ಮುಹಮ್ಮದ್‌ ಝುಬೈರ್‌ ರ ಮಧ್ಯಂತರ ಜಾಮೀನು ವಿಸ್ತರಿಸಿದ ಸುಪ್ರೀಂ ಕೋರ್ಟ್

Update: 2022-07-12 15:45 GMT

 ಹೊಸದಿಲ್ಲಿ,ಜು.12: ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಉತ್ತರ ಪ್ರದೇಶದ ಸೀತಾಪುರದಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಆಲ್ಟ್ ನ್ಯೂಸ್ ನ ಸಹಸ್ಥಾಪಕ ಮುಹಮ್ಮದ್ ಝುಬೈರ್ ಅವರಿಗೆ ಮಂಜೂರು ಮಾಡಲಾಗಿರುವ ಮಧ್ಯಂತರ ಜಾಮೀನಿನ ಅವಧಿಯನ್ನು ಮುಂದಿನ ಆದೇಶದವರೆಗೆ ವಿಸ್ತರಿಸಿದೆ.

ಹಿಂದುತ್ವವಾದಿಗಳಾದ ಯತಿ ನರಸಿಂಹಾನಂದ ಸರಸ್ವತಿ,ಬಜರಂಗ ಮುನಿ ಮತ್ತು ಆನಂದ್ ಸ್ವರೂಪ್ ಅವರನ್ನು ದ್ವೇಷ ಪ್ರಸಾರಕರು ಎಂದು ಟ್ವೀಟ್ನಲ್ಲಿ ಬಣ್ಣಿಸಿದ್ದಕ್ಕಾಗಿ ಸೀತಾಪುರದಲ್ಲಿ ಝಬೈರ್ ವಿರುದ್ಧ ಪ್ರಕರಣ ದಾಖಲಾಗಿದೆ. ಮುಸ್ಲಿಮರ ಕುರಿತು ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡಿರುವುದಕ್ಕಾಗಿ ಈ ಮೂವರ ವಿರುದ್ಧ ಕಳೆದ ಕೆಲವು ತಿಂಗಳುಗಳಲ್ಲಿ ದ್ವೇಷಭಾಷಣ ಪ್ರಕರಣಗಳು ದಾಖಲಾಗಿರುವುದು ಇಲ್ಲಿ ಗಮನಾರ್ಹವಾಗಿದೆ.

ಜು.8ರಂದು ಸವೋಚ್ಚ ನ್ಯಾಯಾಲಯವು ಝುಬೈರ್ ಗೆ ಐದು ದಿನಗಳ ಮಧ್ಯಂತರ ಜಾಮೀನನ್ನು ಮಂಜೂರು ಮಾಡಿತ್ತು. ಆದರೆ ಇತರ ಹಲವಾರು ಪ್ರಕರಣಗಳಲ್ಲಿಯೂ ಹೆಸರಿಸಲ್ಪಟ್ಟಿರುವುದರಿಂದ ಅವರು ಈಗಲೂ ಕಸ್ಟಡಿಯಲ್ಲಿಯೇ ಇದ್ದಾರೆ.
 
ಮಂಗಳವಾರದ ವಿಚಾರಣೆ ಸಂದರ್ಭದಲ್ಲಿ ನ್ಯಾ.ಡಿ.ವೈ.ಚಂದ್ರಚೂಡ ನೇತೃತ್ವದ ಸರ್ವೋಚ್ಚ ನ್ಯಾಯಾಲಯದ ಪೀಠವು ಪ್ರಕರಣದಲ್ಲಿ ತನ್ನ ನಿಲುವನ್ನು ವಿವರಿಸಿ ಅಫಿಡವಿಟ್ ಸಲ್ಲಿಸಲು ಉತ್ತರ ಪ್ರದೇಶ ಸರಕಾರಕ್ಕೆ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ. ಸೆ.7ರಂದು ಪ್ರಕರಣದ ಅಂತಿಮ ವಿಲೇವಾರಿಗಾಗಿ ವಿಚಾರಣೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News