ಉತ್ತರಪ್ರದೇಶದ ಲುಲು ಮಾಲ್‌ ಮುಂದೆ ಹಿಂದೂ ಮಹಾಸಭಾ ಪ್ರತಿಭಟನೆ: ಹಲವರ ಬಂಧನ

Update: 2022-07-16 13:55 GMT

ಲಕ್ನೋ: ಉತ್ತರಪ್ರದೇಶದ ಲಕ್ನೋದಲ್ಲಿರುವ ಲುಲು ಮಾಲ್‌ನ ಹೊರಗೆ ಜಮಾಯಿಸಿ ಪ್ರತಿಭಟನೆ ನಡೆಸಿದ ನಂತರ ಶನಿವಾರ ಹಲವು ಹಿಂದೂ ಮಹಾಸಭಾ ಪದಾಧಿಕಾರಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕೇಸರಿ ಧ್ವಜಗಳನ್ನು ಹಿಡಿದು, ಘೋಷಣೆಗಳನ್ನು ಕೂಗುತ್ತಾ ಬಂದ ಪ್ರತಿಭಟನಾಕಾರರನ್ನು ಮಾಲ್ ಆವರಣದ ಹೊರಗೆ ಭಾರೀ ಪೊಲೀಸ್ ನಿಯೋಜನೆ ಮತ್ತು ಬ್ಯಾರಿಕೇಡ್‌ಗಳೊಂದಿಗೆ ಎದುರಿಸಲಾಯಿತು. ಅವರೆಲ್ಲರನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಲುಲು ಮಾಲ್‌ನ ಪ್ರವೇಶ ದ್ವಾರದ ಹೊರಗೆ ಸುಂದರ ಕಾಂಡವನ್ನು ಪಠಿಸಿದ್ದಕ್ಕೆ ನಾಲ್ವರನ್ನು ಬಂಧಿಸಿದ ಮರುದಿನ ಈ ಘಟನೆ ನಡೆದಿದೆ. ಸೆಕ್ಷನ್ 144 ಉಲ್ಲಂಘಿಸಿದ್ದಕ್ಕಾಗಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇತ್ತೀಚೆಗೆ ತೆರೆಯಲಾದ ಮಾಲ್‌ನಲ್ಲಿ ಗುಂಪೊಂದು ನಮಾಝ್ ಮಾಡುತ್ತಿರುವ ವಿಡಿಯೋ ವೈರಲ್ ಆದ ಬಳಿಕ ಅಖಿಲ ಭಾರತ ಹಿಂದೂ ಮಹಾಸಭಾ ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದೆ. ಬಲಪಂಥೀಯ ಸಂಘಟನೆಯು ಶುಕ್ರವಾರ ಮಾಲ್ ಬಳಿ ಹನುಮಾನ್ ಚಾಲೀಸಾವನ್ನು ಪಠಿಸಲು ಸ್ಥಳೀಯ ಅಧಿಕಾರಿಗಳಿಂದ ಅನುಮತಿ ಕೇಳಿತ್ತು, ಆದರೆ ಅವರ ಮನವಿಯನ್ನು ತಿರಸ್ಕರಿಸಲಾಯಿತು.

ಹಿಂದೂ ಮಹಾಸಭಾದ ರಾಷ್ಟ್ರೀಯ ವಕ್ತಾರ ಶಿಶಿರ್ ಚತುರ್ವೇದಿ, "ಲುಲು ಮಾಲ್‌ನಲ್ಲಿ ಜನರು ನೆಲದ ಮೇಲೆ ಕುಳಿತು ನಮಾಝ್ ಮಾಡಿದರು. ಮಾಲ್‌ನಲ್ಲಿ ಸರ್ಕಾರದ ಆದೇಶಗಳನ್ನು ಉಲ್ಲಂಘಿಸಲಾಗಿದೆ ಎಂಬುದನ್ನು ಈ ವೀಡಿಯೊ ಸಾಬೀತುಪಡಿಸುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ನಮಾಝ್ ಮಾಡುವಂತಿಲ್ಲ ಎಂದು ಸರ್ಕಾರ ನಿರ್ದೇಶಿಸಿದೆ" ಎಂದು ಈ ಹಿಂದೆ ಹೇಳಿಕೆಯಲ್ಲಿ ತಿಳಿಸಿದ್ದರು.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಲುಲು ಮಾಲ್ ಪ್ರತಿನಿಧಿಗಳು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಮತ್ತು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಹಲವಾರು ಅಪರಿಚಿತ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News