ತಮಿಳುನಾಡು: ಬಾಲಕಿ ಅನುಮಾನಸ್ಪದ ಸಾವು; ಹಿಂಸಾ ಸ್ವರೂಪ ಪಡೆದ ಶಾಲಾಡಳಿತದ ವಿರುದ್ಧದ ಪ್ರತಿಭಟನೆ

Update: 2022-07-17 15:26 GMT
Photo: Twitter

ಕಲ್ಲಕುರುಚಿ,ಜು.17: ಇಲ್ಲಿಗೆ ಸಮೀಪದ ಚಿನ್ನಸೇಲಮ್‌ನಲ್ಲಿ ಶಾಲಾ ವಿದ್ಯಾರ್ಥಿನಿಯೋರ್ವಳ ಸಾವಿಗೆ ನ್ಯಾಯವನ್ನು ಒದಗಿಸಬೇಕು ಎಂಬ ಬೇಡಿಕೆಯೊಂದಿಗೆ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ರವಿವಾರ ತೀವ್ರ ಹಿಂಸಾಚಾರಕ್ಕೆ ತಿರುಗಿದ್ದು,ಹಲವಾರು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಭಾರೀ ಕಲ್ಲುತೂರಾಟ ನಡೆದಿದ್ದು, ಪೊಲೀಸರು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.

ಚಿನ್ನಸೇಲಮ್‌ನ ಕಾಣಿಯಮೂರ ಶಕ್ತಿ ಮೆಟ್ರಕ್ಯುಲೇಷನ್ ಶಾಲೆಯಲ್ಲಿ 12ನೇ ತರಗತಿಯಲ್ಲಿ ಓದುತ್ತಿದ್ದ ಕುಡ್ಡಲೂರು ಜಿಲ್ಲೆಯ ಪೆರಿಯನಸಲೂರ ಗ್ರಾಮದ 17ರ ಹರೆಯದ ವಿದ್ಯಾರ್ಥಿನಿ ಜು.13ರಂದು ಹಾಸ್ಟೆಲ್‌ನ ಆವರಣದಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಹಾಸ್ಟೆಲ್‌ನ ಮೂರನೇ ಅಂತಸ್ತಿನಲ್ಲಿಯ ಕೋಣೆಯಲ್ಲಿ ವಾಸವಿದ್ದ ವಿದ್ಯಾರ್ಥಿನಿ ತುತ್ತತುದಿಯ ಅಂತಸ್ತಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಶಂಕಿಸಲಾಗಿದೆ.

ಶಾಲೆಯ ಶಿಕ್ಷಕರಿಬ್ಬರಿಂದ ಹಿಂಸೆಯನ್ನು ದೂರಿ ಬರೆಯಲಾಗಿರುವ ಚೀಟಿಯೊಂದು ಆಕೆಯ ಕೋಣೆಯಲ್ಲಿ ಪತ್ತೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
 
ತೀವ್ರ ಗಾಯಗಳಿಂದಾಗಿ ವಿದ್ಯಾರ್ಥಿನಿ ಸಾವನ್ನಪ್ಪಿರುವುದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು,ತನಿಖೆ ಪ್ರಗತಿಯಲ್ಲಿದೆ.

 ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಶಾಲೆಯ ಹೇಳಿಕೆಯನ್ನು ಪೋಷಕರು ತಿರಸ್ಕರಿಸಿದ್ದಾರೆ. ಸಾವಿಗೆ ಮುಂಚೆ ಆಕೆಯ ಮೇಲೆ ಲೈಂಗಿಕ ಹಲ್ಲೆ ನಡೆದಿರಬಹುದು ಎಂದು ಆರೋಪಿಸಿರುವ ಕುಟುಂಬವು,ಶಾಲೆಯಲ್ಲಿ ಹಿಂದೆಯೂ ಇಂತಹ ಘಟನೆಗಳು ನಡೆದಿವೆ ಎಂದು ಹೇಳಿದೆ.

ವಿದ್ಯಾರ್ಥಿನಿಯ ಸಾವಿಗೆ ಶಾಲೆಯ ಅಧಿಕಾರಿಗಳು ಕಾರಣರಾಗಿದ್ದಾರೆ ಎಂದು ಆರೋಪಿಸಿರುವ ಪೋಷಕರು,ಸಂಬಂಧಿಗಳು ಮತ್ತು ಗ್ರಾಮಸ್ಥರು ನ್ಯಾಯಕ್ಕಾಗಿ ಬೇಡಿಕೆಯನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಸಾವಿನ ಕುರಿತು ಸಿಐಡಿ ಪೊಲೀಸರಿಂದ ತನಿಖೆ ನಡೆಸಬೇಕು ಮತ್ತು ಸಾವಿಗೆ ಕಾರಣರಾದವರನ್ನು ಬಂಧಿಸಬೇಕು ಎನ್ನುವುದು ಅವರ ಬೇಡಿಕೆಗಳಾಗಿವೆ. ರಾಜಕೀಯ ಸಂಘಟನೆಗಳು ಮತ್ತು ಎಡಪಕ್ಷವೊಂದರ ಯುವಘಟಕ ಸೇರಿದಂತೆ ಪ್ರತಿಭಟನಾಕಾರರು ಈ ಬೇಡಿಕೆಗಳನ್ನು ಬೆಂಬಲಿಸಿದ್ದಾರೆ.

