ಗೋವಾ: ಅಜ್ಞಾತವಾಗಿದ್ದಐವರು ಕಾಂಗ್ರೆಸ್ ಶಾಸಕರು ರಾಜ್ಯ ವಿಧಾನಸಭೆ ಕಲಾಪದಲ್ಲಿ ಹಾಜರು

Update: 2022-07-11 07:34 GMT
ಮೈಕೆಲ್ ಲೋಬೊ,Photo:PTI

ಹೊಸದಿಲ್ಲಿ: ಅಜ್ಞಾತವಾಗುಳಿದಿದ್ದ ಗೋವಾ ಕಾಂಗ್ರೆಸ್ ಶಾಸಕರು ಸೋಮವಾರ ಮುಂಗಾರು ಅಧಿವೇಶನದ ಮೊದಲ ದಿನ ರಾಜ್ಯ ವಿಧಾನಸಭೆಯ ಕಲಾಪದಲ್ಲಿ ಪಾಲ್ಗೊಂಡರು ಹಾಗೂ  ವಿರೋಧ ಪಕ್ಷದಲ್ಲಿ "ಏನೂ ತಪ್ಪು ನಡೆದಿಲ್ಲ" ಎಂದು ಪ್ರತಿಪಾದಿಸಿದರು.

ರವಿವಾರ ರಾಜ್ಯದ ಒಟ್ಟು 11 ಕಾಂಗ್ರೆಸ್ ಶಾಸಕರ ಪೈಕಿ ಐವರಾದ- ಮೈಕೆಲ್ ಲೋಬೊ, ದಿಗಂಬರ್ ಕಾಮತ್, ಕೇದಾರ್ ನಾಯ್ಕ್, ರಾಜೇಶ್ ಫಲ್ದೇಸಾಯಿ ಹಾಗೂ  ದೇಲಿಯಾಲಾ ಲೋಬೊ  ಅಜ್ಞಾತವಾಗಿದ್ದಾರೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಈ ಹಿಂದೆ ಹೇಳಿದ್ದಾರೆ.

ಆ ನಂತರ 40 ಸದಸ್ಯರ ರಾಜ್ಯ ಅಸೆಂಬ್ಲಿಯಲ್ಲಿ ಪ್ರತಿಪಕ್ಷ ನಾಯಕ ಸ್ಥಾನದಿಂದ ಲೋಬೊ ಅವರನ್ನು ಕಾಂಗ್ರೆಸ್ ತೆಗೆದುಹಾಕಿತು.

''ಲೋಬೊ ಮತ್ತು ಕಾಮತ್ ಬಿಜೆಪಿಯೊಂದಿಗೆ ಸೇರಿಕೊಂಡು ಕಾಂಗ್ರೆಸ್ ನಲ್ಲಿ ಒಡಕು ಮೂಡಿಸಲು ಷಡ್ಯಂತ್ರ ರೂಪಿಸುತ್ತಿದ್ದಾರೆ’’ ಎಂದು  ಕಾಂಗ್ರೆಸ್ ನ ಗೋವಾ ಉಸ್ತುವಾರಿ ದಿನೇಶ್ ಗುಂಡೂರಾವ್ ಹೇಳಿದ್ದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಲೋಬೊ, ಪಕ್ಷದಲ್ಲಿ  ಯಾವುದೇ ತಪ್ಪು ನಡೆದಿಲ್ಲ ಎಂದರು.

