×
Ad

ಕೋಮು ವದಂತಿಗಳು ಅಸ್ಸಾಮಿನ ಸಿಲ್ಚಾರ್‌ನಲ್ಲಿಯ ಭೀಕರ ಪ್ರವಾಹದ ಕುರಿತ ಸತ್ಯಗಳನ್ನು ಮರೆಮಾಚಿದ್ದು ಹೇಗೆ?

Update: 2022-07-12 18:39 IST

ಕಳೆದ ತಿಂಗಳು ಅಸ್ಸಾಮಿನ ಕಾಚಾರ್ ಜಿಲ್ಲೆಯ ಸಿಲ್ಚಾರ್ ನಲ್ಲಿ ಉಂಟಾಗಿದ್ದ ಪ್ರವಾಹದ ಬಳಿಕ ಅಪಾಯಕಾರಿ ವದಂತಿಯೊಂದು ಹಬ್ಬಿತ್ತು. ಇದು ನೈಸರ್ಗಿಕ ಪ್ರವಾಹವಲ್ಲ,ಇದನ್ನು ಉದ್ದೇಶಪೂರ್ವಕವಾಗಿ ಸೃಷ್ಟಿಸಲಾಗಿದೆ ಎಂದು ಈ ವದಂತಿಗಳು ಹೇಳಿದ್ದವು. ಹಲವಾರು ಸಾಮಾಜಿಕ ಮಾಧ್ಯಮ ಖಾತೆಗಳು ಅದನ್ನು ‘ಫ್ಲಡ್ (ಪ್ರವಾಹ) ಜಿಹಾದ್ ’ಎಂದು ಬಣ್ಣಿಸುವ ಮೂಲಕ ಮುಸ್ಲಿಮ್ ಸಮುದಾಯದೊಂದಿಗೆ ತಳುಕು ಹಾಕಿದ್ದವು. 

ಪ್ರವಾಹವು ಪ್ರಕೃತಿ ವಿಕೋಪವಲ್ಲ ಎಂದು ಖುದ್ದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರೇ ಪದೇಪದೇ ಹೇಳಿದ್ದರು. ಸಿಲ್ಚಾರ್ ನ ಮೇಲ್ಭಾಗದಲ್ಲಿ ಮೂರು ಕಿ.ಮೀ.ಅಂತರದಲ್ಲಿಯ ಬೇಥುಕಂದಿಯಲ್ಲಿ ಬರಾಕ್ ನದಿಯ ಒಡ್ಡಿಗೆ ಹಾನಿಯನ್ನುಂಟು ಮಾಡಿದ್ದ ದುಷ್ಕರ್ಮಿಗಳ ಮೇಲೆ ಅವರು ಹೊಣೆಯನ್ನು ಹೊರಿಸಿದ್ದರು.

ಜೂ.23ರಂದು ಸಿಲ್ಚಾರ್ ಗೆ ಭೇಟಿ ನೀಡಿದ್ದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ್ದ ಶರ್ಮಾ,‘ತಾವು ಒಡ್ಡನ್ನು ಒಡೆದಿದ್ದಾಗಿ ಜನರು ಒಪ್ಪಿಕೊಂಡಿರುವ ವೀಡಿಯೊವನ್ನು ನಾವು ನೋಡಿದ್ದೇವೆ. ಒಡ್ಡಿಗೆ ಹಾನಿಯನ್ನುಂಟು ಮಾಡಿರುವವರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುವುದು’ಎಂದು ಹೇಳಿದ್ದರು. ಜೂ.26ರಂದು ಸಿಲ್ಚಾರ್ಗೆ ತನ್ನ ಎರಡನೇ ಭೇಟಿಯ ಸಂದರ್ಭದಲ್ಲಿ ಶರ್ಮಾ,ಸಿಲ್ಚಾರ್ ಪ್ರವಾಹವು ‘ಮಾನವ ನಿರ್ಮಿತ’ವಾಗಿದೆ ಮತ್ತು ಒಡ್ಡನ್ನು ಉದ್ದೇಶಪೂರ್ವಕವಾಗಿ ಒಡೆದಿರದಿದ್ದರೆ ಪಟ್ಟಣದಲ್ಲಿ ಇಷ್ಟೊಂದು ಅಭೂತಪೂರ್ವ ಪ್ರವಾಹ ಸ್ಥಿತಿಯುಂಟಾಗುತ್ತಿರಲಿಲ್ಲ ಎಂದು ಒತ್ತಿ ಹೇಳಿದ್ದರು.

