ಕಾಲುಸಂಕ, ತೂಗುಸೇತುವೆಗಳಲ್ಲಿ ಪ್ರಾಣಭೀತಿಯಲ್ಲೇ ಓಡಾಡುತ್ತಿರುವ ಗ್ರಾಮಸ್ಥರು, ಶಾಲಾ ಮಕ್ಕಳು

Update: 2022-07-15 05:18 GMT

ಚಿಕ್ಕಮಗಳೂರು, ಜು.15: ಕಾಫಿನಾಡಿನಲ್ಲಿ ಮಳೆಯ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿರುವುದು ಒಂದೆಡೆಯಾದರೆ, ಗ್ರಾಮೀಣ ಭಾಗದಲ್ಲಿರುವ ಕುಗ್ರಾಮಗಳ ವ್ಯಾಪ್ತಿಯಲ್ಲಿ ಹರಿಯುತ್ತಿರುವ ಸಣ್ಣ ನದಿಗಳು, ಹಳ್ಳಕೊಳ್ಳಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿರುವುದರಿಂದ ಹಲವಾರು ಗ್ರಾಮಗಳು ದ್ವೀಪಗಳಂತಾಗಿವೆ.

ಈ ಗ್ರಾಮಗಳಲ್ಲಿನ ಕೂಲಿ ಕಾರ್ಮಿಕರು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಧುಮ್ಮಿಕ್ಕಿ ಹರಿಯುತ್ತಿರುವ ನದಿ, ಹಳ್ಳಗಳನ್ನು ದಾಟಿ ಗ್ರಾಮದಿಂದ ಹೊರಬಾರದಂತಾಗಿದೆ. ಗ್ರಾಮಗಳ ಸಂಪರ್ಕಕ್ಕೆ ಸುಸಜ್ಜಿತ ಸೇತುವೆ ಇಲ್ಲದೆ ನಿವಾಸಿಗಳು ಪ್ರಾಣದ ಹಂಗು ಬಿಟ್ಟು ಗ್ರಾಮಸ್ಥರೇ ನಿರ್ಮಿಸಿಕೊಂಡಿರುವ ಕಾಲು ಸಂಕ, ತೂಗು ಸೇತುವೆಗಳ ಮೂಲಕ ಹೊರ ಜಗತ್ತಿನ ಸಂಪರ್ಕ ಸಾಧಿಸುವ ಪರಿಸ್ಥಿತಿಯಲ್ಲಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷದಿಂದಾಗಿ ಇಂತಹ ಗ್ರಾಮಗಳ ಜನರು ಗೋಳನ್ನು ಕೇಳುವವರೇ ಇಲ್ಲದಂತಾಗಿದೆ.

ಮಲೆನಾಡು ಬೆಟ್ಟಗುಡ್ಡಗಳ, ಗಿರಿಶ್ರೇಣಿಗಳ, ಹಳ್ಳ-ಕೊಳ್ಳಗಳ ಬೀಡಾಗಿದೆ. ದಟ್ಟ ಕಾಡುಗಳ ಮಧ್ಯೆ ಇರುವ ಮಲೆನಾಡಿನ ಇಂತಹ ಕುಗ್ರಾಮಗಳಿಗೆ ಇಂದಿಗೂ ಸುಸಜ್ಜಿತ ರಸ್ತೆ, ಸೇತುವೆ ಸಂಪರ್ಕಗಳು ಮರೀಚಿಕೆಯಾಗಿವೆ. ಮಲೆನಾಡು ಭಾಗದ ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕುಗಳ ವ್ಯಾಪ್ತಿಯಲ್ಲಿರುವ ಸಾವಿರಾರು ಕುಗ್ರಾಮಗಳ ಜನರು ಇಂದಿಗೂ ಸುಸಜ್ಜಿತ ರಸ್ತೆ, ಸೇತುವೆಗಳಿಲ್ಲದೆ ನದಿ, ಹಳ್ಳಕೊಳ್ಳಗಳನ್ನು ದಾಟಲು ಇಂದಿಗೂ ಕಾಲುಸಂಕ, ತೂಗುಸೇತುವೆಗಳನ್ನೇ ಅವಲಂಭಿಸಿದ್ದಾರೆ. ಸುಸಜ್ಜಿತ ರಸ್ತೆ, ಸೇತುವೆಗಾಗಿ ಕುಗ್ರಾಮಗಳಲ್ಲಿನ ಜನರು ಹೆಚ್ಚಾಗಿ ಆದಿವಾಸಿಗಳು, ಪರಿಶಿಷ್ಟರೇ ಆಗಿದ್ದಾರೆ. ಇವರ ಬೇಡಿಕೆಗಳನ್ನು ಈಡೇರಿಸುವಲ್ಲಿ ಜನಪ್ರತಿನಿಧಿಗಳು ನಿರ್ಲಕ್ಷ ವಹಿಸಿರುವ ಪರಿಣಾಮ ಮಳೆಗಾಲದ ಆರು ತಿಂಗಳುಗಳ ಕಾಲ ಈ ಜನರು ಹೊರ ಜಗತ್ತಿನ ಸಂಪರ್ಕ ಸಾಧಿಸಲು ಕಾಲುಸಂಕ, ತೂಗುಸೇತುವೆಗಳನ್ನೇ ಬಳಸುವುದು ಅನಿವಾರ್ಯವಾಗಿದೆ.

