ಕೆಟ್ಟು ಹೋದ ಹೊಸಕಾಡು- ಪದ್ಮನೂರು ಸಂಪರ್ಕಿಸುವ ರಸ್ತೆ

Update: 2022-07-11 17:32 GMT

ಕಿನ್ನಿಗೋಳಿ, ಜು. 11: ಕೆಮ್ರಾಲ್  ಗ್ರಾಮ ಪಂಚಾಯತ್‌ ವ್ಯಾಪ್ತಿಯ ಹೊಸಕಾಡುಯಿಂದ ಪದ್ಮನೂರು ಸಂಪರ್ಕಿ ಸುವ ರಸ್ತೆ ಕೆಟ್ಟು ಹೋಗಿದ್ದು ಗ್ರಾಮಸ್ಥರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.

ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ರಸ್ತೆ ಹದಗೆಟ್ಟು ಹೊಂಡಮಯವಾಗಿದ್ದು, ವಾಹನ ಸಂಚಾರ ಹಾಗೂ ಜನರ ಓಡಾಟಕ್ಕೂ ಸಾಧ್ಯವಾಗದ ಸ್ಥಿತಿ ಇದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಪಕ್ಷಿಕೆರೆಗೆ ಹಾಗೂ ಕಿನ್ನಿಗೋಳಿ ಮಧ್ಯೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಪ್ರತೀ ದಿನ ನೂರಾರು ವಾಹನಗಳು ಓಡಾಟ ನಡೆಸುತ್ತಿರುತ್ತವೆ. ಅಲ್ಲದೇ, ಈ ವಾರ್ಡ್ ನ ಸದಸ್ಯರೂ ತಮ್ಮ ಮನೆಗಳಿಗೆ ಹೋಗಬೇಕಿದ್ದರೂ ಇದೇ ರಸ್ತೆಯನ್ನು ಬಳಸಬೇಕಿದೆ. ಆದರೂ ಜನ ಪ್ರತಿನಿಧಿಗಳು ಕಂಡೂ ಕಾಣದಂತೆ ನಿರ್ಲಕ್ಷ್ಯತನ ಪ್ರದರ್ಶಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. 

ಈ ಭಾಗದ ರಸ್ತೆಯಲ್ಲಿ ಸೂಕ್ತವಾದ ಚರಂಡಿ ವ್ಯವಸ್ಥೆ ಇಲ್ಲದ ಪರಿಣಾಮ ಮಳೆ ನೀರು ರಸ್ತೆಯಲ್ಲೇ ಹರಿದು ಬೃಹದಾಕಾರದ ಹೊಂಡಗಳು ಸೃಷ್ಠಿಯಾಗಿವೆ.‌ ಈ ಬಗ್ಗೆ ಕೆಮ್ರಾಲ್ ಗ್ರಾಮ‌ ಪಂಚಾಯತ್ ಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ವಹಿಸುತ್ತಿಲ್ಲ ಎಂದು ದೂರಿದ್ದಾರೆ.

ತಕ್ಷಣ ಕೆಮ್ರಾಲ್ ಗ್ರಾಮ‌ ಪಂಚಾಯತ್ ಎಚ್ಚೆತ್ತುಕೊಂಡು ರಸ್ತೆ ದುರಸ್ತಿಯ ಜೊತೆಗೆ ಸೂಕ್ತ ಚರಂಡಿ ವ್ಯವಸ್ಥೆಯನ್ನು ಮಾಡಬೇಕೆಂದು ಈ ಭಾಗದ ಗ್ರಾಮಸ್ಥರು ಆಗ್ರಹಿಸಿದ್ದು, ಕ್ರಮಕ್ಕೆ ಮುಂದಾಗದಿದ್ದಲ್ಲಿ ಗ್ರಾಮಸ್ಥರಿಗೆ ಕನಿಷ್ಠ ಮೂಲ ಸೌಕರ್ಯಗಳನ್ನೂ ಕಲ್ಪಿಸಲಾಗಿದ ಗ್ರಾಮ ಪಂಚಾಯತ್ ಗೆ ಬೀಗಜಡಿದು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಗ್ರಾಮಸ್ಥರಿಂದಲೇ ತಾತ್ಕಾಲಿಕ ರಸ್ತೆ ದುರಸ್ತಿ

