ಪಿಎಂ ಕೇರ್ಸ್ ನಿಧಿ ‘ಸರಕಾರಿ’ ಎಂದು ಘೋಷಣೆಗೆ ಕೋರಿದ ಅರ್ಜಿಗೆ ಉತ್ತರ ಸಲ್ಲಿಸಲು ಕೇಂದ್ರಕ್ಕೆ ಹೈಕೋರ್ಟ್ ತಾಕೀತು

Update: 2022-07-12 16:43 GMT

ಹೊಸದಿಲ್ಲಿ,ಜು.12: ಪಿಎಂ ಕೇರ್ಸ್ ನಿಧಿಯಂತಹ ಮಹತ್ವದ ವಿಷಯದ ಕುರಿತು ಕೇಂದ್ರವು ಒಂದು ಪುಟದ ಉತ್ತರವನ್ನು ಸಲ್ಲಿಸಿದ್ದನ್ನು ದಿಲ್ಲಿ ಉಚ್ಚ ನ್ಯಾಯಾಲಯವು ಮಂಗಳವಾರ ಆಕ್ಷೇಪಿಸಿತು. ಪಿಎಂ ಕೇರ್ಸ್ ನ ನಿರ್ವಹಣೆಯಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಲು ಸಂವಿಧಾನದಡಿ ಅದನ್ನು ‘ಸರಕಾರಿ’ಎಂದು ಘೋಷಿಸಲು ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರವು ತನ್ನ ಉತ್ತರವನ್ನು ಸಲ್ಲಿಸಿತ್ತು.

ಪಿಎಂ ಕೇರ್ಸ್ ನಿಧಿಗೆ ಸಂಬಂಧಿಸಿದ ವಿಷಯವು ಅಷ್ಟೊಂದು ಸರಳವಲ್ಲ ಎಂದು ಅಭಿಪ್ರಾಯಿಸಿದ ಮುಖ್ಯ ನ್ಯಾಯಮೂರ್ತಿ ಸತೀಶಚಂದ್ರ ಮತ್ತು ನ್ಯಾ.ಸುಬ್ರಮಣಿಯಂ ಪ್ರಸಾದ ಅವರ ಪೀಠವು,ಈ ವಿಷಯದಲ್ಲಿ ವಿವರವಾದ ಮತ್ತು ಸಮಗ್ರವಾದ ಉತ್ತರವನ್ನು ಸಲ್ಲಿಸುವಂತೆ ಕೇಂದ್ರಕ್ಕೆ ನಿರ್ದೇಶ ನೀಡಿತು.

ಇದೇ ಅರ್ಜಿದಾರರು ಸಲ್ಲಿಸಿದ್ದ ಇಂತಹುದೇ ಅರ್ಜಿಗೆ ವಿವರವಾದ ಉತ್ತರವನ್ನು ಈಗಾಗಲೇ ಸಲ್ಲಿಸಲಾಗಿದೆ ಎಂದು ತಿಳಿಸಿದ ಕೇಂದ್ರದ ಪರವಾಗಿ ಉಪಸ್ಥಿತರಿದ್ದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು ಉಚ್ಚ ನ್ಯಾಯಾಲಯಕ್ಕೆ ತಿಳಿಸಿದರು.
  
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಗಳು,‘ಈ ವಿಷಯವು ಖಂಡಿತವಾಗಿಯೂ ಸರ್ವೋಚ್ಚ ನ್ಯಾಯಾಲಯದ ಮುಂದೆ ಹೋಗುತ್ತದೆ. ನಾವು ಈ ಬಗ್ಗೆ ನಿರ್ಧರಿಸಬೇಕಿದೆ ಮತ್ತು ತೀರ್ಪು ನೀಡಬೇಕಿದೆ ಹಾಗೂ ಎತ್ತಲಾಗಿರುವ ಎಲ್ಲ ವಿಷಯಗಳನ್ನು ವ್ಯವಹರಿಸಬೇಕಿದೆ. ಹೀಗಾಗಿ ಸೂಕ್ತ ಸಮಗ್ರ ಉತ್ತರವನ್ನು ನಾಲ್ಕು ವಾರಗಳಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಸೇರ್ಪಡೆಯೇನಾದರೂ ಇದ್ದರೆ ನಂತರದ ಎರಡು ವಾರಗಳಲ್ಲಿ ಸಲ್ಲಿಸಬೇಕು ಎಂದು ತಿಳಿಸಿದರು.

ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ಸೆ.16ಕ್ಕೆ ನಿಗದಿಗೊಳಿಸಿತು.

