ಒಬ್ಬರನ್ನೊಬ್ಬರು ಕೊಲ್ಲಬೇಡಿ ಅಂದರೆ ಅದು ಹೇಗೆ ತಪ್ಪಾಗುತ್ತದೆ?: ನಟಿ ಸಾಯಿಪಲ್ಲವಿ ಪ್ರಶ್ನೆ

Update: 2022-07-16 13:14 GMT

ಹೈದರಾಬಾದ್: ದಿ ಕಾಶ್ಮೀರ್ ಫೈಲ್ಸ್ ಚಿತ್ರದ ಬಗ್ಗೆ ಮಾತನಾಡುವಾಗ ಧರ್ಮದ ಹೆಸರಿನಲ್ಲಿ ನಡೆಯುವ ಹಿಂಸೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ತಾವು ನೀಡಿದ್ದ ಹೇಳಿಕೆಗೆ ವಿವಾದಕ್ಕೀಡಾಗಿದ್ದ ನಟಿ ಸಾಯಿ ಪಲ್ಲವಿ ನಂತರ  ತಾವು ಯಾವುದೇ ದುರಂತವನ್ನು ಗೌಣವಾಗಿಸಲು ಯತ್ನಿಸಿಲ್ಲ ಎಂದು ಸ್ಪಷ್ಟ ಪಡಿಸಿದ್ದರು.

ಈಗ ಹಿಂತಿರುಗಿ ನೋಡಿದಾಗ ಈ ವಿವಾದ ತಮಗೆ ಅನುಭವದ ಪಾಠವಾಗಿದೆ ಎಂದು ಸಂದರ್ಶನವೊಂದರಲ್ಲಿ ನಟಿ ತಿಳಿಸಿದ್ದಾರೆ.

"ನಾನು ಯಾವುದೇ ರಾಜಕೀಯ ನಿಲುವು ತಳೆದಿರಲಿಲ್ಲ. ದಯವಿಟ್ಟು ಒಬ್ಬರನ್ನೊಬ್ಬರು ಕೊಲ್ಲಬೇಡಿ ಎಂದು ಹೇಳಿದರೆ ಹೇಗೆ ತಪ್ಪಾಗುತ್ತದೆ? ತೆಲುಗು ಸರಿಯಾಗಿ ಅರ್ಥವಾಗದ ಕೆಲವರು ನನ್ನ ಮಾತುಗಳನ್ನು ತಪ್ಪಾಗಿ ವ್ಯಾಖ್ಯಾನಿಸಿದ್ದರು" ಎಂದು ಸಾಯಿ ಪಲ್ಲವಿ ಹೇಳಿದ್ದಾರೆ.

"ನನ್ನ ಹೇಳಿಕೆ ಈ ತಿರುವು ಪಡೆಯುತ್ತದೆ ಎಂದು ಯೋಚಿಸಿರಲಿಲ್ಲ, ಧರ್ಮದಂತಹ ವೈಯಕ್ತಿಕ ವಿಚಾರಗಳ ಬಗ್ಗೆ ನಾವು ಕಚ್ಚಾಡಬಾರದು ಎಂದಷ್ಟೇ ಹೇಳಿದ್ದೆ" ಎಂದು ಅವರು ತಿಳಿಸಿದ್ದಾರೆ.

ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ವಲಸೆಗೆ ಕಾರಣವಾದ ಉಗ್ರವಾದ ಹಾಗೂ ಗೋಕಳ್ಳಸಾಗಾಟಗಾರರು ಎಂಬ ಶಂಕೆಯಲ್ಲಿ ನಡೆಯುವ ಹಲ್ಲೆಗಳೂ ತಪ್ಪು ಎಂದು ಸಾಯಿ ಪಲ್ಲವಿ ಈ ಹಿಂದೆ ಹೇಳಿದ್ದರು. ಇತ್ತೀಚೆಗೆ ಗೋಸಾಗಣಿಕೆದಾರನೊಬ್ಬ ಮುಸ್ಲಿಂ ಎಂಬ ಕಾರಣಕ್ಕೆ ಆತನ ಹತ್ಯೆ ನಡೆದ ಘಟನೆಯನ್ನು ಉಲ್ಲೇಖಿಸಿದ್ದ ಆಕೆ  ಕಾಶ್ಮೀರದಲ್ಲಿ ನಡೆದಿರುವುದಕ್ಕೂ ಈ ಘಟನೆಗೂ ಏನು ವ್ಯತ್ಯಾಸವಿದೆ? ಎಂದು ಪ್ರಶ್ನಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News