ಕಳಸ ತಾಲೂಕಿನ ಸಂಸೆ ಗ್ರಾಪಂ ವ್ಯಾಪ್ತಿಯಲ್ಲಿರುವ ಗುಳ್ಯ ಗ್ರಾಮ ನಾಗರಿಕ ಸೌಲಭ್ಯಗಳಿಂದ ವಂಚಿತವಾಗಿರುವ ಕುಗ್ರಾಮಗಳಲ್ಲೊಂದಾಗಿದೆ. ಆದಿವಾಸಿ ಸಮುದಾಯದವರೇ ಹೆಚ್ಚಾಗಿರುವ ಈ ಗ್ರಾಮದ ಬಹುತೇಕ ಜನರು ಕೂಲಿ ಕಾರ್ಮಿಕರಾಗಿದ್ದಾರೆ. ಈ ಗ್ರಾಮದ ಜನರು ತಮ್ಮ ದೈನಂದಿನ ಅಗತ್ಯಗಳಾದ ಶಾಲೆ, ಆಸ್ಪತ್ರೆ, ಸರಕಾರಿ ಇಲಾಖೆಗಳ ಸೌಲಭ್ಯ, ದಿನಸಿ ಮತ್ತಿತರ ಸೌಲಭ್ಯಗಳಿಗಾಗಿ 18 ಕಿ.ಮೀ. ದೂರದಲ್ಲಿರುವ ಸಂಸೆ ಗ್ರಾಮ, ಇಲ್ಲವೇ 22 ಕಿ.ಮೀ. ದೂರದಲ್ಲಿರುವ ಕಳಸ ಪಟ್ಟಣವನ್ನೇ ಅವಲಂಬಿಸಿದ್ದಾರೆ. ಆದರೆ, ಈ ಗ್ರಾಮದ ಜನರು ಅನಾದಿ ಕಾಲದಿಂದಲೂ ಹೊರ ಜಗತ್ತಿನ ಸಂಪರ್ಕಕ್ಕಾಗಿ ಗ್ರಾಮದಲ್ಲಿ ಹರಿಯವ ನದಿಯೊಂದನ್ನು ದಾಟಿ ಬರಬೇಕಿದ್ದು, ಈ ನದಿ ದಾಟಲು ಸುಸಜ್ಜಿತ ಸೇತುವೆ ಇಲ್ಲದ ಪರಿಣಾಮ ಅನಾದಿಕಾಲದಿಂದಲೂ ಗ್ರಾಮಸ್ಥರೇ ನಿರ್ಮಿಸಿಕೊಂಡಿರುವ ಬೆತ್ತದ ಕಡ್ಡಿಗಳನ್ನು ಜೋಡಿಸಿ ಮಾಡಿರುವ ತೂಗು ಸೇತುವೆಯನ್ನು ದಾಟಿ ಬರಬೇಕಾಗಿದೆ. ಶಾಲಾ ಮಕ್ಕಳು, ಗ್ರಾಮದ ಕೂಲಿ ಕಾರ್ಮಿಕರು ಸದ್ಯ ಈ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದರೂ ಇಂದಿಗೂ ಇದೇ ತೂಗು ಸೇತುವೆಯಲ್ಲಿ ಜೀವಭಯ ಬಿಟ್ಟು ನದಿ ದಾಟುತ್ತಿದ್ದಾರೆ.

