ದೇಶದ್ರೋಹಿಗಳು, ರಾಕ್ಷಸರು, ಸರ್ವಾಧಿಕಾರಿಗಳಿಂದ ನ್ಯಾಯಾಂಗವೇ ದೇಶವನ್ನು ರಕ್ಷಿಸಬೇಕು: ಕೆಸಿಆರ್

Update: 2022-07-11 10:40 GMT

ಹೊಸದಿಲ್ಲಿ: ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಸೋಮವಾರ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪತ್ರಿಕಾಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ. ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಇದೆ ಎಂದೂ ಅವರು ಹೇಳಿಕೊಂಡರು.

ಕುಸಿಯುತ್ತಿರುವ ರೂಪಾಯಿ ಮೌಲ್ಯ ಕುರಿತು ಪ್ರಧಾನಿ ಮೋದಿಯ ಹಳೆಯ ಭಾಷಣದ ತುಣುಕು ಹಾಗೂ ಬಿಜೆಪಿಗೆ ಸೇರಿದ ನಾಯಕರ ವಿರುದ್ಧ ದಾಳಿಗಳು ಹೇಗೆ ನಿಂತಿವೆ ಎಂಬುದನ್ನು ತೋರಿಸುವ ಸುದ್ದಿ ಕ್ಲಿಪ್ಪಿಂಗ್‍ಗಳನ್ನೂ ಅವರು ಪ್ರದರ್ಶಿಸಿದರಲ್ಲದೆ "ನರೇಂದ್ರ ಮೋದಿ ಸರಕಾರ ಹೋಗಬೇಕು ಮತ್ತು ಬಿಜೆಪಿಯೇತರ ಸರಕಾರ ಬರಬೇಕು" ಎಂದು ಹೇಳಿದ್ದಾರೆ.

"ಇಂದಿರಾ ಗಾಂಧಿಗೆ ಧನ್ಯವಾದಗಳು, ತುರ್ತುಪರಿಸ್ಥಿತಿಯನ್ನು ಹೇರುವ ಧೈರ್ಯವನ್ನು ಅವರು ತೋರಿದ್ದರು. ಅದು ನೇರ ಘೋಷಿತ ತುರ್ತುಪರಿಸ್ಥಿತಿಯಾಗಿತ್ತು, ಆದರೆ ಇಂದು ಭಾರತದಲ್ಲಿ ಅಘೋಷಿತ ತುರ್ತುಪರಿಸ್ಥಿತಿಯಿದೆ" ಎಂದು ಅವರು ಹೇಳಿದರು.

ಪ್ರವಾದಿ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ಉಚ್ಛಾಟಿತ ಬಿಜೆಪಿ ನಾಯಕಿ ನೂಪುರ್ ಶರ್ಮ ಕುರಿತು ಸುಪ್ರೀಂ ಕೋರ್ಟ್ ತೀಕ್ಷ್ಣ ವಾಗ್ದಾಳಿ ನಡೆಸಿದ್ದಕ್ಕೆ  ಇಬ್ಬರು ನ್ಯಾಯಾಧೀಶರನ್ನು ಅವರು ಶ್ಲಾಘಿಸಿದರು.

"ಜಸ್ಟಿಸ್ ಸೂರ್ಯ ಕಾಂತ್, ಜಸ್ಟಿಸ್ ಪರ್ಡಿವಾಲ, ನಿಮಗೆ ಸೆಲ್ಯೂಟ್. ಇದೇ ಉತ್ಸಾಹವನ್ನು ಉಳಿಸಿ ಮತ್ತು ಭಾರತವನ್ನು ರಕ್ಷಿಸಿ. ನ್ಯಾಯಾಂಗವೇ ದೇಶವನ್ನು ಈ ದೇಶದ್ರೋಹಿಗಳು, ರಾಕ್ಷಸರು ಮತ್ತು ಸರ್ವಾಧಿಕಾರಿಗಳಿಂದ ರಕ್ಷಿಸಬೇಕು" ಎಂದು ರಾವ್ ಹೇಳಿದರು.

ಕುಸಿಯುತ್ತಿರುವ ರೂಪಾಯಿ ಮೌಲ್ಯ ಕುರಿತು ಹಿಂದೆ ಗುಜರಾತ್ ಸೀಎಂ ಆಗಿದ್ದ ಮೋದಿ ಆಡಿದ ಮಾತುಗಳ ವೀಡಿಯೋ ಪ್ರದರ್ಶಿಸಿದ ರಾವ್, "ಈಗ ರೂಪಾಯಿ ಮೌಲ್ಯ ಡಾಲರ್ ಎದುರು ರೂ 80 ತಲುಪಲಿದೆ. ನೀವೇಕೆ ಉತ್ತರಿಸುತ್ತಿಲ್ಲ. ಅದೇ ಪ್ರಶ್ನೆಗಳನ್ನು ಕೇಳುತ್ತಿದ್ದೇವೆ" ಎಂದು ಅವರು ಹೇಳಿದರು.

ಇತರ ಪಕ್ಷಗಳ ಹಲವರು ಬಿಜೆಪಿ ಸೇರುತ್ತಿರುವ ವಿವಿಧ ವೀಡಿಯೋಗಳ ತುಣುಕು ಪ್ರದರ್ಶಿಸಿದ ಅವರು ಬಿಜೆಪಿಯನ್ನು `ವಾಷಿಂಗ್ ಪೌಡರ್ ನಿರ್ಮಾ'ಗೆ ಹೋಲಿಸಿದರು.

ಮಹಾರಾಷ್ಟ್ರ ರಾಜಕೀಯ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿದ ಅವರ ಬಿಜೆಪಿ `ಏಕನಾಥ್ ಶಿಂಧೆಗಳ ಉತ್ಪಾದಕನೇ' ಎಂದು ಪ್ರಶ್ನಿಸಿದರು. ಕೆಸಿಆರ್ ಟೀಕೆಗಳ ಬೆನ್ನಲ್ಲೇ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆಯಿರುವುದರಿಂದ ಜನರ ಜೀವ ಆಸ್ತಿಪಾಸ್ತಿ ರಕ್ಷಣೆಯತ್ತ ಗಮನ ಹರಿಸಿ ಎಂದು ಸಲಹೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News