ಕಾಳಿ ಪೋಸ್ಟರ್‌ ವಿವಾದ: ನಿರ್ದೇಶಕಿ ಲೀನಾ ಮಣಿಮೇಘಲೈಗೆ ದಿಲ್ಲಿ ಹೈಕೋರ್ಟ್‌ನಿಂದ ಸಮನ್ಸ್‌

Update: 2022-07-12 06:48 GMT

ಹೊಸದಿಲ್ಲಿ: ಹಿಂದೂ ದೇವತೆ ಕಾಳಿ ಸಿಗರೇಟ್ ಸೇದುವ ಪೋಸ್ಟರ್‌ ಅನ್ನು ಹೊಂದಿರುವ ಚಿತ್ರವನ್ನು ತಡೆಯುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ಮೇರೆಗೆ ದಿಲ್ಲಿ ಹೈಕೋರ್ಟ್ ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಘಲೈ ಅವರಿಗೆ ಸಮನ್ಸ್ ಜಾರಿ ಮಾಡಿದೆ ಎಂದು Barandbench ಸೋಮವಾರ ವರದಿ ಮಾಡಿದೆ.

ತೀಸ್ ಹಜಾರಿ ನ್ಯಾಯಾಲಯದ ನ್ಯಾಯಾಧೀಶ ಅಭಿಷೇಕ್ ಕುಮಾರ್ ಅವರು, ಪ್ರತಿವಾದಿಗಳ ವಿರುದ್ಧ ಯಾವುದೇ ಆದೇಶಗಳನ್ನು ಹೊರಡಿಸುವ ಮೊದಲು ಪ್ರತಿವಾದಿಗಳ ವಿಚಾರಣೆಯಿಲ್ಲದೆ ಚಿತ್ರವನ್ನು ನಿಲ್ಲಿಸಲು ತಡೆಯಾಜ್ಞೆ ಹೊರಡಿಸಲಾಗುವುದಿಲ್ಲ ಎಂದು ಹೇಳಿದರು.

ನ್ಯಾಯಾಲಯವು ಆಗಸ್ಟ್ 6 ರಂದು ವಿಚಾರಣೆಗೆ ಪ್ರಕರಣವನ್ನು ಪಟ್ಟಿ ಮಾಡಿದೆ.

ವಕೀಲ ರಾಜ್ ಗೌರವ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತ್ತು. ಮಣಿಮೇಘಲೈ ಅವರ ಸಾಕ್ಷ್ಯಚಿತ್ರದಲ್ಲಿ, ಹಿಂದೂ ದೇವತೆಯನ್ನು "ಅಸಭ್ಯ" ರೀತಿಯಲ್ಲಿ ಚಿತ್ರಿಸಲಾಗಿದೆ ಎಂದು ಅವರು ವಾದಿಸಿದ್ದಾರೆ. ಸಾಕ್ಷ್ಯಚಿತ್ರದ ಪೋಸ್ಟರ್ ಮತ್ತು ಪ್ರಚಾರದ ವೀಡಿಯೋದಲ್ಲಿ ಕಾಳಿ ಸಿಗರೇಟ್ ಸೇದುವುದನ್ನು ತೋರಿಸುತ್ತದೆ ಎಂದು ಗೌರವ್ ಉಲ್ಲೇಖಿಸಿದ್ದರು.

ಕಾಳಿಯ ಚಿತ್ರಣವು ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವುದಲ್ಲದೆ, ನೈತಿಕತೆ ಮತ್ತು ಸಭ್ಯತೆಯ ಮೂಲ ತತ್ವಗಳಿಗೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ. ಸಿಗರೇಟ್ ಸೇದುವುದರ ಜೊತೆಗೆ, ಸಾಕ್ಷ್ಯಚಿತ್ರದ ಪೋಸ್ಟರ್‌ನಲ್ಲಿ ಹಿಂದೂ ದೇವತೆಯಂತೆ ವೇಷಭೂಷಣ ಧರಿಸಿರುವ ಮಹಿಳೆ LGBTQ ಸಮುದಾಯದ ಧ್ವಜವನ್ನು ಎತ್ತುತ್ತಿರುವುದನ್ನು ತೋರಿಸುತ್ತದೆ.

ಮಧುರೈ ಮೂಲದ ಚಲನಚಿತ್ರ ನಿರ್ಮಾಪಕಿ ಲೀನಾ ಹಿಂದೂ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಎರಡು ದೂರುಗಳನ್ನು ದಾಖಲಿಸಿದ ನಂತರ ದಿಲ್ಲಿ ಮತ್ತು ಉತ್ತರ ಪ್ರದೇಶ ಪೊಲೀಸರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News