ಬೈಂದೂರು ಹೊಸೇರಿ ಜನರಿಗೆ ಕಾಲು ಸಂಕವೇ ಕಂಟಕ; ಮಳೆಗಾಲದಲ್ಲಿ ಸೇತುವೆ ಮುಳುಗಡೆ
ಕುಂದಾಪುರ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರೇ ಹೆಚ್ಚಿರುವ ಈ ಗ್ರಾಮ ಮಳೆಗಾಲಕ್ಕೆ ದಿಗ್ಬಂಧನಕ್ಕೆ ಒಳಗಾಗುತ್ತದೆ. ಹೊಳೆಯ ನೀರು ತುಂಬಿ ಹರಿದರೆ ಕಾಲುಸಂಕ ಮುಳುಗಡೆಗೊಂಡು ಹೊರಗಿನ ಸಂಪರ್ಕವೇ ಇಲ್ಲ ವಾಗುತ್ತದೆ. ಇದು ಬೈಂದೂರು ತಾಲೂಕು ಗೊಳಿಹೊಳೆ ಗ್ರಾಪಂ ವ್ಯಾಪ್ತಿಯ ಯಳಜಿತ್ ಗ್ರಾಮದ ಹೊಸೇರಿ ಜನರ ಪರಿಸ್ಥಿತಿ.
ಹೊಸೇರಿಯಲ್ಲಿ ಸುಮಾರು 25 ಮನೆಗಳಿವೆ. ಅದರಲ್ಲಿ 20ಕ್ಕೂ ಅಧಿಕ ಮನೆಗಳು ಪರಿಶಿಷ್ಟ ಪಂಗಡಕ್ಕೆ ಸೇರುವ ಮರಾಠಿ ಹಾಗೂ ಗೊಂಡ ಸಮುದಾಯ ದವರದ್ದು. ಉಳಿದಂತೆ ಮೂರ್ನಾಲ್ಕು ಹಿಂದುಳಿದ ವರ್ಗದವರ ಮನೆಗಳಿವೆ. ಕೂಲಿ ಕಾರ್ಯ ಮಾಡುವ ಇಲ್ಲಿನ ಜನರು ಕೆಲಸಕ್ಕೆ ಹೋಗಬೇಕಾದರೆ, ವಿದ್ಯಾರ್ಥಿಗಳು ಶಾಲೆಗೆ ಹೋಗಬೇಕಾದರೆ, ಅನಾರೋಗ್ಯ ಪೀಡಿತರು ಆಸ್ಪತ್ರೆ ಯತ್ತ ಸಾಗಲು, ಪೇಟೆ-ಪಟ್ಟಣಕ್ಕೆ ಹೋಗಲು ಇಲ್ಲಿನ ಕಿರು ಕಾಲು ಸೇತುವೆಯೇ ಸಂಪರ್ಕ ಸಾಧನ.
ಆದರೆ ಮಳೆಗಾಲದಲ್ಲಿ ಜೋರು ಮಳೆ ಬಂದರೆ ಈ ಕಾಲು ಸಂಕದ ಮುಳುಗಿ ಹೋಗುತ್ತದೆ. ಕಾಲು ಸೇತುವೆ ಇಕ್ಕೆಲಗಳಲ್ಲಿ ಮಳೆ ನೀರು ಹರಿಯಲು ಆರಂಭ ವಾಗಿ ಸಂಕ ದಾಟಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾ ಗುತ್ತದೆ. ಅದಕ್ಕಾಗಿ ಇಲ್ಲಿನ ಜನರೇ ಅಂದಾಜು ೩ ಅಡಿ ಅಗಲ, 5 ಮೀಟರ್ ಉದ್ದ ಕಾಲು ಸಂಕಕ್ಕೆ ಮತ್ತೆ ಕಂಬ ಜೋಡಿಸಿ ಕಾಲು ಸಂಕವನ್ನು ಇನ್ನಷ್ಟು ಉದ್ದವಾಗಿ ಮಾಡಿಕೊಳ್ಳು ತ್ತಾರೆ. ಹೀಗಾದರೆ ಮಾತ್ರ ಹೊಳೆ ದಾಟಲು ಸಾಧ್ಯವಾಗುತ್ತದೆ.
