ್ ಇಬ್ರಾಹೀಮ್, ಇಸ್ಮಾಈಲ್ ಮತ್ತು ಹಾಜಿರಾರ ಅದಮ್ಯ ಸತ್ಯ ನಿಷ್ಠೆ, ತಾವು ನಂಬಿದ ಮೌಲ್ಯಗಳಿಗೆ ಅವರು ತೋರಿದ ಅಚಲ ಬದ್ಧತೆ, ಕಾಲದ ಸರ್ವಾಧಿಕಾರಿಯ ಬೆದರಿಕೆಗಳಿಗೆ ಬಗ್ಗದೆ ಆತನ ಮುಂದೆ ಸತ್ಯವನ್ನು ಘೋಷಿಸಿದ ಅವರ ವೀರಗಾಥೆ, ಕಾಬಾದ ನಿರ್ಮಾಣ, ಶಾಂತಿಗಾಗಿ ಅವರು ಮಾಡಿದ ಪ್ರಾರ್ಥನೆ ಇವೇ ಮುಂತಾದ ಸಂಗತಿಗಳನ್ನು ಮುಸ್ಲಿಮರು ವಾಸಿಸುವ ಎಲ್ಲ ಪ್ರದೇಶಗಳಲ್ಲಿ ಮತ್ತು ಜಗತ್ತಿನೆಲ್ಲೆಡೆ ಇರುವ ಅವರ ಮಸೀದಿಗಳಲ್ಲಿ ಪದೇ ಪದೇ ನೆನಪಿಸಲಾಗುತ್ತದೆ. ದುಲ್ ಹಜ್ ತಿಂಗಳ ಆರಂಭದೊಂದಿಗೆ ಜಗತ್ತಿನೆಲ್ಲೆಡೆಯ ಮುಸ್ಲಿಮರು ಹಜ್ ಯಾತ್ರಿಗಳ ಜೊತೆ ಭಾವೈಕ್ಯ ಪ್ರದರ್ಶಿಸುವ ಪ್ರಕ್ರಿಯೆಯಲ್ಲಿ ಭಾಗವಹಿಸತೊಡಗುತ್ತಾರೆ. ವಿಶೇಷವಾಗಿ ಮಾಧ್ಯಮ ಮತ್ತು ಮೇಲ್ಮಧ್ಯಮ ವರ್ಗದವರು ಖುರ್ಬಾನಿ ಅಥವಾ ಪ್ರಾಣಿ ಬಲಿಗೆ ಸಿದ್ಧತೆ ನಡೆಸುತ್ತಾರೆ. ಪ್ರಾಣಿ ಬಲಿಗೆ ಸಂಬಂಧಿಸಿದಂತೆ, ಮುಸ್ಲಿಮರ ನಿಲುವು ತರ್ಕ ಬದ್ಧವಾಗಿದ್ದು ಸಾಂಪ್ರದಾಯಿಕ ಮೌಢ್ಯಗಳಿಂದ ಮುಕ್ತವಾಗಿದೆ. ಅವುಗಳ (ಬಲಿಪ್ರಾಣಿಗಳ) ಮಾಂಸವಾಗಲಿ ಅವುಗಳ ರಕ್ತವಾಗಲಿ ಅಲ್ಲಾಹನಿಗೆ ತಲುಪುವುದಿಲ್ಲ... (22:37) ಎಂದು ಕುರ್‌ಆನ್‌ನಲ್ಲಿ ನೀಡಲಾಗಿರುವ ಬಹಳ ಸ್ಪಷ್ಟವಾದ ಹೇಳಿಕೆಯು ಈ ವಿಷಯದಲ್ಲಿ ಮೌಢ್ಯಗಳನ್ನು ತುರುಕುವುದಕ್ಕೆ ಇರುವ ಎಲ್ಲ ಬಾಗಿಲುಗಳನ್ನು ಶಾಶ್ವತವಾಗಿ ಮುಚ್ಚಿಬಿಟ್ಟಿದೆ. ಮುಸ್ಲಿಮರು ತಮ್ಮ ಪ್ರಾಣಿಬಲಿಯಲ್ಲಿ ಮುಖ್ಯವಾಗಿ ಎರಡು ಔಚಿತ್ಯಗಳನ್ನು ಕಾಣುತ್ತಾರೆ:
1. ಪ್ರವಾದಿ ಇಬ್ರಾಹೀಮರ ಪರಮೋಚ್ಚತ್ಯಾಗ ಸನ್ನದ್ಧತೆಯ ಸ್ಫೂರ್ತಿದಾಯಕ ನೆನಪನ್ನು ಚಿಗುರಿಸುವುದು. 2. ಮಾಂಸಾಹಾರಿ ಬಂಧು ಮಿತ್ರರು ಮತ್ತು ಅಪರೂಪಕ್ಕೆ ಮಾತ್ರ ಮಾಂಸ ಲಭ್ಯವಾಗುವ ಸಮಾಜದ ಬಡವರ್ಗದವರ ಜೊತೆ ಅವರ ಪ್ರೀತಿಯ ಖಾದ್ಯವನ್ನು ಹಂಚಿಕೊಳ್ಳುವುದು. ಬಲಿ ನೀಡಿದ ಪ್ರಾಣಿಯ ಮಾಂಸವನ್ನು ಅರ್ಹರಿಗೆ ತಲುಪಿಸುವ ಜೊತೆ, ಅದರ ಚರ್ಮದ ಮೌಲ್ಯವನ್ನು ಕೂಡ ಸಮಾಜ ಕಲ್ಯಾಣದ ಚಟುವಟಿಕೆಗಳಿಗಾಗಿ ಬಳಸಿಕೊಳ್ಳಲಾಗುತ್ತದೆ. ಹಜ್ ವೇಳೆ ಬಲಿ ನೀಡಲಾಗುವ ಲಕ್ಷಾಂತರ ಪ್ರಾಣಿಗಳ ಮಾಂಸವನ್ನು ಅತ್ಯಾಧುನಿಕ ವಿಧಾನಗಳಿಂದ ಸಂಸ್ಕರಿಸಿ, ಶೇಖರಿಸಿಟ್ಟು ಬಡದೇಶಗಳಿಗೆ ರವಾನಿಸಲಾಗುತ್ತದೆ. ಒಟ್ಟಿನಲ್ಲಿ, ಹಜ್ ಮತ್ತು ಬಕ್ರೀದ್ ಇವೆರಡೂ, ದೇವರ ಮುಂದೆ ಸಂಪೂರ್ಣ ಶರಣಾಗತಿ ಮತ್ತು ಅವನಿಗಾಗಿ ಸರ್ವಸ್ವದ ಸಮರ್ಪಣೆ ಎಂಬ ಇಸ್ಲಾಮ್ ಧರ್ಮದ ಮೂಲ ಸ್ಫೂರ್ತಿಯನ್ನು ಜಾಗೃತಗೊಳಿಸುವ ಮಾಧ್ಯಮಗಳಾಗಿವೆ.