ಬೇಥುಕಂದಿ ಮುಸ್ಲಿಮ್ ಬಾಹುಳ್ಯದ ಪ್ರದೇಶವಾಗಿದೆ. ಜುಲೈ ಮೊದಲ ವಾರದಲ್ಲಿ ವಿಧ್ವಂಸಕ ಕೃತ್ಯ ನಡೆಸಿದ್ದಕ್ಕಾಗಿ ನಾಲ್ವರು ಮುಸ್ಲಿಮ್ ನಿವಾಸಿಗಳನ್ನು ಬಂಧಿಸಲಾಗಿತ್ತು.
ಸಾಮಾಜಿಕ ಮಾಧ್ಯಮಗಳಲ್ಲಿ ’ಪ್ರವಾಹ ಜಿಹಾದ್’ ಪೋಸ್ಟ್ಗಳು ವೈರಲ್ ಆಗುತ್ತಿದ್ದಂತೆ ಜು.6ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಚಾರ್ ಎಸ್ಪಿ ರಮಣದೀಪ ಕೌರ್ ಅವರು,‘ಕೆಲವು ವಾಟ್ಸ್ಆ್ಯಪ್ ಗುಂಪುಗಳು,ಸಾಮಾಜಿಕ ಮಾಧ್ಯಮ ವೇದಿಕೆಗಳು,ಪ್ರಾದೇಶಿಕ ಮತ್ತು ಕೆಲವು ರಾಷ್ಟ್ರೀಯ ಸುದ್ದಿವಾಹಿನಿಗಳಲ್ಲಿ ಘಟನೆಗೆ ವಿವಿಧ ಬಣ್ಣಗಳು ಮತ್ತು ಹೆಸರುಗಳನ್ನು ನೀಡಲಾಗಿರುವುದನ್ನು ನಾವು ಗಮನಿಸಿದ್ದೇವೆ. ಈ ಘಟನೆಯ ಹಿಂದೆ ಯಾವುದೇ ಕೋಮು ಕೋನವಿಲ್ಲ. ಅದು ಸಂಪೂರ್ಣವಾಗಿ ಕೆಲವು ಬಾಧಿತ ವ್ಯಕ್ತಿಗಳು ಒಡ್ಡನ್ನು ಒಡೆದಿರುವ ವಿಷಯವಾಗಿದೆ. ಘಟನೆಯನ್ನು ಅನಗತ್ಯವಾಗಿ ಬಿಂಬಿಸಲಾಗಿದೆ ಮತ್ತು ನಾವು ಹಿಂದೆಂದೂ ಕೇಳಿರದಿದ್ದ ‘ಫ್ಲಡ್ ಜಿಹಾದ್’ನಂತಹ ಹೊಸ ಹೆಸರುಗಳನ್ನು ನೀಡಲಾಗಿದೆ. ಸಿಲ್ಚಾರ್ ಶಾಂತಿಯತ ಸ್ಥಳವಾಗಿದ್ದು, ಶತಮಾನಗಳಿಂದಲೂ ವಿವಿಧ ಸಮುದಾಯಗಳ ಜನರು ಇಲ್ಲಿ ವಾಸವಾಗಿದ್ದಾರೆ. ಒಂದು ಸಮುದಾಯವು ಇನ್ನೊಂದು ಸಮುದಾಯಕ್ಕೆ ಹಾನಿಯನ್ನುಂಟು ಮಾಡಲು ಉದ್ದೇಶಪೂರ್ವಕ ಪ್ರಯತ್ನ ನಡೆಸಿಲ್ಲ. ಪ್ರವಾಹ ದೇವರ ಕೃತ್ಯ’ಎಂದು ಹೇಳಿದ್ದರು.

ಹರಡುತ್ತಿದ್ದ ವದಂತಿಗಳು ಸಿಲ್ಚಾರ್ ಅನಾಹುತದ ಸಂಕೀರ್ಣ ಕಾರಣಗಳನ್ನು ಮರೆ ಮಾಡಿದ್ದವು. ಜೂ.18ರಂದು ಪಟ್ಟಣದೊಳಗೆ ನೀರು ನುಗ್ಗುವ ಕೆಲವೇ ಸಮಯ ಮೊದಲು ಸಿಲ್ಚಾರ್ನಲ್ಲಿ 251 ಮಿ.ಮೀ. ಮಳೆಯಾಗಿದ್ದು,ಇದು ಕಳೆದ 12 ವರ್ಷಗಳಲ್ಲಿ ದಾಖಲೆಯ ಮಳೆಯಾಗಿತ್ತು. ಪ್ರತಿಕೂಲ ಹವಾಮಾನ ಘಟನೆಗಳು ಮತ್ತು ಸರಕಾರದ ವರ್ಷಗಳ ನಿರ್ಲಕ್ಷ ಜನರು ಪ್ರವಾಹಗಳಿಂದ ಬದುಕುಳಿಯಲು ತಮ್ಮದೇ ಆದ ವಿಧಾನಗಳನ್ನು ಕಂಡುಕೊಳ್ಳುವುದನ್ನು ಅನಿವಾರ್ಯವಾಗಿಸಿವೆ.

