"ಸಂಸತ್ ಭವನದ ಮೇಲಿನ ರಾಷ್ಟ್ರೀಯ ಲಾಂಛನ ಮೋದಿ ಅನಾವರಣಗೊಳಿಸಿರುವುದು ಸಾಂವಿಧಾನಿಕ ನಿಯಮ ಉಲ್ಲಂಘನೆ"

Update: 2022-07-12 09:49 GMT

ಹೊಸದಿಲ್ಲಿ: ರಾಜಧಾನಿಯಲ್ಲಿ ನಿರ್ಮಾಣವಾಗುತ್ತಿರುವ ಹೊಸ ಸಂಸತ್ ಭವನದ ಮೇಲೆ ಇರಿಸಲಾಗಿರುವ ರಾಷ್ಟ್ರೀಯ ಲಾಂಛನವನ್ನು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿರುವುದು  ಶಾಸಕಾಂಗ ಮತ್ತು ಕಾರ್ಯಾಂಗದ ನಡುವಿನ ಅಧಿಕಾರಗಳ ಪ್ರತ್ಯೇಕಿಸುವಿಕೆಯ ತತ್ವಗಳಿಗೆ ವಿರುದ್ಧವಾಗಿದೆ ಎಂದು ವಿಪಕ್ಷ ನಾಯಕರು ಟೀಕಿಸಿದ್ದಾರೆ.

ಸೋಮವಾರ ಪ್ರಧಾನಿ ಲಾಂಛನವನ್ನು ಅನಾವರಣಗೊಳಿಸಿದ ಬೆನ್ನಿಗೆ ಪ್ರತಿಕ್ರಿಯಿಸಿದ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ, ಪ್ರಧಾನಿ ಎಲ್ಲಾ ಸಂವಿಧಾನಿಕ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು.

"ಸಂವಿಧಾನವು ಸಂಸತ್, ಸರಕಾರ ಮತ್ತು ನ್ಯಾಯಾಂಗ ಇವುಗಳ ಅಧಿಕಾರಗಳನ್ನು ಪ್ರತ್ಯೇಕಿಸಿದೆ. ಸರಕಾರದ ಮುಖ್ಯಸ್ಥರಾಗಿ ಮೋದಿ ಈ ರಾಷ್ಟ್ರೀಯ ಲಾಂಛನವನ್ನು ಅನಾವರಣಗೊಳಿಸಬಾರದಾಗಿತ್ತು,  ಲೋಕಸಭೆಯ ಸ್ಪೀಕರ್  ಲೋಕಸಭೆಯನ್ನು ಪ್ರತಿನಿಧಿಸುತ್ತಾರೆ" ಎಂದು ಉವೈಸಿ ಹೇಳಿದ್ದಾರೆ.

ಸಿಪಿಐ(ಎಂ) ಕೂಡ ಪ್ರಧಾನಿಯನ್ನು ಟೀಕಿಸಿದ್ದಾರಲ್ಲದೆ ಈ ಸಂದರ್ಭ ಪೂಜೆ ಏರ್ಪಡಿಸಿರುವುದನ್ನೂ ಪ್ರಶ್ನಿಸಿದೆ. ಭಾರತದ ಸಂವಿಧಾನವು ಎಲ್ಲಾ ಭಾರತೀಯರಿಗೂ ತಮ್ಮ ಧರ್ಮವನ್ನು ಅನುಸರಿಸಲು ಅನುಮತಿಸುತ್ತದೆ  ಆದರೆ ಸರಕಾರ ಯಾವುದೇ ಧರ್ಮಕ್ಕೆ ಒಳಪಡುವುದಿಲ್ಲ ಎಂದು ಸಂವಿಧಾನ ಸ್ಪಷ್ಟವಾಗಿ ತಿಳಿಸಿದೆ,''ಎಂದು ಸಿಪಿಐ(ಎಂ) ಹೇಳಿದೆ.

ಕಾರ್ಯಕ್ರಮದಿಂದ ವಿಪಕ್ಷಗಳನ್ನು ಹೊರಗಿಟ್ಟಿರುವುದು ಸಂಪೂರ್ಣ ತಪ್ಪು ಎಂದು ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧುರಿ ಹೇಳಿದರು.

"ಮೋದಿ ಎರಡನೇ ಪ್ರಜಾಪ್ರಭುತ್ವ, ಒಂದು ಹಿಂದು ರಾಷ್ಟ್ರ ನಿರ್ಮಿಸಲು ಯತ್ನಿಸುತ್ತಿದ್ದಾರೆ.  ವಿಪಕ್ಷಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದೇ ಇರುವುದು ಪ್ರಜಾಪ್ರಭುತ್ವದ ಸಿದ್ಧಾಂತಕ್ಕೆ ವಿರುದ್ಧ ಹಾಗೂ ದೇಶಕ್ಕೆ ಕೆಟ್ಟ ಶಕುನ. ಬಿಜೆಪಿಯು ಕಾಂಗ್ರೆಸ್ ಮುಕ್ತ ಭಾರತದ ಕುರಿತು ಮಾತನಾಡಿದೆ ಈಗ ಅವರು ಪ್ರಜಾಪ್ರಭುತ್ವ ಮುಕ್ತ ಭಾರತ ನಿರ್ಮಿಸಲು ಅವರು ಬಯಸಿದ್ದಾರೆ" ಎಂದು ಚೌಧುರಿ ಹೇಳಿದರು.

ಆದರೆ ವಿಪಕ್ಷಗಳ ಟೀಕೆ ಆಧಾರರಹಿತ ಎಂದು ಬಿಜೆಪಿ ವಕ್ತಾರ ಅನಿಲ್ ಬಲುನಿ ಹೇಳಿದ್ದಾರೆ.

"ಅನಾವರಣ ಸಮಾರಂಭದ ಬಗ್ಗೆ ಮಾತನಾಡುತ್ತಿರುವ ವಿಪಕ್ಷಗಳು ಆಡಳಿತಾತ್ಮಕ ಪ್ರಕ್ರಿಯೆ ಬಗ್ಗೆ ತಿಳಿಯಬೇಕು. ಸಂಸತ್ ಕಟ್ಟಡದ ವಿನ್ಯಾಸ, ಅನುದಾನ ಮತ್ತು ಉಸ್ತುವಾರಿ ಸಂಪೂರ್ಣವಾಗಿ ನಗರಾಭಿವೃದ್ಧಿ ಸಚಿವಾಲಯದಡಿ ಬರುತ್ತದೆ, ಸಂಸತ್ ಕಟ್ಟಡದ ಶಂಕುಸ್ಥಾಪನೆಯನ್ನೂ ಮೋದಿ ನೆರವೇರಿಸಿದ್ದರು" ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News