ನಾರಾಯಣ ಗುರು ಪಠ್ಯ ಮರು ಸೇರ್ಪಡೆ ಸಮಾಜದ ಹೋರಾಟಕ್ಕೆ ಸಂದ ಜಯ: ಬಿಲ್ಲವ ನಾಯಕರ ಸ್ಪಷ್ಟನೆ

Update: 2022-07-13 06:57 GMT

ಮಂಗಳೂರು : ಪಠ್ಯ ಪುಸ್ತಕ ಪರಿಷ್ಕರಣೆ ಸಂದರ್ಭ ರಾಜ್ಯದ 10ನೆ ತರಗತಿಯ ಸಮಾಜ ವಿಜ್ಞಾನ ಪಠ್ಯದಿಂದ ಕೈಬಿಡಲಾಗಿದ್ದ ನಾರಾಯಣ ಗುರು ವಿಷಯವನ್ನು ಮರು ಸೇರ್ಪಡೆಗೊಳಿಸಲು ಆದೇಶಿಸಿರುವುದು ೨೬ ಸಂಘಟನೆಗಳನ್ನು ಒಳಗೊಂಡ ಬಿಲ್ಲವ ಸಮಾಜದ ಹೋರಾಟಕ್ಕೆ ಸಂದ ಜಯವಾಗಿದೆ. ಆದರೆ ಇದರ ಲಾಭವನ್ನು ಪಡೆಯುವ ಯತ್ನ ಸ್ಥಳೀಯ ಜನಪ್ರತಿನಿಧಿಗಳು ಮಾಡುತ್ತಿದ್ದಾರೆ. ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಬಿಲ್ಲವ ನಾಯಕರು ಸ್ಪಷ್ಟ ಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ನಾರಾಯಣಗುರು ವಿಚಾರ ವೇದಿಕೆಯ ರಾಜ್ಯಾದ್ಯಕ್ಷ ಸತ್ಯಜಿತ್ ಸುರತ್ಕಲ್, ಜನಶಕ್ತಿ ಬಲವಾದಾಗ ಆರ್ಥಿಕ, ರಾಜಕೀಯ ಶಕ್ತಿಯನ್ನು ಮೀರಬಲ್ಲದು ಎಂಬುದು ಬಿಲ್ಲವ ಸಮಾಜದ ಹೋರಾಟದಿಂದ ಸಾಬೀತಾಗಿದೆ ಎಂದರು.

ಪ್ರಪಂಚಕ್ಕೆ ಜಾತ್ಯತೀತ ನಿಲುವನ್ನು ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳನ್ನು ಜನಪ್ರತಿನಿಧಿಗಳು ಕಡೆಗಣಿಸಿದಾಗ ಮಳೆ, ಚಳಿ ಎನ್ನದೆ ಸಮಾಜದ ಜನರು ನಿರಂತರ ಹೋರಾಟದ ಮೂಲಕ ಆಡಳಿತವನ್ನು ಮಣಿಸಿದ್ದಾರೆ. ಪಠ್ಯದಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಷಯವನ್ನು ತೆಗೆದು ಗುರುಗಳಿಗೆ, ಅವರ ಸಮಾಜಕ್ಕೆ ಹಾಗೂ ಅವರ ಆದರ್ಶಗಳಿಗೆ ಅವಮಾನ ಮಾಡಲಾಗಿತ್ತು. ಇದೀಗ ಹೋರಾಟದ ಫಲವಾಗಿ ಸೇರ್ಪಡೆಗೆ ಸರಕಾರ ಮುಂದಾಗಿರುವುದು ಎಲ್ಲರಿಗೂ ಸಂತಸ ನೀಡಿದೆ. ಹಾಗಾಗಿ ಪಠ್ಯ ಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿ ನಿಗದಿಯಾಗಿದ್ದ ಮುಂದಿನ ಪ್ರತಿಭಟನೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು ಎಂದು ಸತ್ಯಜಿತ್ ಸುರತ್ಕಲ್ ಹೇಳಿದರು.

