ಕುಟುಂಬದೊಂದಿಗೆ ಈದ್‌ ಆಚರಿಸದೇ ಅಮರನಾಥ ಯಾತ್ರಿಗಳ ರಕ್ಷಣೆಯಲ್ಲಿ ನಿರತರಾದ ಸ್ಥಳೀಯರು

Update: 2022-07-12 08:47 GMT
Photo: Twitter

ಹೊಸದಿಲ್ಲಿ: ಪ್ರತಿ ವರ್ಷವೂ ಹಲವಾರು ಮಂದಿ ಭಕ್ತರು ಅಮರನಾಥ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಹಲವಾರು ಮುನ್ನೆಚ್ಚರಿಕಾ ಕ್ರಮಗಳು ಕೈಗೊಂಡರೂ ಕೆಲ ದುರ್ಘಟನೆಗಳು ನಡೆದು ಸಾವು-ನೋವುಗಳು ಸಂಭವಿಸುತ್ತವೆ. ಈ ಬಾರಿಯೂ ಹಿಮಪಾತದ ಕಾರಣದಿಂದ ಹಲವು ತೊಂದರೆಗಳೆದುರಾಗಿದ್ದು, ಸ್ಥಳದಲ್ಲಿ ಪರಿಹಾರ ಕಾರ್ಯಾಚಾರಣೆಗೆ ಸೈನ್ಯದ ಜೊತೆಗೆ ಸ್ಥಳೀಯ ಮುಸ್ಲಿಮರು ತಮ್ಮ ಈದ್‌ ಹಬ್ಬವನ್ನು ಲೆಕ್ಕಿಸದೇ ಭಾಗಿಯಾದ ಘಟನೆ ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿದೆ. 

ಜಮ್ಮು ಮತ್ತು ಕಾಶ್ಮೀರದ ಪಾಲ್ಗಾಮ್‌ ಬಳಿಯಿಂದ ಯಾತ್ರೆ ಆರಂಭಿಸಲಾಗುತ್ತದೆ. ಯಾತ್ರಿಕರು ಹಾಕಿದ್ದ ಟೆಂಟ್‌ ಗಳಿಗೆ ಮತ್ತು ಹಲವು ಯಾತ್ರಿಕರಿಗೆ ಹಿಮಪಾತದಿಂದ ಅನಾನುಕೂಲವಾಗಿತ್ತು. ಮೊದಲ ದಿನದಿಂದಲೂ ಹಲವಾರು ಸ್ಥಳೀಯರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ವರ್ಷಂಪ್ರತಿ ಮುಸ್ಲಿಮರು ಆಚರಿಸುವ ಬಕ್ರೀದ್‌ ಅನ್ನು ಲೆಕ್ಕಿಸದೇ ಗ್ರಾಮಸ್ಥರು ಅಲ್ಲೇ ಇದ್ದು ಯಾತ್ರಿಕರಿಗೆ ಹಲವು ಅನುಕೂಲಗಳನ್ನು ಮಾಡಿಕೊಟ್ಟದ್ದಾಗಿ ವರದಿಗಳು ತಿಳಿಸಿವೆ. ಹಲವಾರು ಮಂದಿ ವ್ಯಾಪಾರವನ್ನೂ ನಡೆಸುತ್ತಿದ್ದು, "ನಮಗೆ ನಮ್ಮ ಸಾಮಗ್ರಿಗಳ ಬಗ್ಗೆ ದುಃಖವಿಲ್ಲ. ನಮಗೆ ಜನರ ಜೀವದ ಕುರಿತು ದುಖವಿದೆ" ಎಂದು ಹೇಳುವ ವೀಡಿಯೋ ಕೂಡಾ ವೈರಲ್‌ ಆಗಿದೆ.

"ಯಾತ್ರೆ ಆದಷ್ಟು ಬೇಗನೇ ಮರು ಆರಂಭಗೊಳ್ಳಬೇಕು" ಎಂದು ಸ್ಥಳೀಯರೋರ್ವರು ಹೇಳುತ್ತಾರೆ. ನಮಗೆ ಈದ್‌ಗಿಂತ ಸದ್ಯ ಈ ಕಾರ್ಯ ಮುಖ್ಯ. ಅದು ಈದ್‌ ನ ಸಂದೇಶವೂ ಹೌದು" ಎಂದೂ ಇನ್ನೋರ್ವರು ಹೇಳಿದ್ದಾರೆ. ಭಾರತೀಯ ಸೇನೆಯ ಜೊತೆಗೆ ಇವರು ಆರಂಭದಿಂದಲೂ ಇದ್ದು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಇದು ನಿಜಕ್ಕೂ ನಮಗೆ ಸಂತೋಷದ ವಿಚಾರ. ನಮ್ಮ ದೇಶದ ಭ್ರಾತೃತ್ವದ ಸಂದೇಶವನ್ನು ಇದು ಸಾರುತ್ತದೆ ಎಂದು ಸ್ಥಳದಲ್ಲಿದ್ದ ಅಧಿಕಾರಿಯೋರ್ವರು ಹೇಳಿಕೆ ನೀಡಿದ್ದಾರೆ. 

ಬೇಸ್‌ ಕ್ಯಾಂಪ್‌ (ಯಾತ್ರೆ ಆರಂಭವಾಗುವ ಸ್ಥಳ)ನಲ್ಲೇ ಈದ್‌ ನಮಾಝ್‌ ಅನ್ನೂ ನಿರ್ವಹಿಸಿದ್ದು, ಹಿಮಪಾತದಿಂದ ಮೃತಪಟ್ಟವರಿಗೆ ವಿಶೇಷ ಪ್ರಾರ್ಥನೆಯನ್ನೂ ಕೈಗೊಳ್ಳಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News