×
Ad

ಪ್ರಧಾನಿ ಮೋದಿ ಆಗಮಿಸಲಿರುವ ಕಾರ್ಯಕ್ರಮಕ್ಕೆ ನಾಲ್ಕು ವರ್ಷದ ಹಿಂದೆ ಮೃತಪಟ್ಟ ಶಾಸಕನಿಗೆ ಆಹ್ವಾನ ಪತ್ರ.!

Update: 2022-07-12 17:15 IST

ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ಅವರು ಒಂದು ದಿನದ ಭೇಟಿಗಾಗಿ ಇಂದು ಬಿಹಾರದ ರಾಜಧಾನಿ ಪಾಟ್ನಾಗೆ ಆಗಮಿಸುತ್ತಿದ್ದಾರೆ. ವಿಧಾನಸಭೆ ಸಂಕೀರ್ಣದ ಶತಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಬಿಹಾರ ವಿಧಾನಸಭೆಗೂ ಭೇಟಿ ನೀಡಲಿದ್ದಾರೆ. ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಬಿಹಾರದ ಶಾಸಕರು, ಎಂಎಲ್‌ಸಿಗಳು ಮತ್ತು ಮಾಜಿ ಶಾಸಕರಿಗೂ ಆಹ್ವಾನ ಪತ್ರಗಳನ್ನು ಕಳುಹಿಸಲಾಗಿದೆ. ಈ ಸಿದ್ಧತೆಗಳ ನಡುವೆ ಅಧಿಕಾರಿಗಳು ದೊಡ್ಡ ಪ್ರಮಾದ ಎಸಗಿದ್ದು, ಮೃತ ಶಾಸಕರೊಬ್ಬರಿಗೆ ಕಾರ್ಯಕ್ರಮಕ್ಕೆ ಆಗಮಿಸಲು ಆಹ್ವಾನ ಪತ್ರ ಕಳುಹಿಸಲಾಗಿದೆ.

ಪ್ರಧಾನಿ ಭೇಟಿಗೆ ಆಹ್ವಾನ ಕಳುಹಿಸುವಾಗ ಅಧಿಕಾರಿಗಳು ನಾಲ್ಕು ವರ್ಷಗಳ ಹಿಂದೆ ನಿಧನರಾದ ಉತ್ತರ ಬಿಹಾರದ ಮಾಜಿ ಶಾಸಕ ಅಬ್ದುಲ್ ಪಯಾಮಿ ಅವರಿಗೆ ಆಹ್ವಾನ ಕಳುಹಿಸಿದ್ದಾರೆ. ಮಾಜಿ ಶಾಸಕ ಅವರ ಹೆಸರಿನಲ್ಲಿ ಆಹ್ವಾನ ಪತ್ರಿಕೆ ಬಂದಿದ್ದು ಅವರ ಕುಟುಂಬಸ್ಥರು ಬೆಚ್ಚಿಬಿದ್ದಿದ್ದಾರೆ. ಈ ಬಗ್ಗೆ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಅಬ್ದುಲ್ ಪಯಾಮಿ ಅವರು 1980 ರ ದಶಕದಲ್ಲಿ ಮಧುಬನಿಯ ಲೌಕಾಹಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಅವರು ನಾಲ್ಕು ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಪಯಾಮಿ ಸಾಹೇಬ್ ಹೆಸರಲ್ಲಿ ಆಹ್ವಾನ ಪತ್ರಿಕೆ ಬಂದಾಗ ದಂಗುಬಡಿದಿದ್ದು, ವಿಧಾನಸಭೆಯ ಅಧಿಕಾರಿಗಳು ಅವರು ನಮ್ಮ ನಡುವೆ ಇಲ್ಲ ಎಂಬುದನ್ನು ಅರಿಯಬೇಕು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶೀತಲಾಂಬರ ಝಾ ಹೇಳಿದ್ದಾರೆ.

 ಘಟನೆಯ ನಂತರ, ವಿಧಾನಸಭೆ ಸಂಕೀರ್ಣದ ಶತಮಾನೋತ್ಸವ ವರ್ಷದ ಆಚರಣೆಗೆ ಮಾಜಿ ಶಾಸಕರು ಮತ್ತು ಎಂಎಲ್‌ಸಿಗಳನ್ನು ಸಹ ಆಹ್ವಾನಿಸಲಾಗಿದೆ ಎಂದು ವಿಧಾನಸಭೆ ಸಚಿವಾಲಯ ತಿಳಿಸಿದೆ. ಏಜೆನ್ಸಿ ಮೂಲಗಳ ಪ್ರಕಾರ, ಆಹ್ವಾನಿತರ ಪಟ್ಟಿಯಲ್ಲಿ ಮೃತ ವ್ಯಕ್ತಿಯನ್ನು ಸೇರಿಸಿರುವುದು ದೊಡ್ಡ ಮತ್ತು ಗಂಭೀರ ಲೋಪವಾಗಿದೆ ಎಂದು ವಿಧಾನಸಭೆ ಕಾರ್ಯದರ್ಶಿ ತಪ್ಪೊಪ್ಪಿಕೊಂಡಿದ್ದಾರೆ. ಅತಿಥಿ ಪಟ್ಟಿಯನ್ನು ವಿಶೇಷ ರಕ್ಷಣಾ ಗುಂಪು (ಎಸ್‌ಪಿಜಿ) ಸಹ ಅಂಗೀಕರಿಸಿದೆ ಎಂದು ಅವರು ಹೇಳಿದ್ದಾರೆ. ಮಂಗಳವಾರ ಸಂಜೆ 5:15ರ ಸುಮಾರಿಗೆ ಪ್ರಧಾನಿ ನರೇಂದ್ರ ಮೋದಿ ಪಾಟ್ನಾ ತಲುಪಲಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News