ಬೈಂದೂರು ಕಾರು ಸಹಿತ ವ್ಯಕ್ತಿಯನ್ನು ಸುಟ್ಟು ಕೊಲೆಗೈದ ಪ್ರಕರಣಕ್ಕೆ ಹೊಸ ತಿರುವು: ನಾಲ್ವರು ಆರೋಪಿಗಳ ಬಂಧನ

Update: 2022-07-14 17:38 GMT
ಬಂಧಿತ ಆರೋಪಿಗಳು

ಬೈಂದೂರು, ಜು.14: ಒತ್ತಿನೆಣೆ ಸಮೀಪದ ಹೇನಬೇರು ರಸ್ತೆಯಲ್ಲಿ ಕಾರು ಸಹಿತ ವ್ಯಕ್ತಿಯನ್ನು ಸುಟ್ಟು ಕೊಲೆಗೈದ ಪ್ರಕರಣ ರೋಚಕ ತಿರುವು ಪಡೆದುಕೊಂಡಿದ್ದು, ಹಳೆ ಪ್ರಕರಣದಲ್ಲಿ ಶಿಕ್ಷೆಯಾಗುವ ಭಯದಿಂದ ತಾನೇ ಸತ್ತಂತೆ ಬಿಂಬಿಸಿಕೊಳ್ಳಲು ವ್ಯಕ್ತಿಯೊಬ್ಬರನ್ನು ಕಾರು ಸಹಿತ ಸುಟ್ಟು ಹತ್ಯೆ ಮಾಡಿರುವುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.

ಕಾರ್ಕಳ ಮೂಲದ ಆನಂದ ದೇವಾಡಿಗ(62) ಕೊಲೆಯಾದ ವ್ಯಕ್ತಿ. ಕೊಲೆ ಆರೋಪಿಗಳಾದ ಕಾರ್ಕಳ ಮಾಳ ಪೇರಡ್ಕ ನಿವಾಸಿ ಸದಾನಂದ ಶೇರಿಗಾರ್ (52), ಹಿರ್ಗಾನ ಶಿವನಗರದ ಶಿಲ್ಪಾ ಸಾಲ್ಯಾನ್(30) ಮತ್ತು ಆರೋಪಿಗಳಿಗೆ ಸಹಕರಿಸಿದ ಆರೋಪದಡಿ ಕಾರ್ಕಳ ಪಚ್ಚಲಾಡಿ ಸೂಡ ನಿವಾಸಿಗಳಾದ ಸತೀಶ್ ಆರ್. ದೇವಾಡಿಗ(49), ನಿತಿನ್ ದೇವಾಡಿಗ(40) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಹಿಂದೆ ಖಾಸಗಿ ಸರ್ವೇಯರ್ ಆಗಿ ಕೆಲಸ ಮಾಡಿಕೊಂಡಿದ್ದ ಸದಾನಂದ ಶೇರಿಗಾರ್, ಇದೀಗ ಕಲ್ಲುಕೋರೆ ನಡೆಸುತ್ತಿದ್ದಾನೆ. ಈತನಿಗೆ ಇಬ್ಬರು ಪುತ್ರಿಯರಿದ್ದಾರೆ. ಶಿಲ್ಪಾ ಕೂಡ ವಿವಾಹಿತಳಾಗಿದ್ದಾಳೆ. ಸತೀಶ್ ಟೈಲರಿಂಗ್ ವೃತ್ತಿ ನಡೆಸುತ್ತಿದ್ದರೆ, ನಿತೀಶ್ ಫೋಟೋಗ್ರಾಫರ್ ಆಗಿದ್ದಾರೆ. ಸದಾನಂದ ಹಾಗೂ ಶಿಲ್ಪಾಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

       ( ಕೊಲೆಯಾದ ಆನಂದ ದೇವಾಡಿಗ)

ಪ್ರಕರಣದ ಹಿನ್ನೆಲೆ: ಬೈಂದೂರು- ಶಿರೂರು ರಾಷ್ಟ್ರೀಯ ಹೆದ್ದಾರಿ-66 ರಿಂದ ಹೇನಬೇರು ಸಂಪರ್ಕ ರಸ್ತೆಯ 250 ಮೀ ದೂರದಲ್ಲಿ ಜು.13 ಬೆಳಿಗ್ಗೆ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಾರು ಪತ್ತೆಯಾಗಿದ್ದು ಕಾರಿನ ಹಿಂಭಾಗದ ಸೀಟಿನಲ್ಲಿ ವ್ಯಕ್ತಿಯ ಶವ ಸಂಪೂರ್ಣ ಸುಟ್ಟು ಹೋದ ಸ್ಥಿತಿಯಲ್ಲಿದ್ದು ತಲೆ ಬುರುಡೆ ಮಾತ್ರ ಕಾಣಿಸುವಂತಿತ್ತು.

