ಬ್ರಿಟನ್ ಪ್ರಧಾನಿ ಹುದ್ದೆಗೆ ತೀವ್ರಗೊಂಡ ಪೈಪೋಟಿ: ರಿಷಿ ಸುನಾಕ್ ವಿರುದ್ಧ ವೈಯಕ್ತಿಕ ದಾಳಿ

Update: 2022-07-11 18:43 GMT

ಲಂಡನ್, ಜು.11: ಬೋರಿಸ್ ಜಾನ್ಸನ್ ರಾಜೀನಾಮೆಯಿಂದ ತೆರವಾಗಿರುವ ಬ್ರಿಟನ್ ಪ್ರಧಾನಿ ಹುದ್ದೆಗೆ ಆಡಳಿತ ಕನ್ಸರ್ವೇಟಿವ್ ಪಕ್ಷದ ಪ್ರಮುಖರ ಮಧ್ಯೆ ಪೈಪೋಟಿ ತೀವ್ರಗೊಳ್ಳುತ್ತಿರುವಂತೆಯೇ, ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ಮಾಜಿ ಸಚಿವ ರಿಷಿ ಸುನಾಕ್ ವಿರುದ್ಧದ ಮಾತಿನ ದಾಳಿ ವೈಯಕ್ತಿಕ ಮಟ್ಟಕ್ಕೆ ಇಳಿದಿದೆ

‘ದಿ ಸಂಡೆ ಟೆಲಿಗ್ರಾಫ್’ನಲ್ಲಿ ಪ್ರಕಟವಾಗಿರುವ ಲೇಖನದಲ್ಲಿ ರಿಷಿ ಸುನಾಕ್‌ರನ್ನು ‘ಶಾಲಾ ಹುಡುಗ’, ತೆರಿಗೆ ವಿಷಯದಲ್ಲಿ ನಂಬಿಕೆಗೆ ಅನರ್ಹರಾಗಿರುವ ಸುಳ್ಳುಗಾರ ಎಂದು ವೈಯಕ್ತಿಕ ದಾಳಿ ನಡೆಸಲಾಗಿದೆ.

‘ರಿಷಿಗಾಗಿ ಸಿದ್ಧವಾಗಿರಿ’ ಎಂಬ ಶೀರ್ಷಿಕೆಯ ಲೇಖನದಲ್ಲಿ , ರಿಷಿ ಸುನಾಕ್ ‘ದೊಡ್ಡ ಖರ್ಚು ಮತ್ತು ದೊಡ್ಡ ತೆರಿಗೆ’ ಎಂಬ ರಹಸ್ಯ ಕಾರ್ಯಸೂಚಿಯನ್ನು ಹೊಂದಿದ್ದಾರೆ. ಇದು ಬೋರಿಸ್‌ಗೆ ನಿಷ್ಟರಾಗಿದ್ದ ಪಕ್ಷದ ಥ್ಯಾಚರ್ ಬೆಂಬಲಿಗರಿಂದ ಬರಲಿದೆ. ರೇಸ್‌ನಲ್ಲಿ ಹಲವರಿದ್ದರೂ ಮುಂಚೂಣಿಯಲ್ಲಿರುವ ವ್ಯಕ್ತಿ ಪಟ್ಟಾಭಿಷೇಕದ ದೃಶ್ಯವನ್ನು ಈಗಲೇ ರೂಪಿಸುತ್ತಿದ್ದಾರೆ. ಆದರೆ ಅವರ ದಾಖಲೆ ಅತ್ಯಂತ ಕಳಪೆಯಾಗಿದೆ ಎಂದು ಉಲ್ಲೇಖಿಸಲಾಗಿದೆ.

ಪತ್ನಿ ಅಕ್ಷತಾ ಮೂರ್ತಿಯ ನಿವಾಸೇತರ ತೆರಿಗೆ ಸ್ಥಿತಿಯ ಬಗ್ಗೆ ಸುನಾಕ್ ಸಾರ್ವಜನಿಕವಾಗಿ ಸುಳ್ಳು ಹೇಳಿದ್ದಾರೆ. ಬ್ರಿಟನ್‌ನಲ್ಲಿ ಸಚಿವರಾಗಿ ನೇಮಕಗೊಂಡು 18 ತಿಂಗಳವರೆಗೂ ರಿಷಿ ಅಮೆರಿಕದ ಗ್ರೀನ್‌ಕಾರ್ಡ್ ಅನ್ನು ರಹಸ್ಯವಾಗಿ ಉಳಿಸಿಕೊಂಡಿದ್ದರು. ಪ್ರಧಾನಿ ಹುದ್ದೆಗೆ ಅವರು ಕಳೆದ ಡಿಸೆಂಬರ್‌ನಲ್ಲೇ ವೆಬ್‌ಸೈಟ್ ಮೂಲಕ ಅಭಿಯಾನ ಆರಂಭಿಸಿದ್ದರು. ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ಲಾಕ್‌ಡೌನ್ ಉಲ್ಲಂಘಿಸಿದ ಕಾರಣಕ್ಕೆ ಸುನಾಕ್‌ಗೆ ಪೊಲೀಸರು ದಂಡವನ್ನೂ ವಿಧಿಸಿದ್ದರು, ಇದೂ ಕೂಡಾ ಪಾರ್ಟಿಗೇಟ್‌ನ ರೀತಿಯ ವಿವಾದವಾಗಿದೆ ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿದೆ.
 
ಈ ಮಧ್ಯೆ, ಸುನಾಕ್ ರಾಜೀನಾಮೆ ಬೋರಿಸ್ ಜಾನ್ಸನ್ ಪದತ್ಯಾಗಕ್ಕೆ ಹೆಚ್ಚಿನ ಒತ್ತಡ ಬೀರಿದೆ ಎಂದು ಆಕ್ರೋಶಗೊಂಡಿರುವ ಜಾನ್ಸನ್ ಬೆಂಬಲಿಗರು, ಪ್ರಧಾನಿ ಹುದ್ದೆಗೆ ರಿಷಿ ಸುನಾಕ್‌ರನ್ನು ಬೆಂಬಲಿಸದಿರಲು ನಿರ್ಧರಿಸಿದ್ದಾರೆ ಎಂದು ‘ಅಬ್ಸರ್ವರ್’ ಪತ್ರಿಕೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News