ಬೇಥುಕಂದಿ ಒಡ್ಡು ರಸ್ತೆಯೂ ಆಗಿದೆ. ಅದು ಬರಾಕ್ ನದಿಯನ್ನು ಮಹಿಷಾ ಬೀಲ್ ಅಥವಾ ಆರ್ದ್ರಭೂಮಿಯಿಂದ ಪ್ರತ್ಯೇಕಿಸುತ್ತದೆ. ಈ ಮಹಿಷಾ ಬೀಲ್ ನೈಸರ್ಗಿಕ ಜಲಾಶಯವಾಗಿದ್ದು,ಉಕ್ಕಿ ಹರಿಯುವ ನದಿಯ ನೀರನ್ನು ಹೀರಿಕೊಳ್ಳುತ್ತದೆ ಮತ್ತು ಸಿಲ್ಚಾರ್ ನಗರವು ಮುಳುಗಡೆಯಾಗುವುದನ್ನು ತಡೆಯುತ್ತದೆ.

ಮೇ ತಿಂಗಳಿನಲ್ಲಿ ಅಸ್ಸಾಮಿನಲ್ಲಿ ಭಾರೀ ಮಳೆಯಾಗಿದ್ದಾಗ ಪ್ರವಾಹದ ಮೊದಲ ಅಲೆಗಳು ಬೇಥುಕಂಡಿಗೆ ಅಪ್ಪಳಿಸಿದ್ದವು. ಮೇ 22ರಂದು ರಾತ್ರಿ ಬೇಥುಕಂದಿ ನಿವಾಸಿಗಳು ತಮ್ಮ ಮನೆಗಳಲ್ಲಿ ಸಂಗ್ರಹವಾಗಿದ್ದ ನೀರನ್ನು ಬರಾಕ್ ನದಿಗೆ ಸಾಗಿಸಲು ನಾಲೆಯೊಂದನ್ನು ಮಾಡಲು ಒಡ್ಡಿನ ಮೇಲಿನ ರಸ್ತೆಯನ್ನು ತುಂಡರಿಸಿದ್ದರು.

ಬಳಿಕ ಜೂನ್ ಮೂರನೇ ವಾರದಲ್ಲಿ ಪ್ರದೇಶದಲ್ಲಿ ಇನ್ನೂ ಭಾರೀ ಮಳೆಯಾಗಿತ್ತು ಮತ್ತು ಬರಾಕ್ ನದಿಯ ನೀರು ಸಿಲ್ಚಾರ್ನೊಳಗೆ ನುಗ್ಗಿತ್ತು. ಈ ವೇಳೆಗೆ ವಿಧ್ವಂಸಕ ಕೃತ್ಯದ ವದಂತಿಗಳು ಹರಿದಾಡತೊಡಗಿದ್ದವು. ಮೇ ತಿಂಗಳಿನಲ್ಲಿ ಬೇಥುಕಂದಿ ಒಡ್ಡನ್ನು ಒಡೆದಿರದಿದ್ದರೆ ಪ್ರವಾಹದ ನೀರು ಸಿಲ್ಚಾರ್ಗೆ ನುಗ್ಗುತ್ತಿರಲಿಲ್ಲ ಎಂದು ಹೇಳಲಾಗಿತ್ತು.
ಆದರೆ ಅದು ವಿಧ್ವಂಸಕ ಕೃತ್ಯವಾಗಿರಲಿಲ್ಲ,ಮೇ ತಿಂಗಳಿನಲ್ಲಿ ಸುರಿದಿದ್ದ ಭಾರೀ ಮಳೆಯಿಂದ ಬದುಕುಳಿಯಲು ತಾವು ಒಡ್ಡನ್ನು ತುಂಡರಿಸಿದ್ದೇವೆ ಎಂದು ಬೇಥುಕಂದಿ ನಿವಾಸಿಗಳು ಹೇಳುತ್ತಾರೆ.

