2022ರಲ್ಲಿ ದಾಖಲೆ ಮಟ್ಟವನ್ನು ತಲುಪಿದ ಅಮೆಝಾನ್ ಅರಣ್ಯ ನಾಶ

Update: 2022-07-11 18:42 GMT

ರಿಯೊಡಿ ಜನೈರೊ, ಜು.11: ಅಮಝಾನ್ ಅರಣ್ಯ ನಾಶ ಪ್ರಕ್ರಿಯೆ 2022ರಲ್ಲಿ ದಾಖಲೆ ಮಟ್ಟವನ್ನು ತಲುಪಿದ್ದು ನ್ಯೂಯಾರ್ಕ್ ನಗರದ 5 ಪಟ್ಟು ಹೆಚ್ಚಿನ ಅರಣ್ಯ ಪ್ರದೇಶ ನಾಶವಾಗಿದೆ ಎಂದು ಬ್ರೆಝಿಲ್‌ನ ಬಾಹ್ಯಾಕಾಶ ಸಂಸ್ಥೆ ವರದಿ ಮಾಡಿದೆ.

 ಅಮಝಾನ್ ಮಳೆ ಕಾಡಿನ ನಾಶ ಪ್ರಕ್ರಿಯೆ ಈ ವರ್ಷದ ಆರಂಭದ 6 ತಿಂಗಳಲ್ಲೇ ಅತ್ಯಂತ ಗರಿಷ್ಟ ಮಟ್ಟ ತಲುಪಿ ದಾಖಲೆ ಬರೆದಿದೆ. ಗ್ರಹದ ಆಮ್ಲಜನಕ ಮತ್ತು ಇಂಗಾಲ್ ಡೈಆಕ್ಸೈಡ್ ಚಕ್ರವನ್ನು ನಿರ್ವಹಿಸುವಲ್ಲಿ ನಿರ್ಣಾಯಕ ಪಾತ್ರವನ್ನು ನಿರ್ವಹಿಸುವ ಮಳೆಕಾಡಿಗೆ ಉಂಟಾಗಿರುವ ಹಾನಿ ಪರಿಸರವಾದಿಗಳಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ನ್ಯೂಯಾರ್ಕ್ ನಗರದ 5 ಪಟ್ಟಿನಷ್ಟು ಅಮೆಝಾನ್ ಮಳೆಕಾಡು ನಾಶವಾಗಿರುವುದು ಬ್ರೆಝಿಲ್‌ನ ಬಾಹ್ಯಾಕಾಶ ಸಂಸ್ಥೆ ಸಂಗ್ರಹಿಸಿರುವ ಉಪಗ್ರಹಗಳ ಚಿತ್ರಗಳಿಂದ ವ್ಯಕ್ತವಾಗಿದೆ. ಇದು 2016ರ ಬಳಿಕದ ಅತ್ಯಧಿಕ ಪ್ರಮಾಣವಾಗಿದೆ ಎಂದು ಸಂಸ್ಥೆ ಹೇಳಿದೆ.ಈ ವರ್ಷದ ಜನವರಿಯಿಂದ ಜೂನ್‌ವರೆಗಿನ ಉಪಗ್ರಹ ಮಾಹಿತಿಯ ಪ್ರಕಾರ 3,998 ಚದರ ಕಿ.ಮೀ ವ್ಯಾಪ್ತಿಯ ಅಮಝಾನ್ ಅರಣ್ಯ ನಾಶವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 3,088 ಚದರ ಕಿ.ಮೀ ಮಳೆಕಾಡು ನಾಶವಾಗಿತ್ತು. ಜೂನ್ ತಿಂಗಳೊಂದರಲ್ಲೇ 1,120 ಚದರಡಿ ಮಳೆಕಾಡು ನಾಶವಾಗಿದ್ದು ಇದೂ ಒಂದು ದಾಖಲೆಯಾಗಿದೆ.

ವಿಶ್ವದ ಅತೀ ದೊಡ್ಡ ಮಳೆಕಾಡು ಅಮಝಾನ್, ಅಪಾರ ಪ್ರಮಾಣದ ಇಂಗಾಲವನ್ನು ಹೊಂದಿದೆ. ಆದ್ದರಿಂದಲೇ ಅದನ್ನು ಇಂಗಾಲದ ತೊಟ್ಟಿ ಎಂದು ಕರೆಯಲಾಗುತ್ತದೆ. ಮರಗಳು ನಾಶವಾದರೆ ಕಾಡಲ್ಲಿರುವ ಇಂಗಾಲ ವಾತಾವರಣವನ್ನು ಸೇರಿಕೊಂಡು ವಾತಾವರಣದ ಉಷ್ಣತೆ ಹೆಚ್ಚಿಸುತ್ತದೆ ಮತ್ತು ಹವಾಮಾನ ಬದಲಾವಣೆ ಮತ್ತು ಹವಾಮಾನ ವೈಪರೀತ್ಯ ಸಮಸ್ಯೆಗೆ ಕಾರಣವಾಗುತ್ತದೆ.

ಕಳೆದ ಕೆಲ ದಶಕಗಳಲ್ಲಿ ಹೆಚ್ಚಾಗಿ ಜಾನುವಾರು ಸಾಕಣೆ ಮತ್ತು ಕೃಷಿಗಾಗಿ ಭೂಮಿಯನ್ನು ಪರಿವರ್ತಿಸುವುದರಿಂದ ಮಳೆಕಾಡಿನ ಅಸ್ತಿತ್ವವು ತೀವ್ರವಾದ ಅಪಾಯದಲ್ಲಿದೆ. ಕಳೆದ 5 ದಶಕಗಳಲ್ಲಿ ಅಮಝಾನ್ ತನ್ನ ಅರಣ್ಯದ ಕನಿಷ್ಟ 17%ದಷ್ಟನ್ನು ಕಳೆದುಕೊಂಡಿದೆ ಎಂದು ವಿವಿಧ ಅಧ್ಯಯನ ವರದಿ ಹೇಳಿದೆ. ಭೂಮಿಯ ವಾತಾವರಣದಲ್ಲಿರುವ ಇಂತಹ ಪ್ರಮುಖ ಭಾಗದ ಅರಣ್ಯನಾಶವನ್ನು ತಡೆಯಲು ಬ್ರೆಝಿಲ್ ಅಧ್ಯಕ್ಷ ಜಯರ್ ಬೊಲ್ಸೊನಾರೊ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕೆಲವು ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಮಝಾನ್‌ನಲ್ಲಿ ಅರಣ್ಯ ನಾಶ ಅತ್ಯಂತ ಆಳದ ಮಟ್ಟಿಗೆ ತಲುಪಿದೆ. ಕಳೆದ 6 ತಿಂಗಳಲ್ಲಿ ಅಮಝಾನ್ ಅರಣ್ಯಪ್ರದೇಶದ ಹೃದಯ ಭಾಗದಲ್ಲಿರುವ ಅಮೆಝೊನಾಸ್ ರಾಜ್ಯದಲ್ಲಿ ದಾಖಲೆ ಮಟ್ಟದ ಅರಣ್ಯನಾಶ ನಡೆದಿದೆ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News