ಆದರೆ, ಕಳಸ ಪೊಲೀಸರು ಗ್ರಾಮಸ್ಥರ ಗಮನಕ್ಕೆ ತಾರದೆ ‘ತೂಗುಸೇತುವೆ ಶಿಥಿಲಾವಸ್ಥೆಯಲ್ಲಿದ್ದು, ಗ್ರಾಮಸ್ಥರು ತೂಗು ಸೇತುವೆ ಮೇಲೆ ತಿರುಗಾಡಬಾರದು’ ಎಂದು ಗುರುವಾರ ತೂಗುಸೇತುವೆ ಬಳಿ ನಾಮಫಲಕ ಹಾಕಿ ತೆರಳಿದ್ದು, ಇದರಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಈ ತೂಗು ಸೇತುವೆ ದಾಟಿದರೆ ಸಮೀಪದಲ್ಲಿ ಡಾಂಬಾರು ರಸ್ತೆ ಇದ್ದು, ಅಲ್ಲಿಂದ ಜೀಪ್, ಆಟೊಗಳ ಮೂಲಕ ಕಳಸ ಹಾಗೂ ಸಂಸೆ ಗ್ರಾಮಗಳಿಗೆ ಹೋಗಲು ಸಾಧ್ಯವಿದೆ. ಈಗ ತೂಗು ಸೇತುವೆ ಮೇಲೆ ತಿರುಗಬಾರದು ಎಂದು ಪೊಲೀಸರು ನಾಮಫಲಕ ಹಾಕಿ ಹೋಗಿದ್ದು, ಇದರಿಂದಾಗಿ ನಾವು 16 ಕಿ.ಮೀ. ಕಚ್ಚಾ ರಸ್ತೆಯಲ್ಲಿ ನಡೆದು ಹೋಗಬೇಕಿದೆ. ಈ ರಸ್ತೆ ಸಂಪೂರ್ಣವಾಗಿ ಹಾಳಾಗಿರುವುದರಿಂದ ಆಟೊ, ಜೀಪ್ಗಳು ಈ ರಸ್ತೆಯಲ್ಲಿ ಬರುವುದಿಲ್ಲ. ಪರಿಣಾಮ ನಡೆದುಕೊಂಡೇ ಶಾಲಾ ಮಕ್ಕಳು, ಕೂಲಿ ಕಾರ್ಮಿಕರು ಹೋಗಬೇಕಾಗಿದೆ. ಇದರಿಂದ ಸಮಯಕ್ಕೆ ಸರಿಯಾಗಿ ಹೋಗಲು ಆಗುತ್ತಿಲ್ಲ. ಇದು ಭಾರೀ ಸಮಸ್ಯೆ ಉಂಟು ಮಾಡಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಗುಳ್ಯ ಗ್ರಾಮದ ಈ ಸಮಸ್ಯೆ ಮಲೆನಾಡಿನ ಅನೇಕ ಕುಗ್ರಾಮಗಳ ಸಮಸ್ಯೆಯಾಗಿದ್ದು, ಭದ್ರಾ, ತುಂಗಾ, ಹೇಮಾವತಿ ಸೇರಿದಂತೆ ಮಲೆನಾಡು ಭಾಗದ ಅನೇಕ ಹಳ್ಳಕೊಳ್ಳಗಳ ಪಾತ್ರದಲ್ಲಿರುವ ಅನೇಕ ಕು

