ನೂಪುರ್ ಶರ್ಮಾ ಕುರಿತು ಹೇಳಿಕೆಗಾಗಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ವಿರುದ್ಧ ಟೀಕೆಗೆ ರಾಜಸ್ಥಾನ ಸಿಎಂ ಆಕ್ಷೇಪ‌

Update: 2022-07-17 13:47 GMT
Photo : Twitter

ಜೈಪುರ,ಜು.17: ಪ್ರವಾದಿ ಮುಹಮ್ಮದ್ ಅವರ ಕುರಿತು ನಿಂದನಾತ್ಮಕ ಹೇಳಿಕೆಗಳನ್ನು ನೀಡಿದ್ದ ಬಿಜೆಪಿ ನಾಯಕಿ ನೂಪುರ ಶರ್ಮಾರನ್ನು ತರಾಟೆಗೆತ್ತಿಕೊಂಡಿದ್ದ ಸರ್ವೋಚ್ಚ ನ್ಯಾಯಾಲಯದ ಪೀಠದ ಸದಸ್ಯರಾಗಿದ್ದ ಇಬ್ಬರು ನ್ಯಾಯಾಧೀಶರ ವಿರುದ್ಧ ಟೀಕೆಗಳ ಸುರಿಮಳೆಯನ್ನು ರಾಜಸ್ಥಾನ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರು ಆಕ್ಷೇಪಿಸಿದ್ದಾರೆ. ತನ್ನ ಅವಹೇಳನಕಾರಿ ಹೇಳಿಕೆಗಳು ದೇಶದ ಹಲವಾರು ಭಾಗಗಳಲ್ಲಿ ಹಿಂಸಾಚಾರ ಮತ್ತು ಅಶಾಂತಿಗೆ ಕಾರಣವಾದ ಬಳಿಕ ಶರ್ಮಾ ದೇಶದ ಕ್ಷಮೆಯನ್ನು ಯಾಚಿಸಬೇಕಿತ್ತು ಎಂದು ನ್ಯಾಯಮೂರ್ತಿಗಳಾದ ಜೆ.ಪಿ.ಪರ್ಡಿವಾಲಾ ಮತ್ತು ಸೂರ್ಯಕಾಂತ ಅವರು ಜು.1ರಂದು ವಿಚಾರಣೆ ಸಂದರ್ಭದಲ್ಲಿ ಮೌಖಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ದೇಶದಲ್ಲಿ ಸೃಷ್ಟಿಯಾಗಿರುವ ಉದ್ವಿಗ್ನತೆಗಳಿಗೆ ಶರ್ಮಾ ಅವರೇ ಸಂಪೂರ್ಣವಾಗಿ ಹೊಣೆಯಾಗಿದ್ದಾರೆ ಎಂದು ನ್ಯಾಯಾಧೀಶರು ಹೇಳಿದ್ದರು.

 ಶನಿವಾರ ಇಲ್ಲಿ ಅಖಿಲ ಭಾರತ ಕಾನೂನು ಸೇವೆಗಳ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಗೆಹ್ಲೋಟ್,ನ್ಯಾಯಾಧೀಶರು ತಮ್ಮ ತೀರ್ಪುಗಳಿಗಾಗಿ ದಾಳಿಗೊಳಗಾದರೆ ಅವರು ನಿರ್ಭೀತಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ನಿರೀಕ್ಷಿಸಲು ಹೇಗೆ ಸಾಧ್ಯ ಎಂದು ಕೇಂದ್ರ ಸರಕಾರವನ್ನು ಪ್ರಶ್ನಿಸಿದರು. ಭಾರತದ ಮುಖ್ಯ ನ್ಯಾಯಾಧೀಶ ಎನ್.ವಿ.ರಮಣ,ಕೇಂದ್ರ ಕಾನೂನು ಸಚಿವ ಕಿರಣ ರಿಜಿಜು ಹಾಗೂ ಸರ್ವೋಚ್ಚ ನ್ಯಾಯಾಲಯ ಮತ್ತು ರಾಜಸ್ಥಾನ ಉಚ್ಚ ನ್ಯಾಯಾಲಯದ ಇತರ ಹಿರಿಯ ನ್ಯಾಯಾಧೀಶರೂ ಸಭೆಯಲ್ಲಿ ಉಪಸ್ಥಿತರಿದ್ದರು.

  ‘ನ್ಯಾಯಾಂಗವನ್ನು ಗೌರವಿಸುವುದು ನಮ್ಮ ಕರ್ತವ್ಯವಾಗಿದೆ ’ಎಂದು ಹೇಳಿದ ಗೆಹ್ಲೋಟ್,ಇತ್ತೀಚಿಗೆ ನ್ಯಾಯಮೂರ್ತಿಗಳಾದ ಪರ್ಡಿವಾಲಾ ಮತ್ತು ಸೂರ್ಯಕಾಂತ ಅವರು ಏನೋ ಒಂದು ಮಾತನ್ನು ಹೇಳಿದ್ದರು. ಅದಕ್ಕಾಗಿ ಉಚ್ಚ ನ್ಯಾಯಾಲಯಗಳು ಮತ್ತು ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶರು,ಮಾಜಿ ಹಿರಿಯ ಸರಕಾರಿ ಅಧಿಕಾರಿಗಳು ಮತ್ತು ಇತರ ಹಲವರು ಸೇರಿದಂತೆ 116 ಜನರನ್ನು ಈ ಇಬ್ಬರು ನ್ಯಾಯಾಧೀಶರ ವಿರುದ್ಧ ಎತ್ತಿ ಕಟ್ಟಲಾಗಿತ್ತು. ಇದನ್ನು ಹೇಗೆ ನಿರ್ವಹಿಸಲಾಗಿತ್ತು ಮತ್ತು ಅದರಿಂದ ಸಮಸ್ಯೆಯನ್ನು ಹೇಗೆ ಸೃಷ್ಟಿಸಲಾಗಿತ್ತು ಎನ್ನುವುದು ತನಗೆ ಗೊತ್ತಿಲ್ಲ ಎಂದರು.

ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳನ್ನು ಏನನ್ನೋ ಗಮನಿಸಿದ್ದರು,ಆದರೆ ಈ ವಾತಾವರಣವನ್ನು ಸೃಷ್ಟಿಸಲಾಗಿತ್ತು ಎಂದು ಗೆಹ್ಲೋಟ್ ಹೇಳಿದರು.

ಶರ್ಮಾ ಕುರಿತು ಸರ್ವೋಚ್ಚ ನ್ಯಾಯಾಲಯದ ಅಭಿಪ್ರಾಯಗಳು ನ್ಯಾಯಾಂಗ ನೀತಿಗೆ ಅನುಗುಣವಾಗಿಲ್ಲ ಎಂದು ಮಾಜಿ ನ್ಯಾಯಾಧೀಶರು,ಮಾಜಿ ಅಧಿಕಾರಿಗಳು ಹಾಗೂ ಸಶಸ್ತ್ರ ಪಡೆಗಳ ನಿವೃತ್ತ ಅಧಿಕಾರಿಗಳು ಜು.4ರಂದು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರಿಗೆ ಬರೆದಿದ್ದ ಪತ್ರದಲ್ಲಿ ತಿಳಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News