ಭಿಕ್ಷಾಟನೆ: ನಿಯಂತ್ರಣದ ಜೊತೆಗೆ ಪರ್ಯಾಯ ವ್ಯವಸ್ಥೆಯೂ ಅಗತ್ಯ
ಮಾನ್ಯರೇ,
ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷಾಟನೆ ತಡೆಯಲು ರಾಜ್ಯ ಸರಕಾರ ಸೂಚನೆ ನೀಡಿರುವುದು ಸ್ವಾಗತಾರ್ಹ. ಭಿಕ್ಷಾಟನೆ ಎಂಬುದು ಕೆಲವರಿಗೆ ಹೊಟ್ಟೆಪಾಡು ಆದರೆ, ಇನ್ನು ಕೆಲವರಿಗೆ ದಂಧೆಯಾಗಿ ಬಿಟ್ಟಿದೆ. ಹೀಗಾಗಿ ಭಿಕ್ಷಾಟನೆ ಮಾಡುವವರನ್ನು ಅತೀ ಕೇವಲವಾಗಿ ನೋಡುವ ಪರಿಪಾಠ ಬೆಳೆದು ಬಂದಿದೆ. ಇದರ ಪರಿಣಾಮ ಕುಟುಂಬ, ಸಮಾಜದಿಂದ ತುಳಿತಕ್ಕೊಳಗಾದವರ ಮೇಲೆ, ಬದುಕಿಗೆ ಆಧಾರ ಇಲ್ಲದವರ ಮೇಲೆ, ಆದಾಯ ಮೂಲ ಇಲ್ಲದೇ ಭಿಕ್ಷೆ ಬೇಡುವ ಮಂದಿಯ ಮೇಲೆ ನೇರವಾಗಿ ಬೀರುತ್ತಿದೆ. ಹೀಗಾಗಿ ಯಾರು ಅಸಲಿ ಹಾಗೂ ನಕಲಿ ಭಿಕ್ಷುಕರು ಎಂಬುದು ತಿಳಿಯಲು ಸಾಧ್ಯವಾಗುತ್ತಿಲ್ಲ. ಇನ್ನು ನಗರ ಪ್ರದೇಶಗಳಲ್ಲಿ ಭಿಕ್ಷಾಟನೆಯನ್ನು ಖಾಯಂ ಉದ್ಯೋಗ ಮಾಡಿಕೊಂಡವರೂ ಇದ್ದಾರೆ. ಸದ್ಯದ ಕಾಲಘಟ್ಟದಲ್ಲಿ ನಾನಾ ರೂಪದಲ್ಲಿ ಭಿಕ್ಷಾಟನೆ ನಡೆಯುತ್ತಿದ್ದು ಇದರಿಂದ ಸಾರ್ವಜನಿಕ ಸ್ಥಳಗಳಲ್ಲಿ ನಿರಂತರವಾಗಿ ಜನರಿಗೆ ಕಿರಿಕಿರಿ ನೀಡುತ್ತಿರುವುದು ಬೆಳಕಿಗೆ ಬರುತ್ತಿದೆ. ಜೊತೆಗೆ ಭಿಕ್ಷಾಟನೆ ಹೆಸರಿನಲ್ಲಿ ಮಕ್ಕಳನ್ನು ಶೋಷಣೆ ಮಾಡುತ್ತಿರುವ ಪ್ರಕರಣ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಹೀಗಾಗಿ ಇದನ್ನು ನಿಯಂತ್ರಿಸಬೇಕೆಂಬ ಕೂಗು ಕೇಳಿ ಬಂದಿತ್ತು. ಇದೀಗ ಭಿಕ್ಷಾಟನೆ ನಿಯಂತ್ರಿಸಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿರುವುದು ಸ್ವಾಗತಾರ್ಹ.
ಈ ಸೂಚನೆಯನ್ನು ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಂಡು ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕಾಗಿದೆ. ಇನ್ನು ಗ್ರಾಮೀಣ, ನಗರ ಮತ್ತು ಅರೆ ನಗರ ಪ್ರದೇಶಗಳಲ್ಲಿ ಭಿಕ್ಷಾಟನೆಯಲ್ಲಿ ತೊಡಗಿರುವ ವೃದ್ಧರಿಗೆ, ಮಕ್ಕಳನ್ನು ಎತ್ತಿಕೊಂಡು ಭಿಕ್ಷೆ ಬೇಡುವ ಮಹಿಳೆಯರಿಗೆ, ವಲಸೆ ಬಂದ ಅನಾಥ ಮಕ್ಕಳಿಗೆ, ಪರಿತ್ಯಜಿಸಲ್ಪಟ್ಟ ಮಕ್ಕಳು, ದೌರ್ಜನ್ಯಕ್ಕೆ ಒಳಗಾದ ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗಿರುವುದು ಕಂಡು ಬಂದರೆ ಅವರ ಬದುಕಿಗೆ ಆಧಾರ ನೀಡಲು ಸೂಕ್ತ ವ್ಯವಸ್ಥೆ ಮಾಡಬೇಕಾಗಿದೆ. ಹೀಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಪಂಚಾಯತ್ ಅಧಿಕಾರಿಗಳು ಇಲಾಖೆಗಳ ನಡುವೆ ಸಮನ್ವಯ ಸಾಧಿಸಿಕೊಂಡು ಭಿಕ್ಷಾಟನೆ ನಿಯಂತ್ರಿಸಬೇಕೆಂದು ಸಚಿವರು ಸೂಚನೆ ನೀಡಿದ್ದು ಔಚಿತ್ಯಪೂರ್ಣವಾಗಿದೆ. ಹೀಗಾಗಿ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು. ಈ ಮೂಲಕ ಯಾರ ಜೀವನ, ಬದುಕು ಕೀಳಲ್ಲ. ಎಲ್ಲರೂ ಗೌರವಯುತವಾಗಿ ಬದುಕಲು ಅವಕಾಶ ಮಾಡಿಕೊಡಬೇಕಾಗಿದೆ.