ಕಳೆದ ಹಲವು ವರ್ಷಗಳಿಂದ ನಾರಾಯಣಗುರು ಅಭಿವೃದ್ಧಿ ನಿಗಮ ಮಂಡಳಿ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ ಚನ್ನಯ ನಾಮಕರಣ ಸೇರಿದಂತೆ ಸಮಾಜದ ಇತರ ಬೇಡಿಕೆಗಳಿಗಾಗಿನ ಹೋರಾಟ ಮುಂದುವರಿಯಲಿದೆ ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಕುದ್ರೋಳಿ ಗೋಕರ್ಣನಾಥ ಕ್ಷೇತ್ರಾಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಗೆಜ್ಜೆಗಿರಿ ವಕ್ತಾರ ರಾಜೇಂದ್ರ ಚಿಲಿಂಬಿ ಉಪಸ್ಥಿತರಿದ್ದರು.

"ಕೆಲವು ಪಕ್ಷದವರು ಈಗಾಗಲೇ ನಾರಾಯಣ ಗುರುಗಳ ವಿಚಾರವನ್ನು ಮತ್ತೆ ಸಮಾಜ ವಿಜ್ಞಾನ ಪಠ್ಯದಲ್ಲಿ ಅಳವಡಿಸಲಾಗುತ್ತಿರುವ ಕುರಿತಂತೆ ರಾಜಕೀಯ ಮಾಡಲು ಹೊರಟಿದ್ದಾರೆ. ಈ ಹಿಂದೆ ಪರಿಷ್ಕರಣೆಯ ಸಂದರ್ಭ ವಿಷಯ ಕೈಬಿಟ್ಟ ಕುರಿತು ಧ್ವನಿ ಎತ್ತಿದಾಗ ನಾವು ರಾಜಕೀಯ ಮಾಡುತ್ತಿರುವುದಾಗಿ, ಜನರ ಹಾದಿ ತಪ್ಪಿಸುವುದಾಗಿ ಹೇಳಿಕೆ ನೀಡಿದ್ದರು. ಪಠ್ಯ ಕೈ ಬಿಟ್ಟೇ ಇಲ್ಲ ಎಂದು ಸುಳ್ಳು ಹೇಳಿದ್ದರು. ಅಂದು ಹೋರಾಟ ಮಾಡುವಾಗಲೂ ಕನಿಷ್ಠ ಬೆಂಬಲವನ್ನೂ ಸೂಚಿಸಲಿಲ್ಲ. ಇದೀಗ ಅವರೇ ವಿಷಯ ಸೇರ್ಪಡೆಗೊಳಿಸಿರುವುದಾಗಿ ಹೇಳಿಕೆ ನೀಡಿ ಆಗಿರುವ ತಪ್ಪನ್ನು ಒಪ್ಪಿಕೊಂಡಿದ್ದಾರೆ. ದೇಶ ವಿಶ್ವಗುರು ಆಗುವಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳಂತಹ ಮಹನೀಯರ ವಿಚಾರಧಾರೆಗಳು ಅತೀ ಅಗತ್ಯ. ಅಂತಹ ವಿಚಾರಧಾರೆಯನ್ನು ಪಠ್ಯದಿಂದ ಕೈಬಿಟ್ಟಿದ್ದೇ ಘೋರ ಅಪರಾಧ. ಇನ್ನಾದರೂ ಅವರಿಗೆ ನಾರಾಯಣಗುರುಗಳು ಒಳ್ಳೆಯ ಬುದ್ದಿ ಕೊಡಲಿ".
ಪದ್ಮರಾಜ್ ಆರ್., ಕೋಶಾಧಿಕಾರಿ, ಗೋಕರ್ಣನಾಥ ಕ್ಷೇತ್ರ, ಕುದ್ರೋಳಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News