ಪಾಕಿಸ್ತಾನದ ಪತ್ರಕರ್ತ ನನಗೆ ಗೊತ್ತಿಲ್ಲ; ಪುನರುಚ್ಚರಿಸಿದ ಹಾಮಿದ್ ಅನ್ಸಾರಿ

Update: 2022-07-15 16:31 GMT

ಹೊಸದಿಲ್ಲಿ, ಜು. 15: ಪಾಕಿಸ್ತಾನದ ಪತ್ರಕರ್ತ ನುಸ್ರತ್ ಮಿರ್ಝಾರ ಬಗ್ಗೆ ನನಗೆ ಗೊತ್ತಿಲ್ಲ ಹಾಗೂ ಅವರನ್ನು ಯಾವುದೇ ಸಮಾವೇಶಕ್ಕೆ ಆಹ್ವಾನಿಸಿಲ್ಲ ಎಂಬ ನನ್ನ ಹಿಂದಿನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ ಎಂದು ಮಾಜಿ ಉಪರಾಷ್ಟ್ರಪತಿ ಹಾಮಿದ್ಅನ್ಸಾರಿ ಶುಕ್ರವಾರ ಹೇಳಿದ್ದಾರೆ.

ಯುಪಿಎ ಅಧಿಕಾರಾವಧಿಯಲ್ಲಿ ನಾನು ಐದು ಬಾರಿ ಭಾರತಕ್ಕೆ ಭೇಟಿ ನೀಡಿದ್ದೇನೆ ಮತ್ತು ಭಾರತದಲ್ಲಿ ಸಂಗ್ರಿಹಿಸಿದ ಸೂಕ್ಷ್ಮ ಮಾಹಿತಿಗಳನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗೆ ಹಸ್ತಾಂತರಿಸಿದ್ದೇನೆ ಎಂಬುದಾಗಿ ನುಸ್ರತ್ ಮಿರ್ಝಾ ಹೇಳಿಕೊಂಡಿದ್ದಾರೆ.

ನಾನು ಭಾರತಕ್ಕೆ ಹಾಮಿದ್ ಅನ್ಸಾರಿಯ ಆಹ್ವಾನದಂತೆ ಹೋಗಿದ್ದೇನೆ ಮತ್ತು ಅವರನ್ನು ಭೇಟಿಯೂ ಆಗಿದ್ದೇನೆ ಎಂಬುದಾಗಿಯೂ ಅವರು ಹೇಳಿದ್ದಾರೆನ್ನಲಾಗಿದೆ.

ಆದರೆ, ಈ ಆರೋಪವು ‘ಸಾರಾಸಗಟು ಸುಳ್ಳು’ ಎಂಬುದಾಗಿ ಅನ್ಸಾರಿ ತಳ್ಳಿ ಹಾಕಿದ್ದಾರೆ.

ಬಿಜೆಪಿಯು ಶುಕ್ರವಾರ ಈ ವಿಷಯದಲ್ಲಿ ಕಾಂಗ್ರೆಸ್ ಮೇಲೆ ದಾಳಿ ನಡೆಸಿದೆ. ಭಾರತದಲ್ಲಿ 2009ರಲ್ಲು ನಡೆದ ಭಯೋತ್ಪದನೆ ಕುರಿತ ಸಮ್ಮೇಳನದಲ್ಲಿ ನುಸ್ರತ್ ಮಿರ್ಝಾ, ಹಾಮಿದ್ ಅನ್ಸಾರಿಯೊಂದಿಗೆ ವೇದಿಕೆಯನ್ನು ಹಂಚಿಕೊಂಡಿರುವ ಚಿತ್ರವನ್ನು ಬಿಜೆಪಿ ಪ್ರದರ್ಶಿಸಿದೆ.

‘‘ಪಾಕಿಸ್ತಾನಿ ಪತ್ರಕರ್ತ ನುಸ್ರತ್ ಮಿರ್ಝಾ ತನಗೆ ಗೊತ್ತಿಲ್ಲ ಅಥವಾ ಅವರನ್ನು ತಾನು ಯಾವುದೇ ಸಮಾವೇಶಕ್ಕೆ ಆಹ್ವಾನಿಸಿಲ್ಲ. ಮಿರ್ಝಾ ಉಲ್ಲೇಖಿಸಿರುವ 2010ರ ಸಮ್ಮೇಳನ ಅಥವಾ ಭಯೋತ್ಪಾದನೆ ಕುರಿತ 2009ರ ಸಮಾವೇಶ ಅಥವಾ ಬೇರೆ ಯಾವುದೇ ಸಮಾವೇಶಕ್ಕೂ ತಾನು ಅವರನ್ನು ಕರೆದಿಲ್ಲ ಎಂಬ ತನ್ನ ಹಿಂದಿನ ಹೇಳಿಕೆಗೆ ಮಾಜಿ ಉಪರಾಷ್ಟ್ರಪತಿ ಬದ್ಧರಾಗಿದ್ದಾರೆ’’ ಎಂದು ಅನ್ಸಾರಿಯ ಕಚೇರಿ ಬಿಡುಗಡೆಗೊಳಿಸಿರುವ ಹೇಳಿಕೆಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News