ಅಪಾರ ಮಳೆ ಬಂದರೆ ಇಲ್ಲಿನ ೨೫ ಮನೆಯವರು ಮನೆಯಲ್ಲಿಯೇ ದಿಗ್ಭಂಧನಕ್ಕೆ ಒಳಗಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ತಡೆಗೋಡೆ ಇಲ್ಲದ ಈ ಸಂಕದಲ್ಲಿ ಮಳೆಗಾಲಕ್ಕೆ ನಡೆಯುವುದೇ ಅಪಾಯಕಾರಿ. ಇಲ್ಲಿನ ವಿದ್ಯಾರ್ಥಿಗಳು ಶಾಲೆಗೆ ಹೋಗಬೇಕಾದರೆ ಇದೇ ಸಂಕದಲ್ಲಿ ಜೀವ ಕೈಯಲ್ಲಿಟ್ಟು ನಡೆಯಬೇಕಾಗಿದೆ. ಈ ಬಗ್ಗೆ ಸ್ಥಳೀಯಾಡಳಿತ ಸಹಿತ ಶಾಸಕರಿಗೂ ಮನವಿ ನೀಡಿದರೂ ಈವರೆಗೂ ಸ್ಪಂದನೆ ಸಿಕ್ಕಿಲ್ಲ. ಶೀಘ್ರವೇ ಹೊಸೇರಿ ಊರಿನ ಜನರ ಸಮಸ್ಯೆಗೆ ಶಾಶ್ವತ ಪರಿಹಾರ ಆಗಬೇಕೆಂದು ಒತ್ತಾಯಗಳು ಕೇಳಿಬರುತ್ತಿವೆ.
ಕೇವಲ ನಡೆದಾಡಲು ಇರುವ ಈ ಸಂಕದಲ್ಲಿ ವಾಹನ ಕೂಡ ಸಾಗುವುದಿಲ್ಲ. ಈ ಭಾಗದ ಜನರಲ್ಲಿರುವ ವಾಹನಗಳನ್ನು ಮಳೆಗಾಲ ಬಿಟ್ಟು ಬೇಸಿಗೆಯಲ್ಲೂ ಕೂಡ ಮನೆ ತನಕ ಕೊಂಡೊಯ್ಯಲು ಆಗುವುದಿಲ್ಲ. ಅದಕ್ಕಾಗಿಯೇ ಕಾಲು ಸೇತುವೆ ಬಳಿ ಜನರೇ ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡು ಅದರಲ್ಲಿ ವಾಹನ ಗಳನ್ನು ನಿಲ್ಲಿಸುತ್ತಿದ್ದಾರೆ.
ಮಳೆಗಾಲದಲ್ಲಿ ಪೇಟೆ ಬಹುದೂರ!
ಇಲ್ಲಿನ ಸುಮಾರು 25 ಮನೆಗಳಲ್ಲಿ ಶಾಲೆಗೆ ಹೋಗುವ ೧೦ ಮಕ್ಕಳು, ದಿನ ಕೂಲಿ ಕೆಲಸಕ್ಕೆ ಹೋಗುವ 25ಕ್ಕೂ ಅಧಿಕ ಶ್ರಮಿಕರು ದಿನ ಇದೇ ಸೇತುವೆ ದಾಟಿ ಹೋಗಬೇಕು. ಈ ಭಾಗದಲ್ಲಿ ಐವರು ಹಿರಿಯ ನಾಗರಿಕರು ಕೂಡ ಇದ್ದಾರೆ.
