ರಾಷ್ಟ್ರೀಯ ಲಾಂಛನದಲ್ಲಿ ʼಆಕ್ರಮಣಕಾರಿ ಮುಖದʼ ಸಿಂಹ ಅನಾವರಣಗೊಳಿಸಿದ ಪ್ರಧಾನಿ ಮೋದಿ: ವ್ಯಾಪಕ ಆಕ್ರೋಶ

Update: 2022-07-12 09:50 GMT
Photo: Twitter/PrashantBhushan

ಹೊಸದಿಲ್ಲಿ: ಹಿಂದಿನಿಂದಲೂ ಭಾರತದ ರಾಷ್ಟ್ರೀಯ ಲಾಂಛನದಲ್ಲಿರುವ ಸಿಂಹಗಳ ಮುಖವು ನಿರ್ಲಿಪ್ತ ಭಾವದಿಂದ ಕೂಡಿದ್ದು, ಆದರೆ ಇದೀಗ ಅದನ್ನು ಉಗ್ರರೀತಿಯಲ್ಲಿ ಬಿಂಬಿಸಲಾಗಿದೆ ಎಂದು ಸಾಮಾಜಿಕ ತಾಣದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ತೃಣಮೂಲ ಕಾಂಗ್ರೆಸ್ ಸಂಸದರಾದ ಜವಾಹರ್ ಸಿರ್ಕಾರ್ ಮತ್ತು ಮಹುವಾ ಮೊಯಿತ್ರಾ ಅವರು ಮೋದಿ ಸರಕಾರದ ವಿರುದ್ಧ ಕಿಡಿಕಾರಿದ್ದು ಸೋಮವಾರ ಪ್ರಧಾನಿ ನರೇಂದ್ರ ಮೋದಿ ನೂತನ ಸಂಸತ್ ಭವನದ ಮೇಲೆ ಅನಾವರಣಗೊಳಿಸಿದ ರಾಷ್ಟ್ರೀಯ ಲಾಂಛನದಲ್ಲಿ ಸಿಂಹಗಳನ್ನು ಆಕ್ರಮಣಕಾರಿ ರೀತಿಯಲ್ಲಿ ಬಿಂಬಿಸಲಾಗಿದೆ ಹಾಗೂ ಮೂಲ ಲಾಂಛನಕ್ಕಿಂತ ಬಹಳ ಭಿನ್ನವಾಗಿದೆ ಎಂದು ಟೀಕಿಸಿದ್ದಾರೆ.

ರಾಜ್ಯಸಭಾ ಸಂಸದರಾದ ಜವಾಹರ್ ಸಿರ್ಕಾರ್ ಟ್ವೀಟ್ ಮಾಡಿ "ರಾಷ್ಟ್ರೀಯ ಲಾಂಛನಕ್ಕೆ ಅವಮಾನ, ಭವ್ಯ ಅಶೋಕ ಸ್ಥಂಭದ ಸಿಂಹಗಳು. ಮೂಲ ಎಡಭಾಗದ ಚಿತ್ರದಲ್ಲಿದೆ ಸೌಮ್ಯ, ರಾಜ ಗಾಂಭೀರ್ಯದಲಿರುವ ಸಿಂಹಗಳು ಆದರೆ  ಬಲಭಾಗದಲ್ಲಿರುವುದು ಮೋದಿಯ ಆವೃತ್ತಿ, ಸಂಸತ್ ಭವನದ ಮೇಲೆ ಅನಾವರಣಗೊಳಿಸಲಾಗಿದೆ, ಅನಗತ್ಯವಾಗಿ ಆಕ್ರಮಣಕಾರಿ ಮುಖಚರ್ಯೆ ಮತ್ತು ಭಿನ್ನವಾಗಿದೆ. ನಾಚಿಕೆಗೇಡು! ಅದನ್ನು ತಕ್ಷಣ ಬದಲಾಯಿಸಿ" ಎಂದು ಬರೆದಿದ್ದಾರೆ.

ಲೋಕಸಭಾ ಸಂಸದೆ ಮಹುವಾ ಮೊಯಿತ್ರಾ ಕೂಡ ಮೂಲ ರಾಷ್ಟ್ರೀಯ ಲಾಂಛನ ಮತ್ತು ಸಂಸತ್ ಭವನದ ಮೇಲೆ ಸ್ಥಾಪಿಸಲಾದ ಲಾಂಛನದ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.

ಲಾಂಛನ ಅಳವಡಿಸುವ ವೇಳೆ ಈ ಕಟ್ಟಡದಲ್ಲಿ ಕುಳಿತುಕೊಳ್ಳಲಿರುವ ಸಂಸದರನ್ನು ವಿಶ್ವಾಸಕ್ಕೆ ಪಡೆದುಕೊಂಡಿಲ್ಲ, "ಮೋದಿ ಈಗ ತಮ್ಮ ಕ್ರೋನಿ ಶಿಲ್ಪಿ  ದುಬಾರಿ ವೆಚ್ಚಕ್ಕೆ ನಿರ್ಮಿಸಿದ ಈ ಸಾಮಾನ್ಯ ಶಿಲ್ಪಕಲೆಯನ್ನು ನಮ್ಮ ಮೇಲೆ ಹೇರಿದ್ದಾರೆ" ಎಂದು ಜವಾಹರ್ ಸಿರ್ಕಾರ್ ಈ ಹಿಂದೆ ಬರೆದಿದ್ದರು.

ಸಾಮಾಜಿಕ ತಾಣದಲ್ಲಿ ಹಲವಾರು ಮಂದಿ ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಲಾಂಛನವನ್ನು ಸರಿಪಡಿಸಿ ಬದಲಾಯಿಸಬೇಕೆಂದು ಮನವಿ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News