ಜುಲೈನಲ್ಲಿ ಮಹಿಷಾ ಬೀಲ್ ನ ತಗ್ಗುಪ್ರದೇಶಗಳ ಸುಮಾರು 3,000 ನಿವಾಸಿಗಳು ಇನ್ನೂ ರಸ್ತೆ ಬದಿಯಲ್ಲಿ ಆಶ್ರಯ ಪಡೆದುಕೊಂಡಿದ್ದರು. ಅವರ ಮನೆಗಳು ಮೇ ತಿಂಗಳಿನಲ್ಲಿ ಮುಳುಗಡೆಯಾಗಿದ್ದವು. ಸುತ್ತಲಿನ ಪ್ರದೇಶಗಳಲ್ಲಿಯ ನೀರು ಕಡಿಮೆಯಾಗಿದ್ದರೂ ಅವರ ಮನೆಗಳಲ್ಲಿ ಪ್ರವಾಹದ ನೀರು ಹಾಗೆಯೇ ಇತ್ತು.
 
ಇದು ಪ್ರತಿವರ್ಷವೂ ನಡೆಯುತ್ತದೆ. ಪ್ರತಿ ಮಳೆಗಾಲದಲ್ಲಿ ಮಹಿಷಾ ಬೀಲ್ನಲ್ಲಿ ವಾಸಿಸುವ ಸುಮಾರು 70 ಕುಟುಂಬಗಳು 2-3 ತಿಂಗಳುಗಳ ಕಾಲ ನಿರ್ವಸಿತರಾಗುತ್ತಾರೆ ಎಂದು ಸ್ಥಳೀಯ ನಿವಾಸಿ ಪರ್ನಾ ದಾಸ್ ಹೇಳಿದರು.
 
ಆರ್ದ್ರಭೂಮಿಯಲ್ಲಿ ಸಂಗ್ರಹವಾಗುವ ನೀರು ಸಿಲ್ಚಾರ್ನಲ್ಲಿಯ ಪ್ರಮುಖ ಕಾಲುವೆಯ ಮೂಲಕ ಹೊರಗೆ ಹೋಗುತ್ತದೆ. ಆದರೆ ಮಾನವ ಹಸ್ತಕ್ಷೇಪ ಮತ್ತು ಅತಿಕ್ರಮಣಗಳಿಂದಾಗಿ ಈ ಪ್ರಮುಖ ಕಾಲುವೆಯು ಕಟ್ಟಿಕೊಂಡಿರುವುದರಿಂದ ನೀರನ್ನು ಸಾಗಿಸುವ ಅದರ ಸಾಮರ್ಥ್ಯ ಕುಸಿದಿದೆ. ಹೀಗಾಗಿ ಮಳೆಯಾದಾಗಲೆಲ್ಲ ಸಂಗ್ರಹವಾಗಿರುವ ನೀರು ಪ್ರವಾಹವನ್ನುಂಟು ಮಾಡುತ್ತದೆ ಎಂದರು. 

ನೀರನ್ನು ಬರಾಕ್ ನದಿಗೆ ಬಿಡಲು ಸ್ಲುಯಿಸ್ ಗೇಟ್ನ ನಿರ್ಮಾಣ ಕಾರ್ಯ 2015ರಿಂದ ನಡೆಯುತ್ತಿದ್ದು,ಗುತ್ತಿಗೆದಾರರಿಗೆ ಹಣ ಪಾವತಿಯಾಗದ್ದರಿಂದ 2018ರಿಂದ ಕಾಮಗಾರಿ ಸ್ಥಗಿತಗೊಂಡಿದೆ. ಪ್ರವಾಹದ ನಂತರ ಜು.3ರಂದಷ್ಟೇ ಕಾಚಾರ್ ಜಿಲ್ಲಾಡಳಿತವು ಬೇಥುಕಂಡಿಯಲ್ಲಿ ಸ್ಲುಯಿಸ್ ಗೇಟ್ ಅಳವಡಿಸಲಾಗಿದೆ ಎಂದು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿತ್ತು.
 