ಇಲ್ಲಿನ ಹೊಲದ(ಅರಣ್ಯ ಪ್ರದೇಶ) ಮೂಲಕ ಸಾಗಿ ಸಮೀಪದ ಊರಾದ ವಸ್ರೆಗೆ ಹೋಗಬೇಕಾದರೆ ೨.೫ ಕಿ.ಮೀ. ಹೋದರೆ ಪೇಟೆ-ಪಟ್ಟಣ ಸುಲಭ ಮಾರ್ಗ. ಆದರೆ ಮಳೆಗಾಲಕ್ಕೆ ಸೇತುವೆ ಮುಳುಗಿದರೆ ಜನ ಯಳಜಿತ್ ಪೇಟೆಗೆ ಹೋಗಬೇಕಾದರೆ ೮ ಕಿ.ಮೀ. ಸುತ್ತು ಹಾಕಬೇಕಾದ ದೌರ್ಭಾಗ್ಯ ಎದುರಾಗು ತ್ತದೆ. ಮಳೆಗಾಲದಲ್ಲಿ ಆರೋಗ್ಯ ಸಮಸ್ಯೆಯಾದರೆ ಹೊಸೇರಿಯಿಂದ ಯಳ ಜಿತ್‌ಗೆ ಹೋಗಿ ಬೈಂದೂರು ಅಥವಾ ಕುಂದಾಪುರ ಆಸ್ಪತ್ರೆಗೆ ಹೋಗಬೇಕಾದ ಪರಿಸ್ಥಿತಿ ಇದೆ.
"ಹೊಸೇರಿ ಕಾಲು ಸಂಕ ಇದ್ದು ಇಲ್ಲದ ರೀತಿಯಲ್ಲಿದೆ. ಮಳೆಗಾಲದಲ್ಲಿ ಶಾಲಾ ಮಕ್ಕಳು, ಕೂಲಿ ಕೆಲಸಕ್ಕೆ ಹೋಗುವವರು ಈ ದುಸ್ಥಿಯಲ್ಲಿರುವ ಸಂಕದಲ್ಲಿ ಪ್ರಯಾಣಿಸಬೇಕು. ಇಲ್ಲಿ ಮರಾಠಿ, ಗೊಂಡ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಕಾಲು ಸಂಕದ ಸ್ಥಿತಿಯ ಬಗ್ಗೆ ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಯವರಿಗೂ ಮನವಿ ನೀಡಿದ್ದರೂ ಯಾವುದೇ ಪ್ರಯೋಜನ ವಾಗಿಲ್ಲ. ಈ ವರ್ಷದ ಮಳೆಗೆ ಕಾಲ್ಸುೇತುವೆ ಬೀಳುವ ಸ್ಥಿತಿಯಲ್ಲಿದೆ".
-ಹರೀಶ್ ಹೊಸೇರಿ, ಸ್ಥಳೀಯರು
"ಪ್ರತಿ ವರ್ಷ ಮಳೆಗಾಲದಲ್ಲಿ ಇದೇ ಗೋಳಾಗಿದೆ. ಹೇಳುವರಿಲ್ಲಾ, ಕೇಳು ವರಿಲ್ಲಾ. ಚುನಾವಣೆ ಬಂದಾಗ ಬರುವವರು ಮುಂದಿನ ಚುನಾವಣೆಯೊಳಗೆ ಶಾಶ್ವತ ಪರಿಹಾರ ಮಾಡಿಕೊಡುವುದಾಗಿ ಹೇಳಿ ಹೋಗುತ್ತಾರೆ. ಈವರೆಗಿನ ಫಲಿತಾಂಶ ಮಾತ್ರ ಸೊನ್ನೆ. ಈ ಬಾರಿ ಸ್ಥಳೀಯ ಯುವಕರೇ ಸೇರಿ ಬೀಳುವ ಹಂತದಲ್ಲಿದ್ದ ಕಾಲು ಸೇತುವೆ ರಿಪೇರಿ ಮಾಡಿಕೊಂಡಿದ್ದೇವೆ".
-ಸತೀಶ್ ಹೊಸೇರಿ