ಶಾಂತವಾಗಿ ನಡೆಯುತ್ತಿದ್ದ ಪ್ರತಿಭಟನೆ ರವಿವಾರ ದಿಢೀರ್ ಆಗಿ ಹಿಂಸೆಗೆ ತಿರುಗಿತ್ತು. ಹಿಂಸಾತ್ಮಕ ಗುಂಪನ್ನು ನಿಯಂತ್ರಿಸಲು ಪೊಲೀಸರು ಕನಿಷ್ಠ ಎರಡು ಸಲ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಶಾಂತಿಯನ್ನು ಕಾಯ್ದುಕೊಳ್ಳುವಂತೆ ಜನರನ್ನು ಕೋರಿಕೊಂಡಿರುವ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು,ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸುವ ಭರವಸೆಯನ್ನು ನೀಡಿದ್ದಾರೆ.

ಪೊಲೀಸರು ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ಕಿತ್ತೆಸೆದ ಪ್ರತಿಭಟನಾಕಾರರು ಶಾಲಾ ಆವರಣದೊಳಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಅಲ್ಲಿ ನಿಲ್ಲಿಸಲಾಗಿದ್ದ ಶಾಲಾ ಬಸ್ಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ. ಒಂದು ಪೊಲೀಸ್ ಬಸ್ ಗೂ ಬೆಂಕಿ ಹಚ್ಚಲಾಗಿದೆ. ಕಾರೊಂದನ್ನು ಬುಡಮೇಲು ಮಾಡಿ ಹಾನಿಯನ್ನುಂಟು ಮಾಡಲಾಗಿದೆ. ಹಲವಾರು ಪ್ರತಿಭಟನಾಕಾರರು ಕಟ್ಟಡದ ಟೆರೇಸ್ ತಲುಪಿ ನಾಮಫಲಕವನ್ನು ಧ್ವಂಸಗೊಳಿಸಿದ್ದಲ್ಲದೆ, ಮೃತ ಬಾಲಕಿಯ ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಬ್ಯಾನರ್‌ಗಳನ್ನೂ ಪ್ರದರ್ಶಿಸಿದ್ದರು.

ಸೀಮಿತ ಸಂಖ್ಯೆಯಲ್ಲಿದ್ದ ಪೊಲೀಸರಿಗೆ ಆರಂಭದಲ್ಲಿ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಸಾಧ್ಯವಾಗಿರಲಿಲ್ಲ. ಬಳಿಕ ಸಮೀಪದ ಜಿಲ್ಲೆಗಳಿಂದ ಹೆಚ್ಚಿನ ಪೊಲೀಸ್ ಪಡೆಗಳನ್ನು ಕರೆಸಲಾಗಿತ್ತು. ಪ್ರತಿಭಟನಾಕಾರರು ಶಾಲೆಯೊಳಗಿನ ಪೀಠೋಪಕರಣಗಳನ್ನು ರಸ್ತೆಯಲ್ಲಿ ಗುಡ್ಡೆ ಹಾಕಿ ಬೆಂಕಿ ಹಚ್ಚಿದ್ದಾರೆ. ಏಕತೆ ಮತ್ತು ನ್ಯಾಯಕ್ಕಾಗಿ ಆಗ್ರಹಿಸಿ ಸಂದೇಶಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಬಳಿಕ ಯುವ ಸಂಘಟನೆಯ ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಪ್ರತಿಭಟನೆಗೆ ಸೇರಿಕೊಂಡಿದ್ದರು.

ಪ್ರತಿಭಟನಾಕಾರರು ಪೊಲೀಸರತ್ತ ಕಲ್ಲುಗಳನ್ನು ತೂರಿದ್ದು,ಮಫ್ತಿಯಲ್ಲಿದ್ದ ಹಲವಾರು ಪೊಲೀಸರೂ ಪ್ರತಿಯಾಗಿ ಕಲ್ಲುತೂರಾಟ ನಡೆಸಿದ್ದರು. ರವಿವಾರ ರಸ್ತೆ ತಡೆ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದರಿಂದ ಚೆನ್ನೈ-ಸೇಲಮ್ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ವ್ಯತ್ಯಯವುಂಟಾಗಿತ್ತು. ಶಾಂತಿ ಕಾಯ್ದುಕೊಳ್ಳುವಂತೆ ಜನರನ್ನು ಕೋರಿಕೊಂಡಿರುವ ಡಿಜಿಪಿ ಸಿ.ಶೈಲೇಂದ್ರ ಬಾಬು ಅವರು ಹಿಂಸಾಚಾರದಲ್ಲಿ ತೊಡಗುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News