ಕಸದ ತಳ್ಳುಗಾಡಿಯಲ್ಲಿ ಮೋದಿ, ಆದಿತ್ಯನಾಥ್‌ ಫೋಟೊ: ಉದ್ಯೋಗ ಕಳೆದುಕೊಂಡ ಬಡ ಕಾರ್ಮಿಕ

Update: 2022-07-17 14:08 GMT
Photo: Twitter

ಲಕ್ನೋ: ಉತ್ತರಪ್ರದೇಶದ ಮಥುರಾದಲ್ಲಿ ಕಸದ ಬಂಡಿಯನ್ನು ವ್ಯಕ್ತಿಯೊಬ್ಬ ತಳ್ಳುತ್ತಿರುವ ವೀಡಿಯೊ ವೈರಲ್‌ ಆಗಿದೆ. ಆ ತಳ್ಳುಗಾಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶ ಸಿಎಂ ಆದಿತ್ಯನಾಥ್‌ ರ ಫ್ರೇಮ್‌ ಹಾಕಿದ ಫೋಟೊಗಳಿದ್ದುದು ಸದ್ಯ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಬಲಪಂಥೀಯರು ಆಕ್ರೋಶ ವ್ಯಕ್ತಪಡಿಸಿದ ಕಾರಣ ವೀಡಿಯೊ ವೈರಲ್‌ ಆಗಿತ್ತು. ಬಳಿಕ ಪರಿಣಾಮವೆಂಬಂತೆ ಮುನ್ಸಿಪಲ್ ಕಾರ್ಪೊರೇಷನ್ ಉದ್ಯೋಗಿಯಾಗಿದ್ದ ಬಡ ವ್ಯಕ್ತಿ ಕೆಲಸ ಕಳೆದುಕೊಂಡಿದ್ದಾರೆ ಎಂದು ndtv.com ವರದಿ ಮಾಡಿದೆ.

"ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಅದು ಕಸದ ಬುಟ್ಟಿಯಲ್ಲಿತ್ತು, ಆದ್ದರಿಂದ ನಾನು ಅವುಗಳನ್ನು ನನ್ನ ಗಾಡಿಯಲ್ಲಿ ಹಾಕಿದ್ದೇನೆ" ಎಂದು ಅವರು ಮೆಲುದನಿಯಲ್ಲಿ ಹೇಳುವುದು ವೀಡಿಯೊದಲ್ಲಿ ಸೆರೆಯಾಗಿದೆ. ರಾಜಸ್ಥಾನದ ಆಲ್ವಾರ್‌ ನಿಂದ ಮಥುರಾಗೆ ತೀರ್ಥ ಯಾತ್ರೆಗೆಂದು ಆಗಮಿಸಿದ್ದ ಕೆಲ ವ್ಯಕ್ತಿಗಳು ಘಟನೆಯನ್ನು ಚಿತ್ರೀಕರಿಸಿ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದರು.

"ಇದರಲ್ಲಿ ಎಪಿಜೆ ಅಬ್ದುಲ್ ಕಲಾಂರವರ ಫೋಟೊ ಕೂಡಾ ಇದೆ ಎಂದು ವ್ಯಕ್ತಿಯೋರ್ವ ಹೇಳುತ್ತಿರುವುದು ವೀಡಿಯೊದಲ್ಲಿ ಸೆರೆಯಾಗಿದೆ. "ನಾವು ಈ ಫೋಟೊಗಳನ್ನು ನಮ್ಮೊಂದಿಗೆ ಆಲ್ವಾರ್‌ ಗೆ ಕೊಂಡೊಯ್ಯುತ್ತಿದ್ದೇವೆ. ಮೋದಿಜಿ ಮತ್ತು ಯೋಗೀಜಿ ಈ ದೇಶದ ಆತ್ಮ" ಎಂದು ಅವರು ಹೇಳಿದ್ದಾರೆ. 

ಟ್ವಿಟರ್‌ನಲ್ಲಿ ಹಲವರು ಈ ವಿಡಿಯೋ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಇದು ತಪ್ಪು... ಸಿಎಂ ಮತ್ತು ಪ್ರಧಾನಿ ಎನ್ನುವುದು ಸಾಂವಿಧಾನಿಕ ಸ್ಥಾನ ಮತ್ತು ಎಲ್ಲರೂ ಗೌರವಿಸಬೇಕು" ಎಂದು ಒಬ್ಬರು ಬರೆದಿದ್ದಾರೆ. ಕೆಲವರು ವ್ಯಕ್ತಿಯ ವಿರುದ್ಧ ಕ್ರಮ ಕೈಗೊಂಡಿರುವ ಕುರಿತು ಪ್ರಶ್ನಿಸಿದರು. "ಫೋಟೋಗಳು ಯಾರದ್ದಾದರೂ ಸರಿ ಅದು ಹಳೆಯದಾಗಬಹುದು ಮತ್ತು ಸವೆಯಬಹುದು. ಅಂತಹ ಹಳೆಯ ಫೋಟೋಗಳನ್ನು ವಿಲೇವಾರಿ ಮಾಡಲು ಏನಾದರೂ ಪ್ರಕ್ರಿಯೆ ಇದೆಯೇ" ಎಂದು ಒಬ್ಬ ಬಳಕೆದಾರರು ಪ್ರಶ್ನಿಸಿದ್ದಾರೆ. 

"ವ್ಯಕ್ತಿಯು ತನ್ನ ತಳ್ಳುಗಾಡಿಯಲ್ಲಿ ತಿಳಿಯದೆ ಫೋಟೋಗಳನ್ನು ಹಾಕಿದ್ದಾನೆ. ಅವನ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಮತ್ತು ತಕ್ಷಣದಿಂದಲೇ ಜಾರಿಗೆ ಬರುವಂತೆ ಆತನನ್ನು ಕೆಲಸದಿಂದ ತೆಗೆದು ಹಾಕಲಾಗಿದೆ" ಎಂದು ನಗರ ನಿಗಮ ಮಥುರಾ-ವೃಂದಾವನದ ಹೆಚ್ಚುವರಿ ಪುರಸಭೆಯ ಆಯುಕ್ತ ಸತ್ಯೇಂದ್ರ ಕುಮಾರ್ ತಿವಾರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News