ಗ್ರಾಮಗಳ ಸಮಸ್ಯೆಯೂ ಇದೇ ಆಗಿದೆ. ಈ ಜನರು ಬೇಸಿಗೆಯಲ್ಲಿ ನದಿ ದಾಟಿ ಹೊರ ಜಗತ್ತಿನ ಸಂಪರ್ಕ ಸಾಧಿಸುತ್ತಿದ್ದರೆ, ಮಳೆಗಾಲದಲ್ಲಿ ಮಾತ್ರ ಜೀವದ ಹಂಗು ತೊರೆದು ಕಾಲು ಸಂಕ, ತೂಗು ಸೇತುವೆ ಮೂಲಕ ಹೊರ ಜಗತ್ತಿನ ಸಂಪರ್ಕ ಸಾಧಿಸುವುದು ಅನಿವಾರ್ಯವಾಗಿದೆ. ಕಾಲು ಸಂಕ, ಸೇತುವೆ ನಿರ್ಮಾಣಕ್ಕೆಂದು ಸರಕಾರ ಪ್ರತೀ ಬಜೆಟ್ನಲ್ಲಿ ಅನುದಾನ ಬಿಡುಗಡೆ ಮಾಡುತ್ತಿದೆಯಾದರೂ ಈ ಅನುದಾನ ಯಾರ ಪಾಲಾಗುತ್ತಿದೆಯೋ ಗೊತ್ತಿಲ್ಲ. ಇಂತಹ ಕುಗ್ರಾಮಗಳಲ್ಲಿನ ಕಾಲು ಸಂಕ, ತೂಗುಸೇತುವೆಗಳ ಜಾಗದಲ್ಲಿ ಸುಸಜ್ಜಿತ ಸೇತುವೆ ನಿರ್ಮಾಣಕ್ಕೆ ಸರಕಾರ, ಅಧಿಕಾರಿಗಳು, ಜನಪ್ರತಿನಿಧಿಗಳು ಇನ್ನಾದರೂ ಕ್ರಮವಹಿಸದಿದ್ದಲ್ಲಿ ಮಳೆಗಾಲದಲ್ಲಿ ಗ್ರಾಮಸ್ಥರು ಅಥವಾ ಶಾಲಾ ಕಾಲೇಜು ಮಕ್ಕಳು ಹಳ್ಳಕ್ಕೆ ಕಾಲು ಜಾರಿ ಬಿದ್ದು ಪ್ರಾಣಾಪಾಯ ಸಂಭವಿಸುವಂತಹ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಸಚಿವೆ, ಶಾಸಕರಿಂದ ಕೇವಲ ಭರವಸೆ: ನಿವಾಸಿಗಳ ಆರೋಪ

ತೂಗು ಸೇತುವೆ ಜಾಗದಲ್ಲಿ ಸುಸಜ್ಜಿತ ಸೇತುವೆ ನಿರ್ಮಿಸಿಕೊಡಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ುಮಾರಸ್ವಾಮಿ ಅವರಿಗೆ ಹಲವು ಬಾರಿ ಮನವಿ ಮಾಡಿದರೂ ಅವರಿಂದ ಕೇವಲ ಭರವಸೆ ಸಿಗುತ್ತಿದೆಯೇ ಹೊರತು, ಸೇತುವೆ ಮಾತ್ರ ಇನ್ನೂ ಆಗಿಲ್ಲ ಎಂದು ಗುಳ್ಯ ನಿವಾಸಿಗಳು ದೂರುತ್ತಿದ್ದಾರೆ.

‘ಜೀವ ಹೋದರೂ ಪರವಾಗಿಲ್ಲ, ಇದೇ ತೂಗು ಸೇತುವೆಯಲ್ಲೇ ತಿರುಗುತ್ತೇವೆ’

ಸದ್ಯ ಭಾರೀ ಮಳೆಯಿಂದಾಗಿ ಹಳ್ಳ ತುಂಬಿ ಹರಿಯುತ್ತಿದ್ದರೂ ಗ್ರಾಮಸ್ಥರು, ಶಾಲಾ ಮಕ್ಕಳು ಜೀವದ ಹಂಗು ತೊರೆದು ಇದೇ ತೂಗು ಸೇತುವೆ ದಾಟುತ್ತಿದ್ದೇವೆ. ಈಗ ಸೇತುವೆ ಹಾಳಾಗಿದೆ, ದಾಟಬಾರದು ಎಂದು ಪೊಲೀಸರು ಹೇಳಿದ್ದು, ನಮಗೆ ದಿಕ್ಕು ಕಾಣದಂತಾಗಿದೆ. ಜೀವ ಹೋದರೂ ಪರವಾಗಿಲ್ಲ, ನಾವು ಇದೇ ತೂಗು ಸೇತುವೆಯಲ್ಲೇ ತಿರುಗುತ್ತೇವೆ. ಒಂದು ಹೆಣ ಬಿದ್ದ ಮೇಲಾದರೂ ಸರಕಾರ ಎಚ್ಚೆತ್ತುಕೊಂಡು ಈ ಹಳ್ಳಕ್ಕೆ ಸೇತುವೆ ನಿರ್ಮಿಸುವಂತಾದರೆ ಸಾಕು ಎಂದು ಗ್ರಾಮದ ವೃದ್ಧ ನಿವಾಸಿ ಹಾದಪ್ಪ ಹಾಗೂ ಸಂಸೆ ಗ್ರಾಪಂ ಸದಸ್ಯ ಪ್ರವೀಣ್ ಬೇಸರದಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ಕೆ.ಎಲ್.ಶಿವು

contributor

Editor - ಕೆ.ಎಲ್.ಶಿವು

contributor

Similar News