ಅರ್ಜಿದಾರ ಸಮ್ಯಕ್ ಗಂಗ್ವಾಲ್ ಅವರು 2021ರಲ್ಲಿ ಸಲ್ಲಿಸಿದ ಅರ್ಜಿಯಲ್ಲಿ ಸಂವಿಧಾನದ 12ನೇ ವಿಧಿಯಡಿ ಪಿಎಂ ಕೇರ್ಸ್ ನಿಧಿಯನ್ನು ‘ಸರಕಾರಿ’ ಎಂದು ಘೋಷಿಸುವಂತೆ ಹಾಗೂ ಅದರ ಆಡಿಟ್ ವರದಿಗಳನ್ನು ನಿಯತಕಾಲಿಕವಾಗಿ ಪಿಎಂ ಕೇರ್ಸ್ ನ ವೆಬ್ಸೈಟ್ ನಲ್ಲಿ ಪ್ರಕಟಿಸಲು ನಿರ್ದೇಶ ನೀಡುವಂತೆ ಕೋರಿದ್ದಾರೆ. ಪಿಎಂ ಕೇರ್ಸ್ ನಿಧಿಯನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಸಾರ್ವಜನಿಕ ಪ್ರಾಧಿಕಾರವಾಗಿ ಘೋಷಿಸುವಂತೆ ಕೋರಿ ಗಂಗ್ವಾಲ್ 2020ರಲ್ಲಿ ಸಲ್ಲಿಸಿದ್ದ ಇನ್ನೊಂದು ಅರ್ಜಿಯೂ ನ್ಯಾಯಾಲಯದಲ್ಲಿ ಬಾಕಿಯಿದೆ.

ತನ್ನ ಹಾಲಿ ಅರ್ಜಿಯಲ್ಲಿ ಗಂಗ್ವಾಲ್ ಪ್ರತಿ ತ್ರೈಮಾಸಿಕದಲ್ಲಿ ಜಮೆಯಾಗುವ ಹಣವನ್ನು ಪಿಎಂ ಕೇರ್ಸ್ನ ವೆಬ್ಸೈಟ್ನಲ್ಲಿ ಬಹಿರಂಗಗೊಳಿಸುವಂತೆ ಮತ್ತು ಅದು ಸ್ವೀಕರಿಸಿರುವ ದೇಣಿಗೆಗಳ ವಿವರಗಳು ಪ್ರತಿ ದಾನಿಯ ಹೆಸರನ್ನು ಒಳಗೊಂಡಿರಬೇಕು ಎಂದು ನಿರ್ದೇಶಿಸುವಂತೆಯೂ ಕೋರಿದ್ದಾರೆ.

2021ರ ಅರ್ಜಿಗೆ ಉತ್ತರವಾಗಿ ಅಫಿಡವಿಟ್ ಸಲ್ಲಿಸಿದ್ದ ಪಿಎಂ ಕೇರ್ಸ್ ಟ್ರಸ್ಟ್ ನ ಗೌರವ ಪದಾಧಿಕಾರಿಯೂ ಆಗಿರುವ ಪ್ರಧಾನಿ ಕಚೇರಿಯ ಅಧೀನ ಕಾರ್ಯದರ್ಶಿಗಳು,ಟ್ರಸ್ಟ್ ಪಾರದರ್ಶಕತೆಯಿಂದ ಕಾರ್ಯ ನಿರ್ವಹಿಸುತ್ತಿದೆ ಮತ್ತು ಅದರ ಹಣಕಾಸುಗಳನ್ನು ಸಿಎಜಿ ಸಿದ್ಧ ಪಡಿಸಿರುವ ಪಟ್ಟಿಯಲ್ಲಿಯ ಚಾರ್ಟರ್ಡ್ ಅಕೌಂಟಂಟ್ ಪರಿಶೀಲಿಸುತ್ತಾರೆ ಎಂದು ಹೇಳಿದ್ದರು.
  
ಸಂವಿಧಾನ ಮತ್ತು ಆರ್ಟಿಐ ಕಾಯ್ದೆಯಡಿ ಪಿಎಂ ಕೇರ್ಸ್ ಫಂಡ್ ನ ಸ್ಥಾನಮಾನ ಏನೇ ಇದ್ದರೂ ಥರ್ಡ್ ಪಾರ್ಟಿ ಮಾಹಿತಿಯನ್ನು ಬಹಿರಂಗಗೊಳಿಸಲು ಅನುಮತಿಯಿಲ್ಲ ಎಂದೂ ಅಫಿಡವಿಟ್ನಲ್ಲಿ ವಾದಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News