ಕಾರಿನ ನಂಬರ್ ಪ್ಲೇಟ್, ಇಂಜಿನ್ ಹಾಗೂ ಚಾಸ್ಸಿಸ್ ನಂಬರ್ ಸುಟ್ಟು ಹೋಗಿದ್ದ ಕಾರಣ ಕೇವಲ ಇದೊಂದು ಪೋರ್ಡ್ ಕಂಪೆನಿ ಐಕಾನ್ ಕಾರು ಎಂಬುದಷ್ಟೇ ಗುರುತಿಸಲು ಸಾಧ್ಯವಾಗಿತ್ತು. ತನಿಖೆ ನಡೆಸಿದ ಪೊಲೀಸರು, ಚಾಲಕನ ಸೀಟ್ ಅಡಿ ಭಾಗದಲ್ಲಿದ್ದ ಚಾಸ್ಸಿಸ್ ನಂಬರ್ ಮೂಲಕ ಕಾರಿನ ಮಾಲಕ ಸದಾನಂದ ಶೇರಿಗಾರ್ ಹೆಸರು, ವಿಳಾಸ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು.

ಸಾಸ್ತಾನ ಟೋಲ್ ಗೇಟಿನ ಸಿಸಿಟಿವಿಯಲ್ಲಿ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಫೋರ್ಡ್ ಐಕಾನ್ ಕಾರು ರಾತ್ರಿ 10.30ಕ್ಕೆ ಆಗಮಿಸಿರುವ ದೃಶ್ಯ ಕಂಡುಬಂದಿತ್ತು. ಅಲ್ಲದೆ ಟೋಲ್ ನಲ್ಲಿ ಮಹಿಳೆಯೊಬ್ಬಳು ಕಾರಿನಿಂದ ಇಳಿದು ಟೋಲ್ ನೀಡಿರುವ ದೃಶ್ಯ ಕೂಡ ಅದರಲ್ಲಿ ಸೆರೆಯಾಗಿತ್ತು. ಇದರಿಂದ ಕಾರಿನಲ್ಲಿ ಮಹಿಳೆ ಇರುವುದು ಪೊಲೀಸರಿಗೆ ಖಾತರಿಯಾಗಿತ್ತು.
ಬಳಿಕ ಮಾಹಿತಿ ಕಲೆ ಹಾಕಿದ ಪೊಲೀಸರಿಗೆ ಕಾರಿನಲ್ಲಿದದ್ದು ಶಿಲ್ಪಾ ಎಂಬುದಾಗಿ ತಿಳಿದುಬಂತು. ಈ ಹಿನ್ನೆಲೆಯಲ್ಲಿ ಪೊಲೀಸರು, ಸದಾನಂದ ಶೇರಿಗಾರ್, ತನ್ನ ಜೊತೆ ಸಂಬಂಧ ಹೊಂದಿದ್ದ ಶಿಲ್ಪಾರನ್ನೇ ಕೊಲೆ ಮಾಡಿ ಪರಾರಿಯಾಗಿರಬಹುದೆಂದು ಭಾವಿಸಿದ್ದರು. ಆದರೆ ತನಿಖೆ ತೀವ್ರಗೊಳಿಸಿದಾಗ ಪ್ರಕರಣ ಹೊಸ ತಿರುವುಗಳನ್ನು ಪಡೆದುಕೊಂಡವು.

ಕ್ಷಿಪ್ರ ಕಾರ್ಯಾಚರಣೆ: ಎರಡು ತಂಡಗಳೊಂದಿಗೆ ಆರೋಪಿಗಳ ಪತ್ತೆಗೆ ಬಲೆಬೀಸಿದ ಪೊಲೀಸರು, ಕಾರ್ಕಳಕ್ಕೆ ಆಗಮಿಸಿ ಸದಾನಂದನ ಸಂಬಂಧಿಗಳ ಬಳಿ ವಿಚಾರಿಸಿದರು. ಆಗ ಆತ ಬುಧವಾರ ಬೆಳಿಗ್ಗೆ ತನ್ನ ಸಹೋದರನಿಗೆ ಕರೆ ಮಾಡಿ ತಾನು ಕಾಣೆಯಾದ ಬಗ್ಗೆ ಸ್ಥಳೀಯ ಠಾಣೆಯಲ್ಲಿ ದೂರು ನೀಡುವಂತೆ ಹೇಳಿದ್ದ ಎನ್ನಲಾಗಿದೆ.

ತಕ್ಷಣವೇ ಕಾರ್ಯಪ್ರವೃತರಾದ ಪೊಲೀಸರು ಗುರುವಾರ ಬೆಳಿಗ್ಗೆ ಮೂಡುಬಿದಿರೆ ಪುಲ್ಕೇರಿ ಕ್ರಾಸ್ ಬಳಿ ಕೊಲೆ ಆರೋಪಿಗಳಾದ ಸದಾನಂದ ಹಾಗೂ ಶಿಲ್ಪಾಳನ್ನು ಬಂಧಿಸಿದರು. ಬಳಿಕ ಇವರಿಗೆ ಸಹಕರಿಸಿದ ಇನ್ನಿಬ್ಬರು ಆರೋಪಿ ಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು.