 “ಏನೂ ತಪ್ಪಾಗಿಲ್ಲ. ಸಮಸ್ಯೆ ಏನು ಎಂದು ನನಗೆ ತಿಳಿದಿಲ್ಲ. ಎಲ್ಲಾ ಕಾಂಗ್ರೆಸ್ ಶಾಸಕರು ಒಟ್ಟಿಗೆ ಇದ್ದರು. ರವಿವಾರ ಸಭೆಗೆಂದು ದಕ್ಷಿಣ ಗೋವಾಕ್ಕೆ ಹೋಗಿದ್ದೆವು. ಅವರು (ಕಾಂಗ್ರೆಸ್ ನಾಯಕರು) ಮತ್ತೊಮ್ಮೆ ಅಗತ್ಯವಿಲ್ಲದ ಮತ್ತೊಂದು ಪತ್ರಿಕಾಗೋಷ್ಠಿಯನ್ನು ನಡೆಸಲು ಬಯಸಿದ್ದರು, ಆದ್ದರಿಂದ ನಾವು ಅದಕ್ಕೆ ಹಾಜರಾಗಲಿಲ್ಲ ”ಎಂದು ಲೋಬೊ ಹೇಳಿದ್ದಾರೆ.

ಲೋಬೊ  ಅವರ ಪತ್ನಿ ದೇಲಿಯಾಲಾ ಅವರು ಕಾಂಗ್ರೆಸ್ ಶಾಸಕರೂ ಆಗಿದ್ದಾರೆ.

ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಗೆದ್ದಿದ್ದೇವೆ ಮತ್ತು ಪಕ್ಷದ ಜೊತೆ ನಿಲ್ಲುತ್ತೇವೆ ಎಂದು ಲೋಬೊ ಹೇಳಿದರು.

ತಮ್ಮನ್ನು  ಪ್ರತಿಪಕ್ಷದ ನಾಯಕನ ಸ್ಥಾನದಿಂದ ತೆಗೆದಿರುವ ಕುರಿತು ಪ್ರತಿಕ್ರಿಯೆ ನೀಡಿದ ಲೋಬೊ ಅವರು ತನಗೆ ಪ್ರತಿಪಕ್ಷ ನಾಯಕನಾಗಿ  ಮುಂದುವರಿಯಲು ಆಸಕ್ತಿ ಹೊಂದಿಲ್ಲ ಎಂದು ಪಕ್ಷಕ್ಕೆ ತಿಳಿಸಿದ್ದೇನೆ ಎಂದರು.

ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್ ಹಾಗೂ  ಅವರ ಕಾಂಗ್ರೆಸ್ ಸಹೋದ್ಯೋಗಿ ರಾಜೇಶ್ ಫಲ್ದೇಸಾಯಿ ಕೂಡ ತಾವು ಪಕ್ಷದಲ್ಲಿದ್ದೇವೆ ಎಂದು ಹೇಳಿದರು.

ವೈಯಕ್ತಿಕ ಬದ್ಧತೆಯ ಕಾರಣದಿಂದ ರವಿವಾರ ಪಕ್ಷದ ಕಚೇರಿಯಲ್ಲಿ ಇರಲಿಲ್ಲ ಎಂದು ಇಬ್ಬರು ಕಾಂಗ್ರೆಸ್ ಶಾಸಕರು ಹೇಳಿದ್ದಾರೆ.

ವಿಧಾನಸೌಧದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕಾಮತ್,  “ನಾನು ಶನಿವಾರ ದಿನೇಶ್ ಗುಂಡೂರಾವ್ ಅವರನ್ನು ಭೇಟಿಯಾಗಿದ್ದೆ. ಪಕ್ಷದಲ್ಲಿ ನಾನು ಎದುರಿಸಿದ ಅವಮಾನದಿಂದ ನನಗೆ ನೋವಾಗಿದೆ ಎಂದು ನಾನು ಅವರಿಗೆ ಹೇಳಿದ್ದೇನೆ'' ಎಂದು  ಹೇಳಿದರು.

'ನಾನು ಕಾಂಗ್ರೆಸ್‌ನಲ್ಲೇ ಇದ್ದೆ. ನಾನು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ (ಈ ವರ್ಷದ ಆರಂಭದಲ್ಲಿ) ಪಕ್ಷವನ್ನು ಮುಂಚೂಣಿಯಿಂದ ಮುನ್ನಡೆಸಿದ್ದೆ, ಆದರೆ ಚುನಾವಣೆಯ ನಂತರ ನನಗೆ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ನೀಡಲಿಲ್ಲ'' ಎಂದು ಕಾಮತ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News