ಗೋವಾ: ತನ್ನ ಇಬ್ಬರು ಶಾಸಕರನ್ನು ಅನರ್ಹಗೊಳಿಸಲು ಸ್ಪೀಕರ್ ಗೆ ಕಾಂಗ್ರೆಸ್ ಮನವಿ
ಪಣಜಿ,ಜು.11: ಪಕ್ಷದೊಳಗೆ ಬಂಡಾಯವನ್ನು ದಮನಿಸಲು ಮುಂದಾಗಿರುವ ಗೋವಾ ಕಾಂಗ್ರೆಸ್,ತನ್ನ ಶಾಸಕರಾದ ದಿಗಂಬರ ಕಾಮತ್ ಮತ್ತು ಮೈಕಲ್ ಲೋಬೊ ಅವರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸುವಂತೆ ಕೋರಿ ವಿಧಾನಸಭಾ ಸ್ಪೀಕರ್ ಗೆ ಅರ್ಜಿಯನ್ನು ಸಲ್ಲಿಸಿದೆ.
ಕಾಂಗ್ರೆಸ್ ತನ್ನ 11 ಶಾಸಕರ ಪೈಕಿ ಐವರನ್ನು ಈಗಲೂ ತನ್ನೊಂದಿಗೆ ಹೊಂದಿದ್ದು, ಸೋಮವಾರ ಬೆಳಿಗ್ಗೆ ನಡೆದ ಪಕ್ಷದ ಸಭೆಯಲ್ಲಿ ಅವರು ಉಪಸ್ಥಿತರಿದ್ದರು ಎಂದು ಬಲ್ಲ ಮೂಲಗಳು ತಿಳಿಸಿವೆ. ಇತರ ನಾಲ್ವರು ಶಾಸಕರಾದ ಲೋಬೊ ಮತ್ತು ಕಾಮತ್ ಜೊತೆಗೆ ಕೇದಾರ ನಾಯ್ಕಿ ಮತ್ತು ಲೋಬೊರ ಪತ್ನಿ ಡೆಲಿಯಾ ಲೋಬೊ ಅವರು ಕಾಂಗ್ರೆಸ್ನ ಸಂಪರ್ಕಕ್ಕೆ ಸಿಗುತ್ತಿಲ್ಲ. ರಾಜ್ಯದಲ್ಲಿಯ ಪಕ್ಷದ ಬಿಕ್ಕಟ್ಟನ್ನು ನಿಭಾಯಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಹಿರಿಯ ನಾಯಕ ಮುಕುಲ ವಾಸ್ನಿಕ್ ಅವರನ್ನು ಗೋವಾಕ್ಕೆ ರವಾನಿಸಿದ್ದಾರೆ.
ಕಾಮತ್ ಮತ್ತು ಲೋಬೊ ಸೇರಿದಂತೆ ಕನಿಷ್ಠ ಆರು ಕಾಂಗ್ರೆಸ್ ಶಾಸಕರು ಆಡಳಿತಾರೂಢ ಬಿಜೆಪಿಗೆ ಜಿಗಿಯಬಹುದು ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಎಂಟು ಕಾಂಗ್ರೆಸ್ ಶಾಸಕರು ಒಂದು ಗುಂಪಾಗಿ ಪಕ್ಷಾಂತರ ಮಾಡಿದರೆ ಅವರು ಅನರ್ಹತೆಯ ತೂಗುಕತ್ತಿಯಿಂದ ತಪ್ಪಿಸಿಕೊಳ್ಳಬಹುದು. ಕಾಂಗ್ರೆಸ್ನಲ್ಲಿಯ ಬಿಕ್ಕಟ್ಟಿಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ಹೇಳಿದೆ.
ತಾನು ಶಾಸಕಾಂಗ ಪಕ್ಷದ ವಿಭಜನೆಯ ನೇತೃತ್ವವನ್ನು ವಹಿಸಿದ್ದೇನೆ ಎಂಬ ಆರೋಪಗಳು ತನಗೆ ಆಘಾತ ಮತ್ತು ದಿಗ್ಭ್ರಮೆಯನ್ನುಂಟು ಮಾಡಿವೆ ಎಂದು ಕಾಮತ್ ಹೇಳಿದ್ದಾರೆ. ತಾನು ಮತ್ತು ಲೋಬೊ ಆಡಳಿತ ಬಿಜೆಪಿಯೊಂದಿಗೆ ‘ಸಂಪೂರ್ಣ ಸಮನ್ವಯ’ದೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂಬ ಕಾಂಗ್ರೆಸ್ ನ ಗೋವಾ ಉಸ್ತುವಾರಿ ದಿನೇಶ್ ಗುಂಡೂರಾವ್ ಆರೋಪವನ್ನು ಕಾಮತ್ ತಿರಸ್ಕರಿಸಿದ್ದಾರೆ.