ಮೇ ಪ್ರವಾಹದ ಬಳಿಕ ಬರಾಕ್ ನದಿಯ ನೀರಿನ ಮಟ್ಟ ಕಡಿಮೆಯಾಗಿದ್ದರೂ ಆರ್ದ್ರಭೂಮಿಗಳು ನೆರೆ ನೀರಿನಿಂದ ತುಂಬಿಕೊಂಡಿದ್ದವು ಮತ್ತು ಬೇಥುಕಂದಿ ನಿವಾಸಿಗಳು ಒಡ್ಡನ್ನು ಒಡೆಯಲು ನಿರ್ಧರಿಸಿದ್ದರು. ನಮಗೆ ಅದನ್ನು ಬಿಟ್ಟು ಬೇರೆ ಆಯ್ಕೆಯೇ ಇರಲಿಲ್ಲ ಎಂದು ದಾಸ್ ಹೇಳಿದರು. ವಾರಗಳ ಬಳಿಕ ಇದು ಸಿಲ್ಚಾರ್ನಲ್ಲಿ ಪ್ರವಾಹಕ್ಕೆ ಕಾರಣವಾಗುತ್ತದೆ ಎನ್ನುವುದನ್ನು ಬೇಥುಕಂದಿ ನಿವಾಸಿಗಳು ಊಹಿಸಿರಲಿಲ್ಲ ಎಂದರು.

ಸ್ಥಳೀಯ ನಿವಾಸಿಗಳು ಒಡ್ಡನ್ನು ಒಡೆಯುತ್ತಾರೆ ಎನ್ನುವುದು ಜಲಸಂಪನ್ಮೂಲ ಇಲಾಖೆಗೆ ತಿಳಿದಿತ್ತು,ಆದರೆ ಅವರನ್ನು ತಡೆಯಲು ಯತ್ನಿಸಿರಲಿಲ್ಲ. ಜನರು ಸಂಕಷ್ಟದಲ್ಲಿ ಸಿಲುಕಿದ್ದಾಗ ನಾವು ಅವರ ಭಾವನೆಗಳ ವಿರುದ್ಧ ಹೋಗುವಂತಿಲ್ಲ ಎಂದು ಇಲಾಖೆಯ ಅಧಿಕಾರಿಯೋರ್ವರು ಹೇಳಿದರು. ಅಸ್ಸಾಮಿನಲ್ಲಿ ನದಿಗಳು ಉಕ್ಕಿ ಹರಿದಾಗ ಒಡ್ಡುಗಳನ್ನು ಒಡೆಯುವುದು ಸಾಮಾನ್ಯವಾಗಿದೆ ಮತ್ತು ಪೂರ್ವ ದಕ್ಷಿಣ ಏಷ್ಯಾದಲ್ಲಿ ಈ ಪದ್ಧತಿ ಸುದೀರ್ಘ ಇತಿಹಾಸವನ್ನು ಹೊಂದಿದೆ ಎಂದು ಮಾನವಶಾಸ್ತ್ರಜ್ಞ ತನ್ಮಯ ಶರ್ಮಾ ಹೇಳಿದರು.
   
ಪ್ರವಾಹ ಪೀಡಿತ ಜನರು ಚುನಾಯಿತ ಪ್ರತಿನಿಧಿಗಳಿಗೆ ದೂರಿಕೊಂಡಾಗ ಪ್ರವಾಹಕ್ಕೆ ಕೋಮು ಬಣ್ಣ ದೊರಕಿತ್ತು ಎಂದು ಹೇಳಿದ ಸಿಲ್ಚಾರ್ ನಿವಾಸಿ ನೀಲಾಂಜನಾ ಭಟ್ಟಾಚಾರ್ಯ,ಮುಖ್ಯಮಂತ್ರಿಗಳ ಭೇಟಿಯ ಬಳಿಕ ಈ ವದಂತಿಗಳು ಇನ್ನಷ್ಟು ಬಲ ಪಡೆದುಕೊಂಡಿದ್ದವು. ಒಡ್ಡು ಒಡೆದ ಆರೋಪದಲ್ಲಿ ನಡೆಸಲಾಗಿರುವ ಬಂಧನಗಳು ತನ್ನ ಹೊಣೆಗಾರಿಕೆಯನ್ನು ಕೊಡವಿಕೊಳ್ಳಲು ಸರಕಾರದ ಪ್ರಯತ್ನವಾಗಿತ್ತು. ತಮ್ಮ ಅದಕ್ಷತೆಯನ್ನು ಮುಚ್ಚಿಕೊಳ್ಳಲು ಅವರು ಬಡ ಮುಸ್ಲಿಮರನ್ನು ಬಂಧಿಸಿದ್ದಾರೆ ಎಂದರು.

Writer - ರಾಕಿಬುಝ್ಝಮಾನ್ (Scroll.in)

contributor

Editor - ರಾಕಿಬುಝ್ಝಮಾನ್ (Scroll.in)

contributor

Similar News