ಫ್ರಾನ್ಸ್ ನಲ್ಲಿ ಕಾಡ್ಗಿಚ್ಚು: 6,000 ಮಂದಿಯ ಸ್ಥಳಾಂತರ

Update: 2022-07-13 15:26 GMT

ಪ್ಯಾರಿಸ್, ಜು.13: ನೈಋತ್ಯ ಫ್ರಾನ್ಸ್ ನ ಅಟ್ಲಾಂಟಿಕ್ ಕರಾವಳಿ ಭಾಗದಲ್ಲಿ ತೀವ್ರಗತಿಯಲ್ಲಿ ಹರಡುತ್ತಿರುವ ಕಾಡ್ಗಿಚ್ಚಿನಿಂದ ಸುಮಾರು 3,000 ಎಕರೆ ಕಾಡು ಬೆಂಕಿಗೆ ಆಹುತಿಯಾಗಿದ್ದು ಸಾವಿರಾರು ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.

  
ಬಾರ್ಡಿಯಕ್ಸ್ ನಗರದ ದಕ್ಷಿಣದಲ್ಲಿರುವ ಟೆಸ್ಟೆಡೆ ಬುಚ್ ಪ್ರದೇಶದಲ್ಲಿನ 5 ರೆಸಾರ್ಟ್ಗಳಲ್ಲಿದ್ದ ಜನರನ್ನು ಮುನ್ನೆಚ್ಚರಿಕಾ ಕ್ರಮವಾಗಿ ತೆರವುಗೊಳಿಸಲಾಗಿದ್ದು ಸುಮಾರು 6000 ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ನಿರಂತರ ಬರ ಮತ್ತು ಹೆಚ್ಚಿನ ತಾಪಮಾನ ಕಾಡ್ಗಿಚ್ಚಿಗೆ ಮೂಲ ಕಾರಣವಾಗಿದೆ.
 
ಬುಧವಾರ ಈ ಪ್ರದೇಶದಲ್ಲಿ ತಾಪಮಾನ 37 ಡಿಗ್ರಿ ಸೆಲ್ಶಿಯಸ್ ಗೆ ತಲುಪಿತ್ತು. ಲಾಂಡಿರಾಸ್ ನಗರದ ಬಳಿಯೂ ಕಾಡ್ಗಿಚ್ಚು ಹಬ್ಬಿದ್ದು 5 ಕೊಪ್ಪಲು ಹಾಗೂ ಒಂದು ಗ್ರಾಮದ ಸುಮಾರು 500 ಜನರನ್ನು ಸ್ಥಳಾಂತರಿಸಲಾಗಿದೆ. ಅಗ್ನಿಶಾಮಕ ದಳದ 600ಕ್ಕೂ ಅಧಿಕ ಸಿಬಂದಿ ಕಾಡ್ಗಿಚ್ಚು ನಂದಿಸುವ ಕಾರ್ಯದಲ್ಲಿ ತೊಡಗಿದ್ದು ಇವರಿಗೆ ನೆರವಾಗಲು ದೇಶದ ಇತರೆಡೆಯಿಂದ ತುರ್ತು ಕಾರ್ಯಪಡೆ ಆಗಮಿಸಲಿದೆ. 4 ವಿಮಾನಗಳು ಹಾಗೂ ಇನ್ನಷ್ಟು ಅಗ್ನಿಶಾಮಕ ಸಿಬಂದಿಯ ನೆರವು ದೊರಕುವ ನಿರೀಕ್ಷೆಯಿದೆ ಎಂದು ಸ್ಥಳಿಯ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News