ಕಾಂಗ್ರೆಸ್ ಈಗಾಗಲೇ ಲೋಬೊರನ್ನು ಪ್ರತಿಪಕ್ಷ ನಾಯಕ ಸ್ಥಾನದಿಂದ ವಜಾಗೊಳಿಸಿದೆ. ಈ ವರ್ಷದ ಪೂರ್ವಾರ್ಧದಲ್ಲಿ ನಡೆದಿದ್ದ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ತೊರೆದು ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದ ಲೋಬೊ, ತನ್ನನ್ನು ಯಾರೂ ಸಂಪರ್ಕಿಸಿಲ್ಲ ಮತ್ತು ಪಕ್ಷಾಂತರದ ಆಲೋಚನೆಯಿಲ್ಲ ಎಂದು ಹೇಳಿದ್ದಾರೆ.
ಸರಿಯಾಗಿ ಮೂರು ವರ್ಷಗಳ ಹಿಂದೆ ಕಾಂಗ್ರೆಸ್ ಶಾಸಕಾಂಗ ಪಕ್ಷದ 15 ಶಾಸಕರ ಪೈಕಿ ಮೂರನೇ ಎರಡರಷ್ಟು, ಅಂದರೆ 10 ಶಾಸಕರು ಬಿಜೆಪಿಗೆ ಪಕ್ಷಾಂತರಗೊಂಡಿದ್ದರು. ಮತ್ತೆ ಅಂತಹ ಸ್ಥಿತಿ ಬರಬಾರದು ಎಂಬ ಆಶಯದೊಂದಿಗೆ ಈ ವರ್ಷ ಚುನಾವಣೆಗೆ ಮುನ್ನ ಕಾಂಗ್ರೆಸ್ ತನ್ನ ಅಭ್ಯರ್ಥಿಗಳಿಂದ ಪಕ್ಷನಿಷ್ಠೆಯ ಪ್ರಮಾಣ ಮಾಡಿಸಿತ್ತು. ಸಂಭಾವ್ಯ ಬಂಡುಕೋರರೊಂದಿಗೆ ಮಾತುಕತೆ ನಡೆಸಲು ತ್ವರಿತವಾಗಿ ಹಿರಿಯ ನಾಯಕರನ್ನು ನಿಯೋಜಿಸಿರುವ ಕಾಂಗ್ರೆಸ್ ಕನಿಷ್ಠ ಸದ್ಯದ ಮಟ್ಟಿಗೆ ಪಕ್ಷಾಂತರಕ್ಕೆ ಬ್ರೇಕ್ ಹಾಕಿರುವಂತೆ ಕಂಡು ಬರುತ್ತಿದೆ.
ಇಬ್ಬರು ನಾಯಕರು ತಮ್ಮ ವೈಯಕ್ತಿಕ ಕಾರಣಗಳಿಂದಾಗಿ ಪಕ್ಷಾಂತರದ ಷಡ್ಯಂತ್ರಕ್ಕೆ ಪ್ರಯತ್ನಿಸುತ್ತಿದ್ದಾರೆ. ಕಾಮತ ತನ್ನ ವಿರುದ್ಧ ಹಲವಾರು ಪ್ರಕರಣಗಳಿರುವುದರಿಂದ ತನ್ನನ್ನು ಉಳಿಸಿಕೊಳ್ಳಲು ಈ ಕೆಲಸ ಮಾಡಿದ್ದರೆ, ಲೋಬೊ ಅಧಿಕಾರ ಮತ್ತು ಸ್ಥಾನಕ್ಕಾಗಿ ಮಾಡಿದ್ದಾರೆ. ಬಿಜೆಪಿ ಯಾವುದೇ ವಿರೋಧವನ್ನು ಮುಗಿಸಲು ಬಯಸಿದೆ ಎಂದು ಗುಂಡೂರಾವ್ ಸುದ್ದಿಗಾರರಿಗೆ ತಿಳಿಸಿದರು.