ಉಡುಪಿ ಎಸ್ಪಿ ವಿಷ್ಣುವರ್ದನ್ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್ಪಿ ಎಸ್.ಟಿ ಸಿದ್ದಲಿಂಗಪ್ಪ, ಕುಂದಾಪುರ ಡಿವೈಎಸ್ಪಿಶ್ರೀಕಾಂತ್ ನಿರ್ದೇಶನದಲ್ಲಿ ಬೈಂದೂರು ವೃತ್ತನಿರೀಕ್ಷಕ ಸಂತೋಷ್ ಕಾಯ್ಕಿಣಿ ನೇತೃತ್ವದಲ್ಲಿ ಬೈಂದೂರು ಎಸ್ಸೈ ಪವನ್ ನಾಯಕ್, ಗಂಗೊಳ್ಳಿ ಎಸ್ಸೈ ವಿನಯ್ ಕೊರ್ಲಹಳ್ಳಿ ತಂಡ ಈ ಕಾರ್ಯಾಚರಣೆ ನಡೆಸಿದೆ.

ಆತ್ಮಹತ್ಯೆ ನಾಟಕಕ್ಕೆ ಅಮಾಯಕನ ಕೊಲೆ!
ಮಾಳ ಮೂಲದ ಸದಾನಂದ ಶೇರಿಗಾರ ಶಿರ್ವ ಮಂಚಕಲ್ ವಸತಿ ಸಮುಚ್ಛಯದ ನಿವಾಸಿಯಾಗಿದ್ದಾನೆ. ಈತ 2013ರಿಂದ 2018ರತನಕ ಖಾಸಗಿ ಸರ್ವೇಯರ್ ಆಗಿ ಕೆಲಸ ಮಾಡುತ್ತಿದ್ದನು. ಆ ವೇಳೆ ಜಾಗದ ಸರ್ವೇ ನಡೆಸಿ ಎಫ್.ಎಂ.ಬಿ. ನಕ್ಷೆಯಲ್ಲಿ ರಸ್ತೆ ಇರುವ ಬಗ್ಗೆ ವರದಿ ನೀಡಿದ್ದು, ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

2019ರಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಜಾರ್ಜ್‌ಶೀಟ್‌ನಲ್ಲಿ ಸರ್ವೇಯರ್ ಸದಾನಂದನ ಹೆಸರು ಉಲ್ಲೇಖಿಸಲಾಗಿತ್ತು. ಸದ್ಯವೇ ಬರಲಿದ್ದ ಈ ಪ್ರಕರಣದ ಅಂತಿಮ ತೀಪಿನಲ್ಲಿ ತನಗೆ ಶಿಕ್ಷೆಯಾಗಬಹುದೆಂದು ಭಯಪಟ್ಟ ಸದಾನಂದ, ಅದಕ್ಕಾಗಿ ತನ್ನದೇ ಕಾರಿನಲ್ಲಿ ತಾನು ಆತ್ಮಹತ್ಯೆಗೆ ಶರಣಾದಂತೆ ಸಾಂದರ್ಭಿಕತೆ ಸೃಷ್ಟಿಸಲು ಸಂಚು ಮಾಡಿದನು. ಇದಕ್ಕೆ ಆತನ ಪ್ರೇಯಸಿ ಶಿಲ್ಪಾ ಕೂಡ ಸಹಕಾರ ನೀಡಿದಳು.

ಶಿಲ್ಪಾಳ ಪರಿಚಯದ ಆನಂದ ದೇವಾಡಿಗರನ್ನು ಮನೆಗೆ ಕರೆಯಿಸಿ ನಿದ್ರೆ ಮಾತ್ರೆ ಬೆರೆಸಿದ ಮದ್ಯ ಕುಡಿಸಿ ಪ್ರಜ್ಞೆ ಕಳೆದುಕೊಳ್ಳುವಂತೆ ಮಾಡಿದರು. ನಂತರ ಅವರನ್ನು ಕಾರಿನ ಹಿಂಬದಿಯಲ್ಲಿ ಕುಳ್ಳಿರಿಸಿಕೊಂಡು ಶಿಲ್ಪಾ ಹಾಗೂ ಸದಾನಂದ ಒತ್ತಿನೆಣೆಗೆ ಕರೆದೊಯ್ದರು. ಬಳಿಕ ಬೈಲೂರು, ಆನೆಕೆರೆ ಸೇರಿ ಮೂರು ಕಡೆ ಖರೀದಿಸಿದ್ದ ಒಟ್ಟು 8 ಲೀಟರ್ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೈದರು. ಬಳಿಕ ಸತೀಶ್ ಹಾಗೂ ನಿತಿನ್ ತಂದಿದ್ದ ಇನ್ನೊಂದು ಕಾರಿನಲ್ಲಿ ಇವರಿಬ್ಬರು ಅಲ್ಲಿಂದ ಪರಾರಿಯಾದರು ಎಂದು ಪೊಲೀಸರು ತನಿಖೆಯಿಂದ ತಿಳಿದುಬಂದಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News