ಉಕ್ರೇನ್ ಸರಕು ಸಾಗಾಣಿಕೆ ವಿಮಾನ ಗ್ರೀಸ್‍ನಲ್ಲಿ ಪತನ

Update: 2022-07-17 01:51 GMT

ಕೀವ್ : ಉಕ್ರೇನ್ ವಿಮಾನಯಾನ ಕಂಪನಿಯ ಸರಕು ಸಾಗಾಣಿಕೆ ವಿಮಾನವೊಂದು ಉತ್ತರ ಗ್ರೀಸ್‍ನ ಕವಲ ಪಟ್ಟಣದಲ್ಲಿ ಶನಿವಾರ ಪತನಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಮಾನ ಸೈಬೀರಿಯಾದಿಂದ ಜೋರ್ಡಾನ್‍ಗೆ ಹೋಗುತ್ತಿತ್ತು ಎಂದು ಗ್ರೀಕ್ ನಾಗರಿಕ ವಿಮಾನಯಾನ ಅಧಿಕಾರಿಗಳು ಹೇಳಿದ್ದಾರೆ. ಆದರೆ ಈ ಸರಕು ಸಾಗಾಣಿಕೆ ವಿಮಾನದಲ್ಲಿ ಎಷ್ಟು ಮಂದಿ ಇದ್ದರು ಎನ್ನುವುದನ್ನು ದೃಢಪಡಿಸಲು ಸಾಧ್ಯವಾಗಿಲ್ಲ. ಮೆಡಿಟರೇನಿಯನ್ ಹೆಸರಿನ ವಿಮಾನಯಾನ ಸಂಸ್ಥೆ ಈ ಕಾರ್ಗೊ ವಿಮಾನವನ್ನು ನಿರ್ವಹಿಸುತ್ತಿತ್ತು.

ವಿಮಾನದ ಒಂದು ಎಂಜಿನ್‍ನಲ್ಲಿ ಸಮಸ್ಯೆ ಕಾಣಿಸಿಕೊಂಡ ತಕ್ಷಣ ಪೈಲಟ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತೆಸ್ಸಲೋನಿಕಿ ಅಥವಾ ಕವಲ ವಿಮಾನ ನಿಲ್ದಾಣದಲ್ಲಿ ಇಳಿಯಲು ಅವಕಾಶ ನೀಡಲಾಯಿತು. ಪೈಲಟ್ ಕವಲ ವಿಮಾನ ನಿಲ್ದಾಣ ಹತ್ತಿರ ಎಂಬ ಕಾರಣಕ್ಕೆ ಅದನ್ನು ಆಯ್ಕೆ ಮಾಡಿಕೊಂಡರು. ಆದರೆ ವಿಮಾನ ನಿಲ್ದಾಣದಿಂದ ಪಶ್ಚಿಮಕ್ಕೆ 40 ಕಿಲೋಮೀಟರ್ ದೂರದಲ್ಲೇ ವಿಮಾನ ಪತನಗೊಂಡಿತು ಎಂದು ಅಧಿಕಾರಿಗಳು ವಿವರ ನೀಡಿದ್ದಾರೆ.

"ಕೆಲ ನಿಮಿಷಗಳವರೆಗೂ ಸ್ಫೋಟದ ಸದ್ದು ಕೇಳಿ ಬರುತ್ತಿತ್ತು" ಎಂದು ಪ್ಯಾಜಿಯೊ ಪಾಲಿಕೆಯ ಮೇಯರ್ ಫಿಲಿಪ್ಪೋಸ್ ಅನಸ್ತಾಸಿಯಾದಿಸ್ ಹೇಳಿದ್ದಾರೆ. ವಿಮಾನ ಪತನಗೊಂಡ ಸ್ಥಳದಿಂದ 300 ಮೀಟರ್ ದೂರದಲ್ಲಿ ಇದ್ದಿದ್ದಾಗಿ ಅವರು ತಿಳಿಸಿದ್ದಾರೆ.

ವಿಮಾನ ಬೆಂಕಿಯ ಉಂಡೆಯಾಗಿ ದಟ್ಟ ಹೊಗೆ ಕಾರುತ್ತಾ ಬೀಳುವುದನ್ನು ಸ್ಥಳೀಯರು ನೋಡಿದ್ದಾರೆ. ಭಾರಿ ಸ್ಫೋಟದ ಸದ್ದುಗಳು ಕೇಳಿಸಿದ್ದರಿಂದ ವಿಮಾನದಲ್ಲಿ ಸ್ಫೋಟಕಗಳನ್ನು ಸಾಗಿಸುತ್ತಿದ್ದಿರಬೇಕು ಎಂಬ ಶಂಕೆಯನ್ನು ಸ್ಥಳೀಯರು ಮತ್ತು ಗ್ರೀಕ್ ಮಾಧ್ಯಮದವರು ವ್ಯಕ್ತಪಡಿಸಿದ್ದಾರೆ ಎಂದು hindustantimes.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News