ಗ್ರಾಮ ಪಂಚಾಯತ್ ಗೆ ದೂರು ನೀಡಲಾಗಿತ್ತು. ಗ್ರಾಮ ಪಂಚಾಯತ್ ನ ಸದಸ್ಯರು ಇದೇ ರಸ್ತೆಯಾಗಿ ಸಂಚರಿಸುತ್ತಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಹೀಗಾಗಿ ಗ್ರಾಮಸ್ಥರೇ ಸೇರಿಕೊಂಡು ಹಣ ಕೂಡಿಸಿ ಬಾಡ್ರಸ್ ಹಾಗೂ ಸಿಮೆಂಟ್ ಮಿಶ್ರಣವನ್ನು ತಂದು ದುರಸ್ತಿ ಮಾಡಲಾಗಿದೆ. ಆದರೆ, ನಿರಂತರ ಮಳೆಯಾಗುತ್ತಿದ್ದು, ನೀರು ಹರಿಯಲು ಚರಂಡಿ ಇಲ್ಲದ ಕಾರಣ ನಮ್ಮ ಶ್ರಮವೂ ವ್ಯರ್ಥವಾಗುವ ಸಾಧ್ಯತೆ ಇದೆ. ಗ್ರಾಮ ಪಂಚಾಯತ್ ಚರಂಡಿ ಸಹಿತ ರಸ್ತೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಇಲ್ಲವಾದಲ್ಲಿ ಪಂಚಾಯತ್ ಗೆ ಬೀಗ ಜಡಿದು ಪ್ರತಿಭಟಿಸಲಾಗುವುದು‌ ಎಂದು ಸ್ಥಳೀಯರಾದ ಆಸೀಫ್ ಎಂಬವರು ಹೇಳಿದ್ದಾರೆ.

"ಕಳೆದ ಹಲವು ಸಮಯದಿಂದ ಇದೇ ರಸ್ತೆಯಲ್ಲಿ ತೆರೆದ ಚರಂಡಿವೊಂದಿದೆ. ಇದರಲ್ಲಿ ಹಲವು ಬಾರಿ ವಾಹನಗಳು ಬಿದ್ದು ವಾಹನ ಸವಾರರು ಗಾಯಗೊಂಡಿರುವ ಘಟನೆಗಳು ವರದಿಯಾಗಿವೆ. ಈ ಕುರಿತು ಹಲವು ಬಾರಿ ಗ್ರಾಮ ಪಂಚಾಯತ್ ಸದಸ್ಯರಿಗೆ ದೂರ ನೀಡಲಾಗಿತ್ತು. ಆದರೆ, ಆ ಚರಂಡಿ ಇಂದಿಗೂ ಅದೇ ರೀತಿ ಇದೆ. ಇದೀಗ ಮಳೆಗಾಲವಾಗಿರುವ ಕಾರಣ ಮತ್ತಷ್ಟು ಅಪಾಯವನ್ನು ಆಹ್ವಾನಿಸುತ್ತಿದೆ‌" ಎಂದು ಸ್ಥಳೀಯರು ನಿವಾಸಿ ಅಬ್ದುಲ್ ರಹಿಮಾನ್ ಎಂಬವರು ದೂರಿದ್ದಾರೆ. 

"ಕೆಮ್ರಾಲ್‌ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸಕಾಡು ಭಾಗದಲ್ಲಿ‌ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲ. ಹೀಗಾಗಿ ಮಳೆ‌ ನೀರು ರಸ್ತೆಯಲ್ಲೇ‌ ಹರಿದು ಬಂದು ನನ್ನ ಮನೆಯ ಆವರಣದಲ್ಲಿ ಶೇಖರಣೆಗೊಳ್ಳುತ್ತಿದೆ. ಈ ಕುರಿತು ಪಂಚಾಯತ್ ಅಧ್ಯಕ್ಷರು‌ ಹಾಗೂ ಪಿಡಿಒ ಅವರಿಗೆ ವೀಡಿಯೋ ಸಹಿತ‌ ವಿವರಣೆ ನೀಡಿದ್ದೆ. ಆದರೆ, ಅಧ್ಯಕ್ಷರು ನಾನೇನು ಮಾಡಲಿ ಎಂದು ಕೈತೊಳೆದು ಕೊಂಡರೆ, ಪಿಡಿಒ ನೋಡುವ, ಮಾಡುವ ಎಂದು ಹೇಳಿದ್ದಾರೆ ಹೊರತು ಈ ವರೆಗೂ  ಯಾವುದೇ ಕ್ರಮ ಕೈಗೊಂಡಿಲ್ಲ"

-ಅಬ್ದುಲ್‌ ರಹಿಮಾನ್, ಗ್ರಾಮಸ್ಥ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News