ಪ್ರಯಾಗರಾಜ್‌ ಪ್ರತಿಭಟನೆ: ಜಾವೇದ್‌ ಮುಹಮ್ಮದ್‌ ವಿರುದ್ಧ ಎನ್‌ಎಸ್‌ಎ ದಾಖಲಿಸಿದ ಉತ್ತರಪ್ರದೇಶ ಸರಕಾರ

Update: 2022-07-17 08:57 GMT

ಹೊಸದಿಲ್ಲಿ: ಉತ್ತರ ಪ್ರದೇಶ ಸರಕಾರವು ವೆಲ್ಫೇರ್ ಪಾರ್ಟಿ ನಾಯಕ ಮತ್ತು ಕಾರ್ಯಕರ್ತ ಜಾವೇದ್ ಮೊಹಮ್ಮದ್ ವಿರುದ್ಧ ಕಠಿಣ ರಾಷ್ಟ್ರೀಯ ಭದ್ರತಾ ಕಾಯಿದೆ (1980) ಅನ್ನು ಜಾರಿಗೊಳಿಸಿದೆ, ಆರೋಪ ಅಥವಾ ವಿಚಾರಣೆಯಿಲ್ಲದೆ ಅವರನ್ನು ಒಂದು ವರ್ಷದವರೆಗೆ ಬಂಧನದಲ್ಲಿರಿಸಲು ಇದು ದಾರಿ ಮಾಡಿಕೊಟ್ಟಿದೆ.

ಬಿಜೆಪಿ ನಾಯಕಿ ನೂಪುರ್ ಶರ್ಮಾ ಪ್ರವಾದಿ ಮುಹಮ್ಮದ್ ರವರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದನ್ನು ವಿರೋಧಿಸಿ ಜೂನ್ 10 ರ ಶುಕ್ರವಾರದ ಪ್ರಾರ್ಥನೆಯ ನಂತರ ಖುಲ್ದಾಬಾದ್ ಪ್ರದೇಶದಲ್ಲಿ ನಡೆದ ಗಲಭೆಯ ಕೆಲವೇ ಗಂಟೆಗಳ ನಂತರ ಜೂನ್ 11 ರ ಮುಂಜಾನೆ ಮೊಹಮ್ಮದ್ ಅವರನ್ನು ಬಂಧಿಸಲಾಯಿತು.

ಜಾವೇದ್ ಮೊಹಮ್ಮದ್ ಹಿಂಸಾಚಾರದ ಪ್ರಮುಖ ರೂವಾರಿ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಈ ಆರೋಪವನ್ನು ಜಾವೇದ್‌ ಮುಹಮ್ಮದ್ ಮತ್ತು ಅವರ ವಕೀಲರು ನಿರಾಕರಿಸಿದ್ದರು. ಜೂನ್ 12 ರಂದು ಅವರ ನಿವಾಸವನ್ನು ಅಧಿಕಾರಿಗಳು ಕೆಡವಿದ್ದಾರೆ.

ಈ ಕುರಿತು ‘ದಿ ವೈರ್’ ಜೊತೆ ಮಾತನಾಡಿದ ಜಾವೇದ್‌ ಮುಹಮ್ಮದ್‌ ಪರ ವಕೀಲ ಕೆ.ಕೆ ರಾಯ್‌, "ಜಾವೇದ್‌ ರ ವಿರುದ್ಧ ಎನ್‌ಎಸ್‌ಎ ದಾಖಲು ಮಾಡಿದ್ದಾರೆಂದು ನಮಗೆ ತಿಳಿಸಲಾಗಿದೆ. ಈ ಕುರಿತು ಯಾವುದೇ ದಾಖಲೆಗಳನ್ನು ನೀಡಿಲ್ಲ. ಜಾವೇದ್‌ ಮುಹಮ್ಮದ್‌ ರವರು ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆ ಅಥವಾ ಯಾವುದೇ ಜನಸಮೂಹವನ್ನು ಪ್ರಚೋದಿಸಿದ್ದಾರೆ ಎಂಬುದಕ್ಕೆ ಯಾವುದೇ ಗಣನೀಯ ಪುರಾವೆಗಳನ್ನು ಬಹಿರಂಗಪಡಿಸಲು ಪೊಲೀಸರು ವಿಫಲವಾಗಿರುವುದರಿಂದ ಇದು ನಿರ್ದಿಷ್ಟವಾಗಿ ಅವರನ್ನೇ ಗುರಿಯಾಗಿಸಿಕೊಂಡಿದೆ ಎಂದು ಹೇಳಿದ್ದಾರೆ.

ಜೂನ್ 10 ರಂದು ಬಿಜೆಪಿಯ ಮಾಜಿ ನಾಯಕಿ ನೂಪುರ್ ಶರ್ಮಾ ಪ್ರವಾದಿ ಮುಹಮ್ಮದ್‌ ರ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ಬಳಿಕ ಭಾರತದ ಹಲವಾರು ನಗರಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News