ಅಂತರ್-ಧರ್ಮೀಯ ಸಂಬಂಧದ ನೆಪದಲ್ಲಿ ಪೊಲೀಸರಿಂದ ನೆಲಸಮ ಕಾರ್ಯಾಚರಣೆ: ಪ್ರಯಾಗರಾಜ್ ಮುಸ್ಲಿಂ ಕುಟುಂಬದ ಆರೋಪ

Update: 2022-07-11 12:28 GMT

ಹೊಸದಿಲ್ಲಿ: ತಮ್ಮ ಕುಟುಂಬದ ಒಬ್ಬ ಸದಸ್ಯ ಹಿಂದು ಮಹಿಳೆಯೊಂದಿಗೆ ಅಂತರ-ಧರ್ಮೀಯ ಸಂಬಂಧ ಹೊಂದಿದ್ದಾರೆಂಬ ಕಾರಣಕ್ಕೆ ತಮಗೆ ಸೇರಿದ ಮಳಿಗೆಗಳನ್ನು ಭಾಗಶಃ ನೆಲಸಮಗೊಳಿಸಲಾಗಿದೆ ಎಂದು ಉತ್ತರ ಪ್ರದೇಶದ ಪ್ರತಾಪಘರದ ಮುಸ್ಲಿಂ ಕುಟುಂಬವೊಂದು ಆರೋಪಿಸಿದೆ. ಆದರೆ ನೆಲಸಮ ಆರೋಪವನ್ನು ನಿರಾಕರಿಸಿದ ಪೊಲೀಸರು ತಾವು ಜೋಡಿಯನ್ನು ಸೆರೆಹಿಡಿಯಲು ಯತ್ನಿಸಿದ್ದಾಗಿ ತಿಳಿಸಿದ್ದಾರೆ ಎಂದು Thewire.in ವರದಿ ಮಾಡಿದೆ.

ಈ ನಿರ್ದಿಷ್ಟ ಕುಟುಂಬದ ಯುವಕ ಕಳೆದ ಎರಡು ವರ್ಷಗಳಿಂದ ಠಾಕುರ್ ಸಮುದಾಯಕ್ಕೆ ಸೇರಿದ ಯುವತಿಯನ್ನು ಪ್ರೀತಿಸುತ್ತಿದ್ದಾನೆನ್ನಲಾಗದೆ. ಯುವತಿಯ ಕುಟುಂಬದಿಂದ ತಮಗೆ ಸತತ ಬೆದರಿಕೆಗಳು  ಬಂದಿವೆ ಹಾಗೂ ಆಕೆ ಅಪ್ರಾಪ್ತೆ ಎಂದು ಕುಟುಂಬ ಹೇಳುತ್ತಿದೆ ಎಂದು ಯುವಕನ ಕುಟುಂಬ ತಿಳಿಸಿದೆ. ಆದರೆ ಯುವತಿಯ ವಯಸ್ಸು 20 ಎಂದು ತಿಳಿದು ಬಂದಿದೆ.

ಜೂನ್ 14ರಂದು ಯುವಕ ಮತ್ತು ಯುವತಿ ಜೊತೆಯಾಗಿ ಬಾಳಲೆಂದು ತಮ್ಮ ಮನೆಗಳನ್ನು ತೊರೆದಿದ್ದರು. ನಂತರ ಯುವತಿಯ ಕುಟುಂಬ ಯುವಕನ ವಿರುದ್ಧ ದೂರು ನೀಡಿದ ಆಧಾರದಲ್ಲಿ ಅದೇ ದಿನ ಎಫ್‍ಐಆರ್ ದಾಖಲಾಗಿತ್ತು. ಯುವಕನ ತಂದೆಗೆ ಜೂನ್ 15ರಂದು ಠಾಣೆಗೆ ಬರ ಹೇಳಿ ಆರು ದಿನ ಕಸ್ಟಡಿಯಲ್ಲಿರಿಸಲಾಗಿತ್ತು ಎಂದು ಕುಟುಂಬ ತಿಳಿಸಿದ್ದು ಯುವಕನ ಸೋದರಿ ಠಾಣೆಗೆ ತೆರಳಿ ನಂತರ ಒಡಂಬಡಿಕೆಗೆ ಬಂದ ನಂತರ ಆತನನ್ನು ಬಿಡುಗಡೆಗೊಳಿಸಲಾಗಿತ್ತು ಎನ್ನಲಾಗಿದೆ.

 ಜುಲೈ 2ರಂದು ಮನೆಗೆ ಬಂದ ಪೊಲೀಸರು ಮುಖ್ಯ ಗೇಟ್ ಅನ್ನು ಮುರಿದು ಹತ್ತಿರದಲ್ಲಿ ಇರಿಸಲಾಗಿದ್ದ ಕೂಲರ್ ಹಾಗೂ ಚಾರ್‍ಪಾಯ್‍ಗೆ ಹಾನಿಯೆಸಗಿದ್ದರು. ಅದೇ ದಿನ ಯುವಕನ ಮಾವನಿಗೆ ಸೇರಿದ ಕಟ್ಟಡದಲ್ಲಿನ ಬಾಡಿಗೆದಾರರಿಗೆ ತಮ್ಮ ಮಳಿಗೆಗಳನ್ನು ತೆರವುಗೊಳಿಸುವಂತೆ ತಿಳಿಸಲಾಗಿತ್ತು. ಜುಲೈ 4ರಂದು ಮುಂಜಾನೆ ಪೊಲೀಸರು ಅಲ್ಲಿನ ಸೀಸಿಟಿವಿ ಕ್ಯಾಮರಾಗಳ ಸಂಪರ್ಕ ಹಾಗೂ ವಿದ್ಯುತ್ ಸಂಪರ್ಕ ಕಡಿತಗೊಳಿಸಿ  ಅಲ್ಲಿನ ಮೆಟ್ಟಿಲುಗಳು ಪ್ರವೇಶದ್ವಾರಗಳನ್ನು ನೆಲಸಮಗೊಳಿಸಿದ್ಧಾರೆ ಎಂದು ಯುವಕನ ಸೋದರಿ ಆರೋಪಿಸಿದ್ದಾರೆ.

ಹಿಂದು ಯುವತಿ ತಾನು ಪ್ರಬುದ್ಧಳು ಹಾಗೂ ಸ್ವಇಚ್ಛೆಯಿಂದ ಮನೆಯಿಂದ ಹೊರಗೆ ಬಂದಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾಳೆನ್ನಲಾಗಿದೆ. ಜೋಡಿ ಕಾನೂನುಬದ್ಧವಾಗಿ ವಿವಾಹವಾಗಿಲ್ಲ ಎಂಬ ಕಾರಣಕ್ಕೆ ಪೊಲೀಸರು ಅವರನ್ನು ಸೆರೆಹಿಡಿಯಲು ಪ್ರಯತ್ನಿಸುತ್ತಿದ್ದಾರೆಂಬ ಮಾಹಿತಿಯಿದೆ ಎಂದು thewire.in ವರದಿ ಮಾಡಿದೆ.

ಆದರೆ ಕುಟುಂಬಕ್ಕೆ ಸೇರಿದ ಮಳಿಗೆಗಳಲ್ಲಿ ನೆಲಸಮ ಕಾರ್ಯಾಚರಣೆ ನಡೆಸಲಾಗಿದೆ ಎಂಬ ಆರೋಪವನ್ನು ಪೊಲೀಸರು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News